janadhvani

Kannada Online News Paper

ಡಿಸೆಂಬರ್ 18 ಕ್ಕೆ ಯು ಎ ಇ ಕೆಸಿಎಫ್ ಕನ್ನಡಿಗರ ಕುಟುಂಬ ಸಮ್ಮಿಲನ

ಹೊರನಾಡ ಕನ್ನಡಿಗರ ಅತಿ ದೊಡ್ಡ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ಬೃಹತ್ ಕುಟುಂಬ ಸಮ್ಮಿಲನವು ಡಿಸೆಂಬರ್ 18 ಕ್ಕೆ ಅಬುಧಾಬಿ ಉಮ್ಮುಲ್ ಬಸಾತೀನ್ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ. ಯು ಎ ಇ ಯಲ್ಲಿ 2013 ಫೆಬ್ರವರಿ 13 ರಂದು ಸ್ಥಾಪಿಸಲ್ಪಟ್ಟ ಸಂಘಟನೆಯ ಶಕ್ತಿಯು ಇಂದು ಯು ಎ ಇ ಮಾತ್ರವಲ್ಲದೆ ಸೌದಿ ಅರೇಬಿಯಾ, ಕತಾರ್, ಕುವೈತ್, ಒಮಾನ್, ಬಹರೈನ್, ಮಲೇಷ್ಯಾ ಮತ್ತು ಲಂಡನ್ ಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿದೆ. ಸಮುದಾಯದಲ್ಲಿ ತಳಮಟ್ಟದ ಅರ್ಹ ಫಲಾನುಭವಿಗಳಿಗೆ ಹಲವಾರು ರೀತಿಯ ಸಾಮಾಜಿಕ ಮತ್ತು ಶೈಕ್ಷಣಿಕ ಸಹಕಾರ, ಸಾಂತ್ವನ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘಟನೆ ತನ್ನದೇ ಆದ ಗಲ್ಫ್ ಇಶಾರ ಎಂಬ ಕನ್ನಡ ಮಾಸಿಕವನ್ನೂ ಗಲ್ಫ್ ರಾಷ್ಟ್ರಗಳಲ್ಲಿ ಹೊರ ತರುತ್ತಿದೆ.

ತಳಮಟ್ಟದಿಂದಲೇ ಬಲವಾದ ಸಂಘಟನಾ ಚಾತುರ್ಯದಿಂದ ಕಾರ್ಯ ನಿರ್ವಹಿಸುತ್ತಿರುವ ಕೆಸಿಎಫ್ ಸಂಘಟನೆಯು ಡಿಸೆಂಬರ್ 18 ಕ್ಕೆ ತನ್ನ ದಶಮಾನೋತ್ಸವದ ಪ್ರಯುಕ್ತ ತಾಯ್ನಾಡಿನ ಕುಟುಂಬಗಳಿಗಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಕೃತಿ ರಮಣೀಯವಾದ ಅಬುಧಾಬಿಯ ಹೊರವಲಯದಲ್ಲಿರುವ ಫಾರ್ಮ್ ಹೌಸ್ ನಲ್ಲಿ ವಿವಿಧ ಸಾಂಸ್ಕೃತಿಕ ಆಚರಣೆಗಳೊಂದಿಗೆ ಆಚರಿಸಲು ತೀರ್ಮಾನಿಸಿದೆ.

ಯು ಎ ಇ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕೆಸಿಎಫ್ ಕುಟುಂಬ ಸಮ್ಮಿಲನವು ಬೆಳಿಗ್ಗೆ 10 ಘಂಟೆಗೆ ಉದ್ಘಾಟನೆಗೊಳ್ಳಲಿದೆ. ಯುವಕರಿಗೆ, ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ರೀತಿಯ ಒಳಾಂಗಣ ಕ್ರೀಡೆ , ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರ ಕಲೆ, ಕನ್ನಡ ಭಾಷೆಯಲ್ಲಿಯೇ ರಸಪ್ರಶ್ನೆ ಮತ್ತು ಹಲವು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ವಿವಿಧ ವೇದಿಕೆಗಳಲ್ಲಿ ನಡೆಯಲಿವೆ. ಯುವಕರಿಗೆ ನಮ್ಮಹಳೆಯ ಗ್ರಾಮೀಣ ಆಟೋಟ ಸ್ಪರ್ಧೆಗಳು, ಮಹಿಳೆಯರಿಗೆ ಆಹಾರ ಪಾಕ ಮತ್ತು ಮೆಹಂದಿ ಸ್ಪರ್ಧೆ ಗಳನ್ನೂ ಆಯೋಜಿಸಲಾಗಿದೆ. ಮೂರು ಹೊತ್ತಿನ ಊಟೋಪಚಾರ, ವಿವಿಧ ತಿಂಡಿ ತಿನಿಸುಗಳು, ವಿವಿಧ ರೀತಿಯ ಜ್ಯೂಸ್ ಪಾನೀಯಗಳು ಈ ಕಾರ್ಯಕ್ರಮದ ಮತ್ತೊಂದು ವಿಶೇಷ.

ಸಂಜೆ 5 ಘಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದು ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ನಡೆಯಲಿದೆ. ಅಚ್ಚುಕಟ್ಟಾದ ಸುವ್ಯವಸ್ಥೆಗೆ 40 ಮಂದಿಯ ಸ್ವಯಂ ಸೇವಕ ತಂಡವನ್ನು ಸಜ್ಜುಗೊಳಿಸಲಾಗಿದೆ. ಭೌಗೋಳಿಕವಾಗಿ ಶಾರ್ಜಾ, ದುಬೈ, ರಾಸ್ ಅಲ್ ಖೈಮಾ, ಅಜ್ಮಾನ್, ಅಲ್ ಐನ್ ಮತ್ತು ಅಬುಧಾಬಿ ಪ್ರದೇಶಗಳಿಂದ ಕೆಸಿಎಫ್ ಕುಟುಂಬ ಮಂದಿಗಳು ಇಲ್ಲಿ ಸೇರಲಿದ್ದು ಸುಮಾರು 600 ಮಂದಿಗೆ ಉತ್ತಮ ಕುಟುಂಬ ಸಮ್ಮಿಲನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕುಟುಂಬ ಸಮ್ಮಿಲನದ ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ಇದೊಂದು ಕನ್ನಡಿಗರ ಹೆಮ್ಮೆಯ ಕಾರ್ಯಕ್ರವಾಗಲಿದ್ದು, ಎಲ್ಲ ನೋಂದಾಯಿತ ಸದಸ್ಯರು ಸಹಕರಿಸಬೇಕೆಂದು ಸ್ವಾಗತ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಬ್ರೈಟ್ ಮಾರ್ಬಲ್ ಮತ್ತು ಉಪಾಧ್ಯಕ್ಷರಾದ ಹಕೀಮ್ ತುರ್ಕಳಿಕೆ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.

error: Content is protected !! Not allowed copy content from janadhvani.com