janadhvani

Kannada Online News Paper

ಸೌದಿ ಅರೇಬಿಯಾದಲ್ಲಿ ವಿದೇಶೀಯರಿಗೂ ಆಸ್ತಿ ಖರೀದಿಸಲು ಅವಕಾಶ- ಹೊಸ ಕಾನೂನು ಶೀಘ್ರದಲ್ಲೇ ಪ್ರಕಟ

ಮಕ್ಕಾ ಮತ್ತು ಮದೀನಾ ಸೇರಿದಂತೆ ದೇಶದಲ್ಲಿ ಎಲ್ಲಿ ಬೇಕಾದರೂ ಆಸ್ತಿ ಹೊಂದಲು ವಿದೇಶಿಯರಿಗೆ ಅವಕಾಶ

ರಿಯಾದ್: ಸೌದಿ ಅರೇಬಿಯಾದಲ್ಲಿ ವಿದೇಶಿಯರಿಗೆ ಆಸ್ತಿ ಖರೀದಿಸಲು, ಇಟ್ಟುಕೊಳ್ಳಲು ಮತ್ತು ಮಾರಾಟ ಮಾಡಲು ಅವಕಾಶ ನೀಡುವ ಕಾನೂನನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ರಿಯಲ್ ಎಸ್ಟೇಟ್ ಜನರಲ್ ಅಥಾರಿಟಿ (REGA) ಸಿಇಒ ಅಬ್ದುಲ್ಲಾ ಅಲ್ ಹಮ್ಮಾದ್ ಹೇಳಿದ್ದಾರೆ.

ವಿದೇಶಿಯರಿಗೆ ರಿಯಲ್ ಎಸ್ಟೇಟ್ ಮಾಲೀಕತ್ವದ ಹಕ್ಕುಗಳನ್ನು ನೀಡುವ ಹೊಸ ಕಾನೂನು ಅಂತಿಮ ಹಂತದಲ್ಲಿದ್ದು, ಅಲ್ಪಾವಧಿಯಲ್ಲಿ ಪ್ರಕಟಿಸಲಾಗುವುದು ಎಂದು ‘ರೋಟಾನಾ ಖಲೀಜಿಯಾ’ ದೂರದರ್ಶನದ ಅಲ್-ಲಿವಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಲ್ ಹಮ್ಮಾದ್ ಹೇಳಿದರು.

ಪ್ರಸ್ತುತ ರಿಯಲ್ ಎಸ್ಟೇಟ್ ಮಾಲೀಕತ್ವದ ಕಾನೂನಿಗಿಂತ ಹೊಸ ಕಾನೂನು ವಿಶಾಲ ಮತ್ತು ಹೆಚ್ಚು ಸಮಗ್ರವಾಗಿರುತ್ತದೆ ಎಂದು ಅವರು ಸೂಚಿಸಿದರು. ವಿದೇಶಿಗರಿಗೆ ನಿಯಮಾನುಸಾರ ವಾಣಿಜ್ಯ, ವಸತಿ ಮತ್ತು ಕೃಷಿ ಕ್ಷೇತ್ರಗಳಲ್ಲಿ ಎಲ್ಲಾ ರೀತಿಯ ಆಸ್ತಿ ಹೊಂದಲು ಅವಕಾಶ ನೀಡಲಾಗುವುದು ಎಂದು ಪ್ರಾಧಿಕಾರದ ಮುಖ್ಯಸ್ಥರು ತಿಳಿಸಿದ್ದಾರೆ. ಮಕ್ಕಾ ಮತ್ತು ಮದೀನಾ ಸೇರಿದಂತೆ ದೇಶದಲ್ಲಿ ಎಲ್ಲಿ ಬೇಕಾದರೂ ಆಸ್ತಿ ಹೊಂದಲು ವಿದೇಶಿಯರಿಗೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

ವಿದೇಶಿ ಮಾಲೀಕತ್ವದ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಲು ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಮತ್ತು ಸ್ವೀಕಾರಾರ್ಹವಲ್ಲದ ಅಭ್ಯಾಸಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮಾನದಂಡಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಪ್ರಾಧಿಕಾರದ ಮುಖ್ಯಸ್ಥರು ಹೇಳಿದರು.

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಬೆಲೆ ಏರಿಕೆಯಿಂದ ನಮಗೆ ತೃಪ್ತಿ ಇಲ್ಲ ಎಂದಿರುವ ಅಲ್-ಹಮ್ಮಾದ್, ಈ ಕ್ಷೇತ್ರವು ಆರ್ಥಿಕ ಸಮತೋಲನ ಸಾಧಿಸಲು ಪ್ರಾಧಿಕಾರವು ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.

error: Content is protected !! Not allowed copy content from janadhvani.com