janadhvani

Kannada Online News Paper

ಮುಜಾಹಿದ್ ಗಳು ತಮ್ಮ ತಪ್ಪುಗಳನ್ನು ತಿದ್ದಲು ಸಿದ್ದರಾಗಬೇಕು- ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ತಂಙಳ್

ಭಯೋತ್ಪಾದನೆಯ ಮೂಲಕ ಮುಸ್ಲಿಂ ಯುವಕರನ್ನು ದಾರಿ ತಪ್ಪಿಸುತ್ತಿರುವ ಮುಜಾಹಿದ್ದೀನ್‌ ಗಳು ಮುಸ್ಲಿಂ ಸಮುದಾಯಕ್ಕೆ ಒಂದು ಹೊಣೆಯಾಗಿ ಮಾರ್ಪಟ್ಟಿದೆ.

ಮಲಪ್ಪುರಂ,ಜ.21| ಮುಖ್ಯವಾಹಿನಿಯ ಮುಸ್ಲಿಮರನ್ನು ಧರ್ಮಭ್ರಷ್ಟರನ್ನಾಗಿಸಿ ಸಮುದಾಯದಲ್ಲಿ ಒಡಕು ಮೂಡಿಸಿ, ಭಯೋತ್ಪಾದನೆಯ ಮೂಲಕ ಮುಸ್ಲಿಂ ಯುವಕರನ್ನು ದಾರಿ ತಪ್ಪಿಸುತ್ತಿರುವ ಮುಜಾಹಿದ್ದೀನ್‌ ( ವಹ್ಹಾಬಿ) ಗಳು ಮುಸ್ಲಿಂ ಸಮುದಾಯಕ್ಕೆ ಒಂದು ಹೊಣೆಯಾಗಿ ಮಾರ್ಪಟ್ಟಿದೆ.ಅವರು ತಮ್ಮ ತಪ್ಪುಗಳನ್ನು ತಿದ್ದಲು ಸಿದ್ದರಾಗಬೇಕೆಂದು ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಇಬ್ರಾಹೀಮುಲ್ ಖಲೀಲ್ ಅಲ್ ಬುಖಾರಿ ತಂಙಳ್ ಹೇಳಿದರು.

ನಿನ್ನೆ ಮಲಪ್ಪುರಂನಲ್ಲಿ ಕೇರಳ ಮುಸ್ಲಿಂ ಜಮಾತ್ ಆಯೋಜಿಸಿದ್ದ ಆದರ್ಶ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮುಸ್ಲಿಮರು ಸಾಂಪ್ರದಾಯಿಕವಾಗಿ ಸ್ವೀಕರಿಸಿದ ಆದರ್ಶಗಳು ಮತ್ತು ವರ್ತನೆಗಳನ್ನು ನಾಶಮಾಡುವ ವಿನಾಶಕಾರಿ ಪ್ರವಾಹಗಳಾಗಿವೆ ಮುಜಾಹಿದ್ ಚಳುವಳಿಗಳ ಮೂಲಭೂತ ಲಕ್ಷಣ.

ಅವರ ಧಾರ್ಮಿಕ ಮತ್ತು ರಾಜಕೀಯ ವೈಫಲ್ಯಗಳನ್ನು ಮತ್ತು ಸಮುದಾಯ ಅವರನ್ನು ದೂರೀಕರಿಸುತ್ತಿರುವುದನ್ನು ಮರೆಮಾಚಲು ಸಮುದಾಯದ ಐಕ್ಯತೆಯ ವೇದಿಕೆಯನ್ನು ಬಳಸಲು ಅವರು ಸಂಘಟಿತ ಪ್ರಯತ್ನವನ್ನು ನಡೆಸುತ್ತಿರುವುದನ್ನು ಸುನ್ನಿಗಳು ಬಲ್ಲವರಾಗಿದ್ದಾರೆ.

