janadhvani

Kannada Online News Paper

ಜನರನ್ನು ಮರಳು ಮಾಡುವ ಪ್ರಣಾಳಿಕೆ- ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟೀಸ್

ಬೆಂಗಳೂರು: ‘ರಾಜಕೀಯ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡುವ ಮುನ್ನ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಬೇಕು ಮತ್ತು ಗೆದ್ದು ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ತಾವು ನೀಡುವ ಭರವಸೆ ಈಡೇರಿಸುವ ಪ್ರಮಾಣ ಮಾಡಬೇಕು. ಇದಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಆದೇಶಿಸುವಂತೆ ನಿರ್ದೇಶನ ನೀಡಬೇಕು’ ಎಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ ಸಂಬಂಧ ಭ್ರಷ್ಟಾಚಾರ ವಿರೋಧಿ ಭಾರತೀಯ ಮಂಡಳಿಯ ಅಧ್ಯಕ್ಷ ಹುಸೇನ್ ಮೊಯಿನ್‌ ಫರೂಕ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಎಸ್‌.ಸುನಿಲ್ ದತ್‌ ಯಾದವ್‌ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಕೇಂದ್ರ ಚುನಾವಣಾ ಆಯೋಗ ಹಾಗೂ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳ ಅಧ್ಯಕ್ಷರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ಅರ್ಜಿಯ ಮುಖ್ಯಾಂಶಗಳು

  • ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆಗಳು ಸಾರ್ವಜನಿಕರನ್ನು ಮರಳು ಮಾಡುವಂತಿರುತ್ತವೆ.
  • ಪ್ರಣಾಳಿಕೆಗಳಲ್ಲಿ ಸುಳ್ಳು ಭರವಸೆ ನೀಡಿ ಮತದಾರರನ್ನು ಮೋಸ ಮಾಡಲಾಗುತ್ತಿದೆ.
  • ಸಾರ್ವಜನಿಕರು ಹಾಗೂ ಮತದಾರರು ರಾಷ್ಟ್ರೀಯ ಮಾನ್ಯತೆ ಪಡೆದ ಪಕ್ಷಗಳ ಮೇಲೆ ನಂಬಿಕೆ ಕಳೆದುಕೊಂಡಿವೆ.
  • ಅಧಿಕಾರಕ್ಕೆ ಬಂದಮೇಲೆ ನೇತಾರರು ತಾವು ನೀಡಿದ ಭರವಸೆ ಮರೆತುಬಿಡುತ್ತಾರೆ. ಪಕ್ಷದ ಆಂತರಿಕ ಕಚ್ಚಾಟದಲ್ಲಿ ಮುಳುಗುತ್ತಾರೆ.
  • ಪ್ರತಿ ವರ್ಷದ ಬಜೆಟ್‌ನಲ್ಲಿ ಘೋಷಿಸುವ ಕಾರ್ಯಕ್ರಮಗಳಲ್ಲಿ ಶೇಕಡ 10ರಷ್ಟೂ ಜಾರಿಗೆ ಬರುವುದಿಲ್ಲ.
  • ಸಾರ್ವಜನಿಕರ ತೆರಿಗೆ ಹಣವನ್ನು ರಾಜಕಾರಣಿಗಳು ಲೂಟಿ ಮಾಡಿ ಕೋಟ್ಯಧಿಪತಿಗಳಾಗುತ್ತಿದ್ದಾರೆ.

ಆದ್ದರಿಂದ, ರಾಜಕೀಯ ಪಕ್ಷಗಳು ಕೋರ್ಟ್ ಮುಂದೆ ಪ್ರಮಾಣ ಪತ್ರ ಸಲ್ಲಿಸಬೇಕು‌. ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆ ಈಡೇರಿಸದೇ ಹೋದರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂಬುದು ಅರ್ಜಿದಾರರ ಕೋರಿಕೆ.

ರಜಕಾಲದ ನಂತರ ವಿಚಾರಣೆ ಮುಂದೂಡಲಾಗಿದೆ. ಅರ್ಜಿದಾರರ ಪರ ಬಿ.ಸುಧಾ ವಾದ ಮಂಡಿಸಿದರು.

error: Content is protected !! Not allowed copy content from janadhvani.com