janadhvani

Kannada Online News Paper

ಗುಜರಾತಿನಲ್ಲಿ ರೇಪಿಸ್ಟ್ ಗಳನ್ನು ರಕ್ಷಿಸಿದವರು ಮಣಿಪುರದಲ್ಲಿ ಶಿಕ್ಷಿಸುತ್ತಾರ..?

ಗುಜರಾತಿನ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ ಹೊರಗೆ ಕರೆದು ತಂದದ್ದು ಇವರೇ ಅಲ್ವಾ ?

✍🏼ರಮೀಝ್ ಜೌಹರಿ ಕಾರ್ಕಳ

ಮಣಿಪುರದ ಬಗ್ಗೆ ಪ್ರಧಾನಿ ಮೋದಿ ಅವರು ತುಟಿ ಬಿಚ್ಚಿದ್ದಾರೆ. ಮೋದಿ ಅವರ ಬಾಯಲ್ಲಿ ಕೊನೆಗೂ ಮಣಿಪುರ ಎಂಬ ಶಬ್ದ ಹೊರ ಬಂದಿದೆ. ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಲೈಂಗಿಕ ಕಿರುಕುಳ ಕೊಟ್ಟಿರುವ ನೀಚ ಕೃತ್ಯದ ವಿರುದ್ಧ ಮೋದಿಯವರು ಸಿಟ್ಟಾಗಿದ್ದಾರೆ.

ಮಣಿಪುರದಲ್ಲಿ ನಡೆದ ಈ ಘಟನೆ ಮೋದಿಯವರಿಗೆ ಎಷ್ಟು ಆಕ್ರೋಶ ತರಿಸಿದೆ ಎಂದರೆ; ತಪ್ಪು ಮಾಡಿದ ಒಬ್ಬರನ್ನೂ ಬಿಡಲ್ಲ ಎಂದು ಕ್ಯಾಮರ ಮುಂದೆ ಗುಡುಗಿದ್ದಾರೆ‌.
ಮೋದಿ ಅವರ ಈ ಮಾತಿಗೆ ಭಕ್ತರ ಚಪ್ಪಾಳೆಗಳ, ಮಹಾಪೂರವಾಗುತ್ತಿದೆ.
ವಾವ್ ಮೋದಿಜಿ ವಾವ್ ಎಂದು ಗುಣಗಾನ ಮಾಡುತ್ತಿದ್ದಾರೆ. ಮೋದಿಯವರ ಗಾನ ಬಜಾನ ಮಾಡಿಕೊಂಡು ಬಂದ ಮಾಧ್ಯಮಗಳು ಮೋದಿಯವರ ಈ ಡೈಲಾಗ್ಗೆ ಫಿದಾ ಆಗಿದ್ದಾರೆ. ದಿನವಿಡೀ ಮೋದಿಯವರ ಬೈಟುಗಳನ್ನು ತೋರಿಸುತ್ತಾ ಇದೆ.

ಎಂಥಾ ಕೇಡು ಕಾಲ ಬಂತು ನೋಡಿ ನಮ್ಮ ದೇಶಕ್ಕೆ. ಬೆಂಕಿಯಲ್ಲಿ ಬೇಯುತ್ತಿರುವ ಮಣಿಪುರದ ಬಗ್ಗೆ ನಮ್ಮ ಪ್ರಧಾನಿ ಮಂತ್ರಿಗೆ ಬಾಯಿ ತೆರೆಯಲು ಮಣಿಪುರದ ಎರಡು ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ಹೊರ ಬರಬೇಕಾಯಿತು. ಜಾಗತಿಕವಾಗಿ ಚರ್ಚೆ ಆಗಬೇಕಾಯಿತು; ಜಗತ್ತು ಭಾರತವನ್ನು ಪ್ರಶ್ನಿಸತೊಡಗಬೇಕಾಯಿತು.
ಇಷ್ಟು ಆಗದೇ ಹೋದಲ್ಲಿ, ಮೋದಿ ಅವರ ಬಾಯಲ್ಲಿ ಮಣಿಪುರ ಎಂಬ ಪದಕ್ಕೆ ಇರುವ ನಿಷೇಧ ಇನ್ನೂ ಮುಂದುವರೆಯುತ್ತಿತ್ತು.