ಸುನ್ನಿ ಆದರ್ಶವನ್ನು ಹಾಳು ಮಾಡುವ ಯಾವುದೇ ನಡೆಯನ್ನು ಸಮಸ್ತ ಬೆಂಬಲಿಸುವುದಿಲ್ಲ. ಒಂದೇ ರೀತಿಯ ಆದರ್ಶಗಳನ್ನು ಹೊಂದಿರುವವರ ನಡುವಿನ ಏಕತೆಯಿಂದ ಮಾತ್ರ ಸಮುದಾಯದ ಸಬಲೀಕರಣವನ್ನು ಸಾಧಿಸಬಹುದು ಎಂಬುದು ನಮ್ಮ ಅನುಭವ.ಸರಿಯಾದ ಇಸ್ಲಾಮಿಕ್ ಆದರ್ಶಗಳನ್ನು ಪ್ರಚಾರ ಮಾಡುವುದು ಮತ್ತು ದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಜಾರಿಗೆ ತರುವುದು ಸಮಸ್ತದ ಗುರಿಯಾಗಿದೆ.

ಉಗ್ರಗಾಮಿ ಸಿದ್ಧಾಂತಗಳನ್ನು ಎದುರಿಸುವ ಗುರಿಯನ್ನು ಸಾಧಿಸುವಲ್ಲಿ ಸಮಸ್ತ ಯಶಸ್ವಿಯಾಗಿದೆ. ಇಸ್ಲಾಮಿಕ್ ಜೀವನ ವಿಧಾನ ಮತ್ತು ಸಾಮಾಜಿಕ ಚಟುವಟಿಕೆಗಳ ಸುಂದರ ಮಾರ್ಗಗಳ ಬಗ್ಗೆ ಸಮಾಜಕ್ಕೆ ಮನವರಿಕೆ ಮಾಡುವುದು ಸಮಸ್ತದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ.

ಆದರ್ಶ ಸಂರಕ್ಷಣೆ ಎಂಬುದು, ಒಂದೇ ಸಮಯದಲ್ಲಿ ಸಮುದಾಯದ ಸಬಲೀಕರಣ ಮತ್ತು ಸಾಮಾಜಿಕ ಪ್ರಗತಿಯನ್ನಾಗಿ ಹೇಗೆ ಪರಿವರ್ತಿಸಲು ಸಾಧ್ಯ ಎಂಬುದರ ಉದಾಹರಣೆಯಾಗಿದೆ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ನೇತೃತ್ವದ ಸಮಸ್ತ ಮತ್ತು ಇದರ ಅಧೀನ ಸಂಘಟನೆಯಾದ ಕೇರಳ ಮುಸ್ಲಿಂ ಜಮಾಅತ್ ಹಾಗೂ ಇತರ ಪೋಷಕ ಸಂಘಟನೆಗಳು ನಡೆಸುತ್ತಿರುವ ಚಟುವಟಿಕೆಗಳು.

ಇಂತಹ ಚಟುವಟಿಕೆಗಳ ಮೂಲಕ ಕೇರಳದಲ್ಲಿ ಮುಸ್ಲಿಂ ಸಂಪ್ರದಾಯದ ಐತಿಹಾಸಿಕ ಕೊಂಡಿಗಳನ್ನು ಎತ್ತಿ ಹಿಡಿಯಲಾಗುತ್ತಿದೆ ಎಂದು ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್-ಬುಖಾರಿ ಹೇಳಿದರು.

ರಾಜ್ಯದ ವಿವಿಧ ಭಾಗಗಳಿಂದ ಹರಿದು ಬಂದ ಶುಭ್ರ ವಸ್ತ್ರದಾರಿಗಳಿಂದ, ಮರ್ಹೂಮ್ ಎ.ಪಿ.ಮುಹಮ್ಮದ್ ಮುಸ್ಲಿಯಾರ್ ನಗರವು ಧನ್ಯಗೊಂಡಿತು. ಅತ್ಯುತ್ತಮವಾದ ಸಂಘಟನೆಯಿಂದ ನಿರೂಪಿಸಲ್ಪಟ್ಟ ಈ ಸಮ್ಮೇಳನವು ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಮಲಪ್ಪುರಂನಲ್ಲಿ ನಡೆದ ಅತಿದೊಡ್ಡ ಸಮ್ಮೇಳನವಾಗಿ ಮಾರ್ಪಟ್ಟಿತು.

