janadhvani

Kannada Online News Paper

ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದಕ್ಕೆ ಕರ್ನಾಟಕದ ಜನರೇ ಸಾಕ್ಷಿ – ಸಿಎಂ ಸಿದ್ದರಾಮಯ್ಯ

ಎಂಆರ್‌ಐ/ಸಿಟಿ ಸ್ಕ್ಯಾನ್ ಸೌಲಭ್ಯಗಳನ್ನು ಜಿಲ್ಲಾ ಆಸ್ಪತ್ರೆಗಳಿಗೆ ವಿಸ್ತರಿಸುವ ಮೂಲಕ ಬಡ ರೋಗಿಗಳಿಗೆ ಉಚಿತ ಮತ್ತು ಉತ್ತಮ ಪರೀಕ್ಷೆ ಹಾಗೂ ಚಿಕಿತ್ಸಾ ಸೌಲಭ್ಯ

ಬೆಂಗಳೂರು: 77ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ಬಿಚ್ಚಿಟ್ಟರು.

ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಹಿಂದುಳಿದ ವರ್ಗದವರು, ಪಂಗಡದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು, ಕಾರ್ಮಿಕರು ಸೇರಿದಂತೆ ರೈತರನ್ನು ಒಳಗೊಡಂತೆ ಇತರ ಶೋಷಿತ ವರ್ಗದವರ ಶ್ರೇಯೋಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಸಂಪತ್ತಿನ ಸಂಗ್ರಹ ಮತ್ತು ಹಂಚಿಕೆ ಹಾಗೂ ಮರುಹಂಚಿಕೆಗಳಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುತ್ತಿದ್ದೇವೆ ಎಂದರು. ಅಭಿವೃದ್ಧಿಯೆ ಸ್ವಾತಂತ್ರ್ಯ ಎಂಬುದರಲ್ಲಿ ನಂಬಿಕೆಯಿಟ್ಟು ಈ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ ಎಂದು ನುಡಿದರು.

ಭಾಷಣದಲ್ಲಿ ಹಿಂದಿನ ಬಿಜೆಪಿ ಸರ್ಕಾರವನ್ನು ಪರೋಕ್ಷವಾಗಿ ಟೀಕೆ ಮಾಡಿದ ಸಿದ್ದರಾಮಯ್ಯ, ಶಾಂತಿಯುತ ಸಮಾಜವಿದ್ದರೆ ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ನಮ್ಮ ಜನರಿಗೆ ಅರ್ಥವಾಗಿರುವುದರಿಂದ ದುಷ್ಟರ ಆಟಗಳು ಬಹಳ ಕಾಲ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಜನರೇ ಸಾಬೀತು ಮಾಡಿದ್ದಾರೆ ಎಂದರು.

ಬೆಲೆ ಏರಿಕೆ, ನಿರುದ್ಯೋಗ, ಜಾತಿ-ಧರ್ಮಗಳ ಕಾರಣಕ್ಕಾಗಿ ತಾರತಮ್ಯ, ಭ್ರಷ್ಟಾಚಾರ ಮುಂತಾದ ಕಾರಣಗಳಿಗಾಗಿ ನಾಡಿನ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ರಾಜ್ಯದ ಅನೇಕ ಜಿಲ್ಲೆಗಳ ಜನರ ತಲಾದಾಯ ಹಿಂದೆ ಆಡಳಿತ ನಡೆಸಿದ್ದ ನಮ್ಮ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಆ ನಂತರದ ಅವಧಿಯಲ್ಲಿ ಏರಿಕೆಯಾಗದೆ ಬಡತನ ಇನ್ನಷ್ಟು ಹೆಚ್ಚುತ್ತಿರುವುದು ನಮ್ಮ ಗಮನಕ್ಕೆ ಬಂದಿತ್ತು. ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಿದ ನಮ್ಮ ಸರ್ಕಾರ ಜನರ ಆರ್ಥಿಕ, ಸಾಮಾಜಿಕ ಚೈತನ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಸಾರ್ವತ್ರಿಕ ಮೂಲ ಆದಾಯ ಎಂಬ ಹೊಸ ಆರ್ಥಿಕ ಪ್ರಮೇಯವನ್ನು ಅಳವಡಿಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಶಾಲಾ ಕೊಠಡಿಗಳ ನಿರ್ಮಾಣ, ದುರಸ್ತಿಗೆ 650 ಕೋಟಿ ರೂ. ಹಾಗೂ ಶಾಲಾ ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣವನ್ನು ಕೈಗೊಳ್ಳಲು 200 ಕೋಟಿ ರೂ. ಒದಗಿಸಲಾಗಿದೆ ಎಂದು ತಿಳಿಸಿದರು.

ಶಾಲಾ ಮಕ್ಕಳಿಗೆ ವಾರಕ್ಕೆ ಎರಡು ದಿನ ಮೊಟ್ಟೆ ನೀಡಲು ತೀರ್ಮಾನಿಸಲಾಗಿದೆ. ನಮ್ಮ 5 ವರ್ಷಗಳ ಅವಧಿಯಲ್ಲಿ ಅಗತ್ಯ ಇರುವವರಿಗೆ ಸೂರು ನೀಡಲು ಯೋಜಿಸಿದ್ದೇವೆ. ಸರ್ಕಾರಿ ಬಸ್ಸುಗಳ ಟ್ರ್ಯಾಕಿಂಗ್ ವ್ಯವಸ್ಥೆ, ಪ್ಯಾನಿಕ್ ಬಟನ್‌ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದ ಅವರು, ಅಗತ್ಯ ಇರುವೆಡೆ ಹೊಸ ಬಸ್ಸುಗಳನ್ನು ಒದಗಿಸಲು ಸಿದ್ಧರಿದ್ದೇವೆ ಎಂದರು.

ಇನ್ನೂ ಇದರ ಜೊತೆಗೆ ಕೃಷಿ ಕ್ಷೇತ್ರದ ಬಲವರ್ಧನೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್ ಕೇಂದ್ರಗಳನ್ನು ಬಲ ಪಡಿಸಲಾಗುವುದು ಎಂದು ಹೇಳಿದರು. ಜೊತೆಗೆ ಎಂಆರ್‌ಐ/ಸಿಟಿ ಸ್ಕ್ಯಾನ್ ಸೌಲಭ್ಯಗಳನ್ನು ಜಿಲ್ಲಾ ಆಸ್ಪತ್ರೆಗಳಿಗೆ ವಿಸ್ತರಿಸುವ ಮೂಲಕ ಬಡ ರೋಗಿಗಳಿಗೆ ಉಚಿತ ಮತ್ತು ಉತ್ತಮ ಪರೀಕ್ಷೆ ಹಾಗೂ ಚಿಕಿತ್ಸಾ ಸೌಲಭ್ಯ ನೀಡಲಾಗುವುದು ಎಂದು ಸಿಎಂ ತಮ್ಮ ಭಾಷಣದಲ್ಲಿ ರಾಜ್ಯದ ಜನರಿಗೆ ತಿಳಿಸಿದರು.

error: Content is protected !! Not allowed copy content from janadhvani.com