janadhvani

Kannada Online News Paper

ಚಾಟ್‌ಗಳಲ್ಲಿ ಹೃದಯದ ಎಮೋಜಿ ಕಳಿಸುವುದು ಈ ಗಲ್ಫ್ ದೇಶಗಳಲ್ಲಿ ಗಂಭೀರ ಅಪರಾಧ

ಸೌದಿ ಅರೇಬಿಯಾ ಮತ್ತು ಕುವೈತ್, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರಿಗೆ ಹೃದಯದ ಎಮೋಜಿ ಕಳಿಸುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ

ರಿಯಾದ್/ ಕುವೈತ್ ಸಿಟಿ: ನವ ಮಾಧ್ಯಮದ ಯುಗದಲ್ಲಿ ಹೆಚ್ಚಿನ ಜನರು ‘ಹೃದಯವನ್ನು ಬೆರಳುಗಳಿಂದ ರವಾನಿಸುತ್ತಾರೆ’. ನೀವು ಈ ದೇಶಗಳಲ್ಲಿ ವಾಸಿಸುತ್ತಿದ್ದರೆ, WhatsApp ಚಾಟ್‌ಗಳಲ್ಲಿ ಸಂತೋಷ, ದುಃಖ, ಪ್ರೀತಿ ಮತ್ತು ಕೋಪವನ್ನು ವ್ಯಕ್ತಪಡಿಸಲು ಎಮೋಜಿಗಳನ್ನು ಬಳಸುವುದಾದಲ್ಲಿ ಇದನ್ನು ಗಮನಿಸಬೇಕಾಗಿದೆ.

ಸೌದಿ ಅರೇಬಿಯಾ ಮತ್ತು ಕುವೈತ್, ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರಿಗೆ ಹೃದಯದ ಎಮೋಜಿ ಕಳಿಸುವವರ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ವಾಟ್ಸಾಪ್ ಅಥವಾ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಹುಡುಗಿಯರಿಗೆ ಹೃದಯದ ಎಮೋಜಿಗಳನ್ನು ಕಳುಹಿಸುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ಕುವೈತ್ ಘೋಷಿಸಿದೆ.

ಈ ಅಪರಾಧಕ್ಕಾಗಿ ಸಿಕ್ಕಿಬಿದ್ದವರು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 2,000 ಕುವೈತ್ ದಿನಾರ್‌ಗಳ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಕುವೈತ್ ವಕೀಲರನ್ನು ಉಲ್ಲೇಖಿಸಿ “ಗಲ್ಫ್ ನ್ಯೂಸ್” ವರದಿ ಮಾಡಿದೆ.

ಸೌದಿ ಅರೇಬಿಯಾ ಕೂಡ ಇದೇ ರೀತಿಯ ಎಚ್ಚರಿಕೆ ನೀಡಿದೆ. ವಾಟ್ಸಾಪ್ ಮೂಲಕ ಕೆಂಪು ಹೃದಯದ ಎಮೋಜಿಯನ್ನು ಕಳುಹಿಸುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು. ಸೌದಿ ಕಾನೂನಿನ ಪ್ರಕಾರ, ಅಂತಹ ಅಪರಾಧಗಳಿಗೆ ಸಿಕ್ಕಿಬಿದ್ದವರಿಗೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರಿಯಾಲ್ ದಂಡ ವಿಧಿಸಲಾಗುತ್ತದೆ.

ದೇಶದ ಅಧಿಕಾರ ವ್ಯಾಪ್ತಿಯಲ್ಲಿ ಇಂತಹ ಎಮೋಜಿಗಳನ್ನು ಕಳುಹಿಸುವುದು ಕಿರುಕುಳದ ವ್ಯಾಪ್ತಿಗೆ ಬರುತ್ತದೆ ಎಂದು ಸೌದಿ ಸೈಬರ್ ಕ್ರೈಮ್ ಇಲಾಖೆ ಸ್ಪಷ್ಟಪಡಿಸಿದೆ. ಅಂತಹ ಎಮೋಜಿಗಳನ್ನು ಪಡೆದ ಮಹಿಳೆಯರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಅಪರಾಧವನ್ನು ಪುನರಾವರ್ತಿಸಿದರೆ, 300,000 ರಿಯಾಲ್‌ಗಳವರೆಗೆ ದಂಡ ಮತ್ತು ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗಲಿದೆ.

error: Content is protected !! Not allowed copy content from janadhvani.com