ಮಣಿಪುರದಲ್ಲಿ ಹಿಂಸಾಚಾರ ಶುರುವಾಗಿ ತಿಂಗಳು ಎರಡು ಕಳೆಯಿತು. ಇಡೀ ರಾಜ್ಯ ಹಿಂಸೆಯಲ್ಲಿ ತತ್ತರಿಸಿ ಹೋಗಿದೆ. ಹಿಂಸೆಯಲ್ಲಿ 140ಕ್ಕೂ ಅಧಿಕ ಮಂದಿಯು ಕೊಲೆಗೀಡಾದರು.
ನೂರಾರು ಜನರು ಗಾಯಗೊಂಡಿದ್ದಾರೆ ಸಾವಿರಾರು ಮನೆಗಳನ್ನು ನೂರಾರು ಧಾರ್ಮಿಕ ತಾಣಗಳನ್ನು ಸುಟ್ಟು ಬಸ್ಮ ಮಾಡಲಾಗಿದೆ.
ಐವತ್ತು ಸಾವಿರಕ್ಕೂ ಅಧಿಕ ಜನರು ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಷ್ಟೆಲ್ಲ ಹಿಂಸೆ ನಡೆದಾಗಲೂ ಪ್ರಧಾನಿ ಅವರ ಬಾಯಲ್ಲಿ ಮಣಿಪುರ ಅನ್ನೋ ಒಂದು ಪದ ಹೊರ ಬರಲೇ ಇಲ್ಲ.ಹಿಂಸೆಯಲ್ಲಿ ನರಳುತ್ತಿರುವ ಮಣಿಪುರಕ್ಕೆ ಹೋಗಿ ಬರಲು ಪ್ರಧಾನಿಯವರಿಗೆ ಸಮಯ ಸಿಕ್ಕಿಲ್ಲ. ಸಂತ್ರಸ್ತರಿಕೆ ಧೈರ್ಯ ತುಂಬುವ ಒಂದು ಕೆಲಸವನ್ನಾಗಲಿ ಮಾತನ್ನಾಗಲಿ ಮೋದಿಯವರು ಮಾಡಲಿಲ್ಲ.

ಮಣಿಪುರ ಹೊತ್ತಿ ಉರಿಯುತ್ತಿರುವಾಗ ನಮ್ಮ ಪ್ರಧಾನ ಮಂತ್ರಿಗಳು ಕರ್ನಾಟಕ ಚುನಾವಣೆಯ ರೋಡ್ ಶೋ ಮಾಡುವ ಬಿಝಿಯಲ್ಲಿದ್ರು.
ನಂತರ ಅಮೆರಿಕ. ಈಜಿಪ್ಟ್, ಫ್ರಾನ್ಸ್, ಪ್ರವಾಸ ಮಾಡಿ ಬಂದು, ಅಲ್ಲಿ ಡೈಮಂಡ್ ರಿಂಗ್ ಗಿಫ್ಟ್ ಕೊಡುವ ಬಿಝಿ ಯಲ್ಲಿದ್ದರು. ಅಲ್ಲದೇ ದೇಶದ ಹಲವು ರಾಜ್ಯಗಳಿಗೆ ಭೇಟಿ ಕೊಟ್ಟರು.
ಮಳೆಯಲ್ಲಿ ರೋಡ್ ಶೋಗೆ ಫೋಸ್ ಕೊಟ್ಟರು.
ಇದಕ್ಕೆಲ್ಲಾ ನಮ್ಮ ಪ್ರಧಾನಿಗೆ ಸಮಯ ತೊಡಕಾಗಿಲ್ಲ. ಆದರೆ ಮಣಿಪುರಕ್ಕೆ ಹೋಗಿ ಬರಲು ಅಲ್ಲಿಯ ಜನರಿಗೆ ಸಾಂತ್ವನ ಹೇಳಲು ಧೈರ್ಯ ತುಂಬಲು ನಮ್ಮ ಪ್ರಧಾನಿಗೆ, ಜಾಗತಿಕ ಮಟ್ಟದ ವ್ಯಾಪಕ ಚರ್ಚೆ ಬೇಕಾಯಿತು.

