janadhvani

Kannada Online News Paper

ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಅತ್ಯಂತ ಖಂಡನೀಯ: ರಜ್ವಿ

ಚಿಕ್ಕಮಗಳೂರು: ಮಣಿಪುರದಲ್ಲಿ ಎರಡು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಘಟನೆ ಅತ್ಯಂತ ಖಂಡನಿಯ ಮತ್ತು ಅಮಾನವೀಯ ಮತ್ತು ಪೈಶಾಚಿಕ ಕೃತ್ಯ ಎಂದು ಜಿಲ್ಲಾ ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಯದರ್ಶಿಯಾದ ಆಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಮಣಿಪುರದಲ್ಲಿ ನಿರಂತರವಾಗಿ ಗಲಭೆಗಳು ನಡೆಯುತ್ತಿದ್ದು ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ ಸಾವಿರಾರು ಕುಟುಂಬಗಳು ಮನೆ ಮಠ ಕಳೆದುಕೊಂಡು ಇಡೀ ಊರೇ ಬಿಟ್ಟು ಪ್ರಾಣ ಉಳಿಸಲು ರಸ್ತೆಗಳಲ್ಲಿ ಮತ್ತು ನಿರ್ಜನ ಪ್ರದೇಶದಲ್ಲಿ ಜೀವನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಅನೇಕ ಹೆಣ್ಣು ಮಕ್ಕಳ ಮೇಲೆ ಬಹಿರಂಗವಾಗಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಧಕ್ಕೆವುಂಟಾಗಿದೆ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಮಾನ ಹರಾಜು ಆಗುತ್ತಿದೆ. ಇದರ ಮಧ್ಯೆ ಮಹಿಳೆಯರ ಮೇಲೆ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಲೇ ಇವೆ ಒಂದು ಮಹಿಳೆಗೆ ಮುಖದ ಮೇಲೆ ಗುಂಡಿಟ್ಟು ಕೊಲ್ಲಲಾಗಿದೆ.

ಇನ್ನೊಂದು ಕಡೆ ಇಡೀ ದೇಶವೇ ತಲೆತಗ್ಗಿಸುವಂತಹ ಘಟನೆ ನಡೆದಿದ್ದು, ಇಬ್ಬರು ಮಹಿಳೆಯರನ್ನು ಬೆತ್ತಲೆ ಗೊಳಿಸಿ ಮೆರವಣಿಗೆ ಮಾಡಲಾಗಿ ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಲ್ಲದೇ ಸಂತ್ರಸ್ತ ಮಹಿಳೆಯರ ಕುಟುಂಬಸ್ಥರನ್ನು ಅಮಾನವೀಯವಾಗಿ ಹಿಂಸಿಸಿ ಕೊಲ್ಲಲಾಗಿದೆ ಇಷ್ಟೆಲ್ಲಾ ಘಟನೆಗಳು ನಡೆದರೂ ಕೂಡ ಮಾನವ ಹಕ್ಕುಗಳ ಆಯೋಗ ಯಾವುದೇ ರೀತಿಯ ಕ್ರಮ ಜರುಗಿಸಲು ಮುಂದಾಗದಿರುವುದು ವಿಷಾದನೀಯ ಇದರೊಂದಿಗೆ ಕೇಂದ್ರ ಸರಕಾರ ಮೂಕ ಪ್ರೇಕ್ಷಕರಂತೆ ವರ್ತನೆ ಮಾಡುತ್ತಿರುವುದು ಅತ್ಯಂತ ಖಂಡನೀಯ ಮಣಿಪುರದ ರಾಜ್ಯ ಸರ್ಕಾರವು ಗಲಭೆಕೋರರ ಬೆಂಬಲಕ್ಕೆ ನಿಂತಂತಾಗಿದೆ ಎಂದು ಮೇಲ್ನೋಟಕ್ಕೆ ಗೋಚರಿಸುತ್ತಿದೆ.

ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅಲ್ಲಿನ ಸರಕಾರ ಸಂಪೂರ್ಣವಾಗಿ ವಿಫಲಗೊಂಡಿದೆ ಮಾನ್ಯ ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಆ ಸರ್ಕಾರವನ್ನು ವಜಾ ಗೊಳಿಸಬೇಕು. ಅಲ್ಲಿ ರಾಜ್ಯಪಾಲರ ಆಳ್ವಿಕೆ ತರಬೇಕು ಮತ್ತು ಶಾಂತಿ ಸುವ್ಯವಸ್ಥೆಗೆ ಅನುವು ಮಾಡಿಕೊಡಬೇಕು ಎಂದು ರಜ್ವಿ ಒತ್ತಾಯಿಸಿದ್ದಾರೆ.

ಈ ಹಿಂದೆ ದೇಶದ ರಾಜಧಾನಿ ದೆಹಲಿಯಲ್ಲಿ ಮಹಿಳಾ ಕ್ರೀಡಾಪಟುಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಪ್ರತಿಭಟನೆ ಮಾಡಿದರೂ ಸಹ ಆ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡದೆ ಮಹಿಳಾ ಕ್ರೀಡಪಟುಗಳು ನ್ಯಾಯದಿಂದ ವಂಚಿತರಾಗಿದ್ದಾರೆ ಹೀಗಿರುವಾಗ ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಮಹಿಳೆಯರು ಹೇಗೆ ಸುರಕ್ಷಿತರಾಗಿರಲು ಸಾಧ್ಯ? ಇವರ ಮೌನವೇ ಇನ್ನಷ್ಟು ಘಟನೆಗಳಿಗೆ ಪ್ರೇರಣೆ ಆಗುತ್ತಿದೆ. ದೇಶದ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಧಾನಮಂತ್ರಿಗಳು ಕೂಡಲೆ ಕ್ರಮ ವಹಿಸಿ ಮಣಿಪುರದ
ಗಲಭೆಕೋರರನ್ನು ಮಟ್ಟ ಹಾಕಲು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕೆಂದು ಒತ್ತಾಯ ಪೂರಕವಾಗಿ ಮನವಿ
ಮಾಡಲಾಗುವುದು ಎಂದು ತಿಳಿಸಿದ್ದಾರೆ.

error: Content is protected !! Not allowed copy content from janadhvani.com