ಇಸ್ಲಾಂ ಎಂಬ ಹಣೆಪಟ್ಟಿಯಲ್ಲಿ ಧರ್ಮಕ್ಕೆ ವಿರುದ್ಧವಾದ ವಿಷಯಗಳನ್ನು ಜನರ ಮುಂದೆ ತರುತ್ತಿರುವ ನೂತನವಾದಿ ಚಳವಳಿಯ ಸುಳ್ಳುಗಳನ್ನು ಬಯಲಿಗೆಳೆಯುವ ಉಪನ್ಯಾಸಗಳನ್ನು ಮುಸ್ಲಿಮ್ ಸಮೂಹವು ಬಹಳ ಶಿಸ್ತಿನಿಂದ ಆಲಿಸಿದರು.

ಸಂಜೆ 4.30ಕ್ಕೆ ಆರಂಭವಾದ ಸಮಾವೇಶದಲ್ಲಿ ಸಮಸ್ತ ಅಧ್ಯಕ್ಷ ಇ. ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಉಪಾಧ್ಯಕ್ಷ ಸೈಯ್ಯಿದ್ ಅಲಿ ಬಾಫಕಿ ತಂಙಳ್ ಆರಂಭದಲ್ಲಿ ದುಆ ನಡೆಸಿದರು. ಕಾರ್ಯಕ್ರಮದ ಮಧ್ಯೆ ಶೈಖ್ ಸ್ವಬಾಹ್ ಅಲ್ ರಿಫಾಈ ಬಗ್ದಾದ್ ಅವರು ದುಆ ನಡೆಸಿ, ಆಶೀರ್ವಾದ ನೀಡಿದರು.

ಸಮಸ್ತ ಪ್ರಧಾನ ಕಾರ್ಯದರ್ಶಿ ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್, ಸಿ. ಮುಹಮ್ಮದ್ ಫೈಝಿ, ಸುನ್ನೀ ಜಮೀಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬೂ ಹನೀಫಲ್ ಫೈಝಿ ತೆನ್ನಲ, ಎಸ್ ಎಂಎ ರಾಜ್ಯಾಧ್ಯಕ್ಷ ಕೆ.ಕೆ. ಅಹ್ಮದ್ ಕುಟ್ಟಿ ಮುಸ್ಲಿಯಾರ್ ಕಟ್ಟಿಪಾರ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಸುಲೈಮಾನ್ ಸಖಾಫಿ ಮಾಳಿಯೇಕಲ್, ಅಲವಿ ಸಖಾಫಿ ಕೊಳತ್ತೂರು, ರಹ್ಮತುಲ್ಲಾ ಸಖಾಫಿ ಎಳಮರಮ್, ಡಾ. ಅಬ್ದುಲ್ ಹಕೀಂ ಅಝ್ಹರಿ, ಎನ್.ಅಲಿ ಅಬ್ದುಲ್ಲಾ, ಇಬ್ರಾಹಿಂ ಸಖಾಫಿ ಪುಝಕಾಟ್ಟಿರಿ, ಪಿ.ಎಂ.ಮುಸ್ತಫಾ ಮಾಸ್ಟರ್ ಕೋಡೂರು, ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಕೆ.ವೈ.ನಿಝಾಮುದ್ದೀನ್ ಫಾಳಿಲಿ ಮಂತಾದವರು ಮಾತನಾಡಿ, ನೂತನವಾದಿಗಳ ಪೊಳ್ಳುತನವನ್ನು ಸಮುದಾಯದ ಮುಂದೆ ವಿವರಿಸಿದರು.

error: Content is protected !! Not allowed copy content from janadhvani.com