ಕೌಲಾಲಂಪುರ್ | ಮಲೇಷ್ಯಾ ನೆಲದಲ್ಲಿ ಭಾರತೀಯರ ಮಟ್ಟಿಗೆ ಹೆಮ್ಮೆಯ ಕ್ಷಣ. ಜಾಗತಿಕ ಮುಸ್ಲಿಂ ವಿದ್ವಾಂಸರಿಗೆ ನೀಡಲಾಗುವ, ಮಲೇಷಿಯಾದ ಅತ್ಯುನ್ನತ ಗೌರವವಾದ ಹಿಜ್ರಾ ಪ್ರಶಸ್ತಿಯನ್ನು ಭಾರತೀಯ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಅವರಿಗೆ ಪ್ರದಾನ ಮಾಡಲಾಯಿತು.
ಕೌಲಾಲಂಪುರ್ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮಲೇಷಿಯಾದ ದೊರೆ ಅಲ್-ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮದ್ ಶಾ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಧಾನ ಮಂತ್ರಿ ಅನ್ವರ್ ಇಬ್ರಾಹಿಂ, ಧಾರ್ಮಿಕ ವ್ಯವಹಾರಗಳ ಸಚಿವ ಡಾ. ಮುಹಮ್ಮದ್ ನಹೀಮ್ ಬಿನ್ ಮುಖ್ತಾರ್, ರಾಜಮನೆತನದ ಸದಸ್ಯರು ಮತ್ತು ನಾಗರಿಕ ಮುಖಂಡರ ಸಮ್ಮುಖದಲ್ಲಿ ಪ್ರಶಸ್ತಿಯನ್ನು ನೀಡಲಾಯಿತು.
ನಾಡಿನ ಪ್ರಮುಖ ವಿದ್ವಾಂಸರು, ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಕಿಕ್ಕಿರಿದ ಪ್ರೇಕ್ಷಕರು ಸಮಾರಂಭಕ್ಕೆ ಸಾಕ್ಷಿಯಾದರು.
ವಿಶ್ವ ಶಾಂತಿ ಮತ್ತು ಸೌಹಾರ್ದತೆಗಾಗಿ ಕೆಲಸ ಮಾಡುವ, ಜಗತ್ಪ್ರಸಿದ್ಧ ಮುಸ್ಲಿಂ ವಿದ್ವಾಂಸರಿಗೆ ಮಲೇಷಿಯಾ ಸರ್ಕಾರವು 2008 ರಿಂದ ಪ್ರತಿ ಹಿಜ್ರಾ ವರ್ಷಾರಂಭ ದಿನ ಈ ಪ್ರಶಸ್ತಿಯನ್ನು ನೀಡುತ್ತಿದೆ.
ಸಿರಿಯನ್ ವಿದ್ವಾಂಸ ಡಾ. ವಹಬಾ ಮುಸ್ತಫಾ ಅಲ್ ಸುಹೈಲಿ, ಅಲ್ ಅಝ್ಹರ್ ಗ್ರ್ಯಾಂಡ್ ಇಮಾಮ್ ಡಾ. ಅಹ್ಮದ್ ಮುಹಮ್ಮದ್ ಅಲ್ ತಯ್ಯಿಬ್, ಮುಸ್ಲಿಂ ವರ್ಲ್ಡ್ ಲೀಗ್‌ನ ಪ್ರಧಾನ ಕಾರ್ಯದರ್ಶಿ ಡಾ. ಶೈಖ್ ಮುಹಮ್ಮದ್ ಬಿನ್ ಅಬ್ದುಲ್ ಕರೀಮ್ ಅಲ್ ಇಝ್ಝ ಮತ್ತು ಇತರರು ಹಿಂದಿನ ವರ್ಷಗಳಲ್ಲಿ ಹಿಜ್ರಾ ಪ್ರಶಸ್ತಿಯನ್ನು ಪಡೆದ ಪ್ರಮುಖರಾಗಿದ್ದಾರೆ.
ಕಾಂತಪುರಂ ಉಸ್ತಾದರನ್ನು ಆಯ್ಕೆ ಮಾಡಲು ಕಾರಣವೇನು?
ದೇಶ-ವಿದೇಶಗಳಲ್ಲಿ ಇಸ್ಲಾಮಿನ ಸ್ನೇಹ ಸಂದೇಶವನ್ನು ಪಸರಿಸುವಲ್ಲಿ ಮತ್ತು ವಿವಿಧ ಧರ್ಮಗಳ ನಡುವೆ ಸೌಹಾರ್ದತೆಯನ್ನು ಸ್ಥಾಪಿಸುವಲ್ಲಿ ಕಾಂತಪುರಂ ಉಸ್ತಾದರು ನೀಡಿದ ಅಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಲೇಷ್ಯಾದ ಇಸ್ಲಾಮಿಕ್ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.
ಇಸ್ಲಾಮಿಕ್ ಜ್ಞಾನ ಮತ್ತು ಮೌಲ್ಯಗಳ ಆಳವಾದ ಜ್ಞಾನವನ್ನು ಹೊಂದಿರುವ ಆವರು, ಶಿಕ್ಷಣ, ಸಾಮಾಜಿಕ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಇಸ್ಲಾಮಿಕ್ ಬೋಧನೆಗಳನ್ನು ತಪ್ಪಾಗಿ ನಿರೂಪಿಸುವ ಸಮಯದಲ್ಲಿ, ಅವರು ನೈಜ ಸಂಗತಿಗಳಿಗೆ ಕಾರಣವಾಗುವ ಸಂಶೋಧನೆಗಳಲ್ಲಿ ತೊಡಗಿ, ಅವುಗಳನ್ನು ಪ್ರಚಾರ ಪಡಿಸುತ್ತಾರೆ ಮತ್ತು ತಮ್ಮ ಶಿಷ್ಯರಿಗೆ ಅವುಗಳನ್ನು ಬೋಧಿಸುತ್ತಾರೆ. ಕಾಂತಪುರಂ ಉಸ್ತಾದರು ನೇತೃತ್ವ ನೀಡುವ ಸಂಘಟನೆಗಳು ನಡೆಸುತ್ತಿರುವ ಸೇವಾ ಕಾರ್ಯಗಳು ಮಾದರಿಯಾಗಿದೆ ಎಂದು ಪ್ರಶಸ್ತಿ ಸಮಿತಿಯು ನಿರ್ಣಯಿಸಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಹಿಜ್ರಾ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತೀವ ಸಂತಸ ತಂದಿದ್ದು, ಇನ್ನಷ್ಟು ಕ್ಷೇತ್ರಗಳಿಗೆ ತಮ್ಮ ಕಾರ್ಯವನ್ನು ವಿಸ್ತರಿಸಲು ಪ್ರೇರಣೆಯಾಗಿದೆ ಎಂದರು. ಪ್ರಧಾನಮಂತ್ರಿಯವರ ಆಹ್ವಾನದ ಮೇರೆಗೆ ಐದು ದಿನಗಳ ಭೇಟಿಗಾಗಿ ಕಾಂತಪುರಂ ಉಸ್ತಾದರು ಸೋಮವಾರ ಮಲೇಷ್ಯಾಕ್ಕೆ ಆಗಮಿಸಿದ್ದಾರೆ. 22ರಂದು ಸಹೀಹುಲ್ ಬುಖಾರಿ ವಿದ್ವಾಂಸರ ಸಮಾವೇಶದಲ್ಲಿ ಭಾಗವಹಿಸುವರು.