janadhvani

Kannada Online News Paper

ಮಲೇಶಿಯನ್ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಸ್ವೀಕಾರ- ಇಂಡಿಯನ್ ಗ್ರ್ಯಾಂಡ್ ಮುಫ್ತಿಗೆ ಅದ್ದೂರಿ ಸ್ವಾಗತ

ಮಲೇಷ್ಯಾ ಸರ್ಕಾರದ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಬೆಳಿಗ್ಗೆ 8.17 ಕ್ಕೆ ಕಾಂತಪುರಂ ಉಸ್ತಾದ್ ಕರಿಪೂರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು

ಕೋಝಿಕ್ಕೋಡ್ |ಮಲೇಶಿಯನ್
ಸರ್ಕಾರದ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸಿ ಹಿಂದಿರುಗಿದ ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ನೇತೃತ್ವದಲ್ಲಿ ಕರಿಪೂರ್ ವಿಮಾನ ನಿಲ್ದಾಣದಲ್ಲಿ ಸುನ್ನಿ ಕಾರ್ಯಕರ್ತರು
ಉಸ್ತಾದ್ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಮಲೇಷ್ಯಾ ಸರ್ಕಾರದ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಬೆಳಿಗ್ಗೆ 8.17 ಕ್ಕೆ ಕಾಂತಪುರಂ ಉಸ್ತಾದ್ ಕರಿಪೂರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಬೆಳಗ್ಗೆ 6 ಗಂಟೆಯಿಂದಲೇ ಕಾಂತಪುರಂ ಉಸ್ತಾದ್ ಅವರನ್ನು ಸ್ವಾಗತಿಸಲು ಅಪಾರ ಜನಸ್ತೋಮವೇ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು.

ವಿಮಾನದಿಂದ ಇಳಿದು ಇಮಿಗ್ರೇಷನ್ ಪ್ರಕ್ರಿಯೆಗಳನ್ನು ಮುಗಿಸಿ ಒಂಬತ್ತು ಗಂಟೆಗೆ ವಿಮಾನ ನಿಲ್ದಾಣದಿಂದ ಹೊರಬಂದ ಅವರನ್ನು ಜನರು ತಕ್ಬೀರ್ ಧ್ವನಿಗಳೊಂದಿಗೆ ಸ್ವಾಗತಿಸಿದರು.

ಸಮಸ್ತ ಕೇರಳ ಜಮ್ಇಯ್ಯತುಲ್ ಉಲಮಾ ಅಧ್ಯಕ್ಷರಾದ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್, ಸಯ್ಯಿದ್ ಅಲಿ ಬಾಫಕಿ ತಂಙಳ್, ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಮತ್ತು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮೊದಲಾದ ಮುಖಂಡರು ಸೇರಿ ಕಾಂತಪುರಂ ಉಸ್ತಾದರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು.

ನಂತರ ನೂರಾರು ವಾಹನಗಳ ಬೆಂಗಾವಲಿನೊಂದಿಗೆ ಕೋಝಿಕ್ಕೋಡ್ ನಗರಕ್ಕೆ ಕರೆದೊಯ್ಯಲಾಯಿತು. ಕಾಂತಪುರಂ ಉಸ್ತಾದರಿಗೆ ಇಂದು ಸಂಜೆ ಕೋಝಿಕ್ಕೋಡ್‌ನಲ್ಲಿ ಪೌರ ಸನ್ಮಾನವನ್ನು ಕೂಡ ಆಯೋಜಿಸುಲಾಗಿದೆ. ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಾಮಾಜಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಧಾರ್ಮಿಕ ವಿದ್ವಾಂಸರಿಗೆ ಹಿಜ್ರಾ ವರ್ಷದ ಆರಂಭದಲ್ಲಿ ಮಲೇಷ್ಯಾ ಸರ್ಕಾರ ನೀಡುತ್ತಿರುವ ಅತ್ಯುನ್ನತ ಪ್ರಶಸ್ತಿಯನ್ನು ಕಳೆದ ದಿನ, ಮಲೇಷಿಯಾದ ರಾಜ ಅಲ್ ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮದ್ ಷಾ ಅವರು ಕಾಂತಪುರಂ ಉಸ್ತಾದರಿಗೆ ಪ್ರದಾನ ಮಾಡಿದರು.
ಈ ಪ್ರಶಸ್ತಿಯು, ಜಾಗತಿಕ ಇಸ್ಲಾಮಿಕ್ ವೇದಿಕೆಗಳಲ್ಲಿ ನಿರಂತರ ಉಪಸ್ಥಿತಿಯಲ್ಲಿರುವ ಕಾಂತಪುರಂ ಅವರ ಆರು ದಶಕಗಳ ಸುದೀರ್ಘ ಸಾಮಾಜಿಕ ಕಾರ್ಯಕ್ಕೆ ಮನ್ನಣೆಯಾಗಿದೆ.

error: Content is protected !! Not allowed copy content from janadhvani.com