ಎರಡು ತಿಂಗಳುಗಳ ನಂತರ ‘ಮಣಿಪುರ’ ಎಂಬ ಪದ ಹೊರಬಿದ್ದಿದೆ. ಮಣಿಪುರದ ಬಗ್ಗೆ ಮಾತನಾಡುತ್ತಾ ನಮ್ಮ ಪ್ರಧಾನಿಗಳು ಹೇಳುತ್ತಾರೆ, ನನಗೆ ತುಂಬಾ ಬೇಸರವಾಗುತ್ತಿದೆ ನನ್ನ ಹೃದಯದಲ್ಲಿ ಕೋಪ ಅಚ್ಚೊತ್ತಿದೆ ಎಂದರು.
ಅಪರಾಧಿಗಳು ಎಲ್ಲಿ ಇದ್ದರೂ ಕೂಡ ನಾನು ಬಿಡುವುದಿಲ್ಲ ಎಂದರು.
ಮೋದಿಯವರ ಈ ಮಾತು ಕೇಳಿ ಸಂತೋಷ ಪಡಬೇಕೋ ಅಥವಾ ದುಃಖ ಪಡಬೇಕೋ ಅಥವಾ ಬಾಯಿ ಬಡ್ಕೊಂಡ್ ಇರಬೇಕು ಎಂದು ಗೊತ್ತಾಗುತ್ತಿಲ್ಲ.

ಅಪರಾಧಿ ಎಲ್ಲಿ ಇದ್ದರೂ ಬಿಡಲ್ಲ ಎನ್ನುತ್ತಿದ್ದಾರಲ್ಲ ಇವರು ಯಾವ ಮುಖ ತೋರಿಸಿ ಈ ಮಾತನ್ನು ಹೇಳುತ್ತಿದ್ದಾರೆ?
ಗುಜರಾತಿನ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ ಹೊರಗೆ ಕರೆದು ತಂದದ್ದು ಇವರೇ ಅಲ್ವಾ ?
2002ರಲ್ಲಿ ಬಲ್ಕಿಸ್ ಬಾನು ಎಂಬ ಅಮಾಯಕಿ ಒಬ್ಬಳನ್ನು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಆಕೆಯ ಕುಟುಂಬದವರನ್ನು ಕೊಂದು ಹಾಕಿದಂತಹ ಅತ್ಯಾಚಾರಿಗಳಿಗೆ ಈ ದೇಶದ ನ್ಯಾಯ ವ್ಯವಸ್ಥೆ ಜೀವಾವಧಿ ಶಿಕ್ಷೆ ಕೊಟ್ಟಿತ್ತು. ಆ ಪಾಪಿಗಳು ಎಲ್ಲರೂ ಜೀವನಪೂರ್ತಿ ಜೈಲಿನಲ್ಲಿ ಕೊಳೆಯಬೇಕಾಗಿತ್ತು. ಆದ್ರೆ ಅವರನ್ನೆಲ್ಲ ಜೈಲಿನಿಂದ ಬಿಡುಗಡೆ ಮಾಡಿದ್ದು ಇದೇ ಮೋದಿಯವರ ಬಿಜೆಪಿ ಸರ್ಕಾರ ಅಲ್ವೇ ?

ಮಣಿಪುರದಲ್ಲಿ ನಡೆದದ್ದು ಎಷ್ಟು ಹೀನ ಕೃತ್ಯವೋ ಅದಕ್ಕಿಂತ 10 ಪಟ್ಟು ಜಾಸ್ತಿ ಬಲ್ಕಿಸ್ ಬಾನು ಮತ್ತು ಅವಳ ಕುಟುಂಬದ ಮೇಲೆ ದೌರ್ಜನ್ಯ ನಡೆದಿತ್ತು.
ಆವಾಗ ಇದೇ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದರು.
ಅವರ ಮೂಗಿನ ಅಡಿಯಲ್ಲಿ ಇದೆಲ್ಲ ನಡೆದಿತ್ತು.
ಈಗಲೂ ಅಲ್ಲಿ ಬಿಜೆಪಿ ಸರಕಾರವಿದೆ ಗುಜರಾತಿನ ಬಿಜೆಪಿ ಸರಕಾರವು 11 ಮಂದಿ ಅತ್ಯಾಚಾರಿ ಕೊಲೆಗಡುಕರನ್ನು ಜೈಲಿನಿಂದ ಬಿಡುಗಡೆ ಮಾಡುವಾಗ ಮೋದಿಯವರು ಒಂದು ಶಬ್ದ ಮಾತನಾಡಲಿಲ್ಲ.ಅಂದರೆ, ಇದರಲ್ಲಿ ಮೋದಿಯವರ ಪಾತ್ರವೂ ಇದೆ ಎಂಬುವುದು ಅಲ್ಲಗೆಳೆಯುವಂತಿಲ್ಲ. ಅಲ್ವಾ ?

