janadhvani

Kannada Online News Paper

ದೆಹಲಿ ಲೀಲಾ ಪ್ಯಾಲೇಸ್ ಹೋಟೆಲ್‌ಗೆ 23.46 ಲಕ್ಷ ವಂಚಿಸಿ ಪರಾರಿ- ಆರೋಪಿ ಮಂಗಳೂರಿನಲ್ಲಿ ಬಂಧನ

ನವದೆಹಲಿ: ಯುಎಇಯ ರಾಜಮನೆತನದ ಕಚೇರಿ ಅಧಿಕಾರಿಯಂತೆ ನಟಿಸಿ ದೆಹಲಿಯ ಲೀಲಾ ಪ್ಯಾಲೇಸ್‌ ಪಂಚತಾರಾ ಹೋಟೆಲ್‌ನಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲ ವಾಸವಿದ್ದು, ಬಳಿಕ ಹೊಟೇಲ್ ಬಿಲ್ ನೀಡದೇ ಪರಾರಿಯಾಗಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬಂಧಿಸಿದ್ದಾರೆ, ಆರೋಪಿಯನ್ನು 41 ವರ್ಷ ಪ್ರಾಯದ ಮಹಮ್ಮದ್ ಶರೀಫ್ ಎಂದು ಗುರುತಿಸಲಾಗಿದೆ.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹೊಟೇಲ್‌ಗೆ ಆಗಮಿಸಿದ ಈತ ನವಂಬರ್ ಅಂತ್ಯದವರೆಗೂ ಅಲ್ಲೇ ಇದ್ದ. ಇದಾದ ನಂತರ ನವಂಬರ್‌ನಲ್ಲಿ ಅಲ್ಲಿ ರೂಮ್ ಖಾಲಿ ಮಾಡಿದ ಆರೋಪಿ ಈ ವೇಳೆ 20 ಲಕ್ಷ ಬಿಲ್‌ಗೆ ಚೆಕ್‌ ನೀಡಿದ್ದ. ಆದರೆ, ಚೆಕ್ ಬೌನ್ಸ್ ಆಗಿದೆ ಎಂದು ತಿಳಿದು ಬಂದಿದೆ.ಹೋಟೆಲ್‌ಗೆ ನಂಬಿಸಲು ಆರಂಭದಲ್ಲಿ ಮಹಮ್ಮದ್ ಶರೀಫ್ 1.5 ಲಕ್ಷ ಹಣ ಪಾವತಿಸಿದ್ದ. ಆದರೆ, ಬಾಕಿ 23 ಲಕ್ಷ ಪಾವತಿಸದೇ ಪರಾರಿಯಾಗಿದ್ದ.

ಈ ಘಟನೆಯ ನಂತರ ಹೊಟೇಲ್ ಮ್ಯಾನೇಜರ್ ಅನುಪಮ ದಾಸ್ ಗುಪ್ತಾ ಅವರು ಜನವರಿ 14 ರಂದು ದೆಹಲಿಯ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರನ್ನಾಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.ಮಹಮ್ಮದ್ ಶರೀಫ್ ಯುಎಇ ಸುಲ್ತಾನ್ ಶೈಖ್ ಫಲ್ಹಾ ಬಿನ್ ಝಾಯಿದ್ ಆಲ್ ನಹ್ಯಾನ್ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಬಳಿಕ ಈತನ ಬಂಧನಕ್ಕೆ ಬಲೆ ಬೀಸಿದ ದೆಹಲಿ ಪೊಲೀಸರು ತಂಡವೊಂದನ್ನು ರಚಿಸಿ ಕಾರ್ಯಾಚರಣೆಗೆ ಇಳಿದಿದ್ದರು. ನಂತರ ಜನವರಿ 19 ರಂದು ಶರೀಫ್‌ನನ್ನು (Mahamed Sharif) ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೆಹಲಿ ಪೊಲೀಸರು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ.

error: Content is protected !! Not allowed copy content from janadhvani.com