janadhvani

Kannada Online News Paper

ವೀಸಾ ಅವಧಿ ಮುಗಿದು ದೇಶ ತೊರೆಯದವರಿಗೆ ಭವಿಷ್ಯದಲ್ಲಿ ಪ್ರವೇಶ ನಿರ್ಬಂಧ- ಟ್ರಾವೆಲ್ ಏಜೆನ್ಸಿಗಳ ಎಚ್ಚರಿಕೆ

ಟ್ರಾವೆಲ್ ಏಜೆನ್ಸಿಗಳ ಮೂಲಕ ಸಂದರ್ಶಕ ವೀಸಾದಲ್ಲಿ ಬರುವವರು, ವೀಸಾ ಅವಧಿ ಮುಗಿದ ನಂತರ ದೇಶದಲ್ಲಿ ಉಳಿದುಕೊಂಡರೆ ಏಜೆನ್ಸಿಗಳೂ ಜವಾಬ್ದಾರರಾಗಿರುತ್ತಾರೆ

ಅಬುಧಾಬಿ: ಸಂದರ್ಶಕ ವೀಸಾದಲ್ಲಿ(UAE Visit Visa) ಯುಎಇಗೆ ಪ್ರವೇಶಿಸುವ ಮತ್ತು ವೀಸಾ ಅವಧಿ ಮುಗಿದ ನಂತರ ದೇಶವನ್ನು ತೊರೆಯದವರಿಗೆ ಟ್ರಾವೆಲ್ ಏಜೆನ್ಸಿಗಳು ಎಚ್ಚರಿಕೆ ನೀಡಿವೆ. ಅಂತಹವರ ವಿರುದ್ಧ ಟ್ರಾವೆಲ್ ಏಜೆನ್ಸಿಗಳು ಮೊಕದ್ದಮೆ ದಾಖಲಿಸಲಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪರಿಣಾಮವಾಗಿ, ಸಂದರ್ಶಕರು ಕಪ್ಪುಪಟ್ಟಿಗೆ ಸೇರಬಹುದು ಮತ್ತು ಭವಿಷ್ಯದಲ್ಲಿ ಯುಎಇ ಅಥವಾ ಇತರ ಗಲ್ಫ್ ರಾಷ್ಟ್ರಗಳಿಗೆ ಪ್ರವೇಶಿಸದಂತೆ ನಿಷೇಧವನ್ನು ಎದುರಿಸಬೇಕಾಗುತ್ತದೆ ಎಂದು ವರದಿಗಳು ತಿಳಿಸಿವೆ. ವೀಸಾ ಅವಧಿ ಮುಗಿದ ಐದು ದಿನಗಳಲ್ಲಿ ದೇಶವನ್ನು ತೊರೆಯದವರು ಈ ಕ್ರಮಗಳಿಗೆ ಒಳಗಾಗಬೇಕಾಗುತ್ತದೆ.

ವೀಸಾ ಅವಧಿಯ ನಂತರ ಕನಿಷ್ಠ ಒಂದು ಹೆಚ್ಚುವರಿ ದಿನ ಯುಎಇಯಲ್ಲಿ ತಂಗುವವರನ್ನು ಇಂತಹ ಕ್ರಮಗಳಿಗೆ ಒಳಪಡಿಸಲಾಗುವುದು ಮತ್ತು ಈ ನಿಟ್ಟಿನಲ್ಲಿ ಬೇರೆ ಯಾವುದೇ ಎಚ್ಚರಿಕೆಗಳನ್ನು ನೀಡಲಾಗುವುದಿಲ್ಲ ಎಂಬುದಾಗಿದೆ ಟ್ರಾವೆಲ್ ಏಜೆನ್ಸಿಗಳ ನಿಲುವು. ಅಂತಹ ಪರಿಸ್ಥಿತಿಯನ್ನು ತಪ್ಪಿಸಲು,ಒಂದೋ ವೀಸಾವನ್ನು ನವೀಕರಿಸಬೇಕು ಅಥವಾ ದೇಶವನ್ನು ತೊರೆಯಬೇಕು ಎಂದು ಪ್ರಕಟಣೆ ತಿಳಿಸಿದೆ.

ಟ್ರಾವೆಲ್ ಏಜೆನ್ಸಿಗಳ ಮೂಲಕ ಸಂದರ್ಶಕ ವೀಸಾದಲ್ಲಿ ಬರುವವರು ತಮ್ಮ ಪ್ರಾಯೋಜಕತ್ವದಲ್ಲಿ ಇರುವುದರಿಂದ, ವೀಸಾ ಅವಧಿ ಮುಗಿದ ನಂತರ ಅವರು ದೇಶದಲ್ಲಿ ಉಳಿದುಕೊಂಡರೆ ಏಜೆನ್ಸಿಗಳೂ ಜವಾಬ್ದಾರರಾಗಿರುತ್ತಾರೆ ಮತ್ತು ಈ ಪರಿಸ್ಥಿತಿಯನ್ನು ತಪ್ಪಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಟ್ರಾವೆಲ್ ಏಜೆನ್ಸಿ ಸಿಬ್ಬಂದಿ ವಿವರಿಸುತ್ತಾರೆ.

ಅಧಿಕಾರಿಗಳು ಹೆಚ್ಚುವರಿ ದಿನಗಳ ವಾಸ್ತವ್ಯಕ್ಕಾಗಿ ಪ್ರಾಯೋಜಕರಿಗೆ ದಂಡವನ್ನು ವಿಧಿಸುತ್ತಾರೆ. ಈ ದಂಡದ ಮೊತ್ತವನ್ನು ಟ್ರಾವೆಲ್ ಏಜೆನ್ಸಿಗಳು ಸಂದರ್ಶಕರಿಂದ ಸಂಗ್ರಹಿಸುತ್ತಿದೆ. ದಂಡವನ್ನು ಪಾವತಿಸುವುದು ಮಾತ್ರವಲ್ಲದೆ, ಅವರ ಪ್ರಾಯೋಜಕರು ಸಮಯಕ್ಕೆ ಸರಿಯಾಗಿ ದೇಶವನ್ನು ತೊರೆಯದಿದ್ದರೆ ಪೋರ್ಟಲ್‌ನಲ್ಲಿ ನಂತರದ ವೀಸಾ ಅರ್ಜಿಗಳನ್ನು ಸಲ್ಲಿಸುವುದನ್ನು ನಿರ್ಬಂಧಿಸಲಾಗುತ್ತದೆ.

ಕ್ರಮಗಳು ಮೊದಲಿಗಿಂತ ಕಠಿಣವಾಗಿರುವ ಪರಿಸ್ಥಿತಿಯಲ್ಲಿ ಸಮಸ್ಯೆಗಳನ್ನು ತಪ್ಪಿಸಲು ಸಂದರ್ಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಟ್ರಾವೆಲ್ ಏಜೆನ್ಸಿಗಳು ವಿವರಿಸಿದೆ.

error: Content is protected !! Not allowed copy content from janadhvani.com