ಮಣಿಪುರದಲ್ಲೂ ಅಷ್ಟೇ, ಅಲ್ಲೂ ಕೂಡ ಬಿಜೆಪಿ ಸರಕಾರ ಇದೆ ಕೇಂದ್ರದಲ್ಲೂ ಸಹ !!. ಇಷ್ಟು ದಿನ ಮಣಿಪುರ ಬೆಂಕಿಯಲ್ಲಿ ಉರಿಯುತ್ತಿರುವಾಗ ಇವರೆಲ್ಲಾ ನಿಂತು ವೀಕ್ಷಕರಾಗಿದ್ದರು.
ಹಿಂಸೆಯಲ್ಲಿ ರಾಜ್ಯಕೀಯ ಲಾಭದ ಲೆಕ್ಕಾಚಾರ ಹಾಕುತ್ತಿದ್ದರು. ಎಷ್ಟೇ ಹೆಣ ಬಿದ್ದರೂ ಮನೆ ಸುಟ್ಟು ಹೋದರು ಇವರು ಕ್ಯಾರೆ ಮಾಡುತ್ತಿರಲಿಲ್ಲ.

ಕನಿಷ್ಠ ಪಕ್ಷ, ಸಣ್ಣದೊಂದು ರಾಜ್ಯದಲ್ಲಿ ಗಲಭೆಗಳು ನಡೆಯುತ್ತಿರುವಾಗ ಅದನ್ನು ತಡೆಯಲು ಇವರಿಗೆ ಸಾಧ್ಯವಿತ್ತು. ಆದರೆ, ಅವರು ಅದನ್ನು ಮಾಡಲಿಲ್ಲ.
ನಮ್ಮ ಪ್ರಧಾನಿ ಮೋದಿಯವರ ಕೈಯಲ್ಲಿ ನಮ್ಮ ದೇಶ ಭದ್ರವಾಗಿದೆ ಎಂದು ಹೇಳುತ್ತಿದ್ದವರು ಕೂಡ ಮಣಿಪುರದ ಬಗ್ಗೆ ಒಂದು ಮಾತನ್ನು ಎತ್ತಲಿಲ್ಲ.
ಈಗ ಭಾರತದ ಮಾನ ಕಳೆಯುವ ಒಂದು ವಿಡಿಯೋ ಹೊರ ಬಂದಾಗ ಬೇರೆ ಆಯ್ಕೆ ಇಲ್ಲದೆ ನಮ್ಮ ಪ್ರಧಾನ ಮಂತ್ರಿಗಳು ಬಾಯಿಯನ್ನು ತೆರೆದಿದ್ದಾರೆ.

ವಿಶ್ವಗುರು ಎಂದು ಫೋಸ್ ಕೊಡುವವರಿಗೆ ಜಗತ್ತಿನ ಮುಂದೆ ಮುಖ ತೋರಿಸಬೇಕು ಅಲ್ವಾ.
ಈ ಕಾರಣದಿಂದಲೇ, ಅವರಿಗೆ ಮಣಿಪುರ ನೆನಪಾಗಿದೆ. ಅವರ ಹೃದಯ ಕಂಪಿಸಿದೆ. ಅಪರಾಧದ ಬಗ್ಗೆ ಸಿಟ್ಟು ಬಂದಿದೆ. ಅಪರಾಧಿಯನ್ನು ಶಿಕ್ಷಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಆದರೆ ಅತ್ಯಾಚಾರಿಗಳನ್ನು ಶಿಕ್ಷಿಸುವ ಬದಲು ರಕ್ಷಿಸುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಹಸಿ ಹಸಿಯಾಗಿ ಇರುವಾಗ ಇವರು ಅತ್ಯಾಚಾರಿಗಳನ್ನು ಶಿಕ್ಷಿಸುತ್ತಾರೆ ಅಂದರೆ ಅದನ್ನು ನಂಬಲು ಹೇಗೆ ಸಾಧ್ಯ ??
ಈ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ಪ್ರಜೆಯು ಇದರ ಬಗ್ಗೆ ಧ್ವನಿ ಎತ್ತಬೇಕಾಗಿದೆ…!

error: Content is protected !! Not allowed copy content from janadhvani.com