janadhvani

Kannada Online News Paper

ಅರ್ಜೆಂಟೀನಾ ವಿರುದ್ಧ ಅದ್ಭುತ ವಿಜಯದ ಸಂಭ್ರಮ, ನಾಳೆ ರಜೆ- ದೊರೆ ಸಲ್ಮಾನ್ ಆದೇಶ

ಫಿಫಾ ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಬಲಿಷ್ಠ ಅರ್ಜೆಂಟೀನಾ ತಂಡಕ್ಕೆ 51ನೇ ಸ್ಥಾನದಲ್ಲಿರುವ ಸೌದಿ ಅರೇಬಿಯಾ ಶಾಕ್ ನೀಡಿದೆ.

ರಿಯಾದ್ : ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ (FIFA-2022) ವಿಶ್ವಕಪ್‌ 2022ರಲ್ಲಿ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾದ ಅದ್ಭುತ ವಿಜಯದ ಸಂಭ್ರಮದಲ್ಲಿ ನಾಳೆ, ಬುಧವಾರ, ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲಾ ಉದ್ಯೋಗಿಗಳಿಗೆ ಮತ್ತು ಶಿಕ್ಷಣದ ಎಲ್ಲಾ ಹಂತಗಳಲ್ಲಿನ ವಿದ್ಯಾರ್ಥಿಗಳಿಗೆ ರಜಾದಿನವಾಗಿದೆ ಎಂದು ಸೌದಿ ದೊರೆ ದೊರೆ ಸಲ್ಮಾನ್(King Salman) ಆದೇಶ ಹೊರಡಿಸಿದ್ದಾರೆ.

ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ 2022ರಲ್ಲಿ ಮೊಟ್ಟ ಮೊದಲ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಫಿಫಾ ವಿಶ್ವ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಬಲಿಷ್ಠ ಅರ್ಜೆಂಟೀನಾ ತಂಡಕ್ಕೆ 51ನೇ ಸ್ಥಾನದಲ್ಲಿರುವ ಸೌದಿ ಅರೇಬಿಯಾ ಶಾಕ್ ನೀಡಿದೆ.

ಕತಾರ್‌ ಆತಿಥ್ಯದಲ್ಲಿ ನಡೆಯುತ್ತಿರುವ 2022ರ ಸಾಲಿನ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿನ ‘ಸಿ’ ಗುಂಪಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಲಿಯೋನೆಲ್‌ ಮೆಸ್ಸಿ ಸಾರಥ್ಯದ ಬಲಿಷ್ಠ ಅರ್ಜೆಂಟೀನಾ ತಂಡ 1-2 ಗೋಲ್‌ಗಳಿಂದ ಸೌದಿ ಅರೇಬಿಯಾ ಎದುರು ಸೋತು ಸುಣ್ಣವಾಗಿದೆ. ಇದರೊಂದಿಗೆ ಅರ್ಜೆಂಟೀನಾ ತಂಡ ಗ್ರೂಪ್‌ ಹಂತದಲ್ಲೇ ಸ್ಪರ್ಧೆಯಿಂದ ಹೊರ ಬೀಳುವ ಆತಂಕಕ್ಕೆ ಸಿಲುಕಿದೆ

ಇಲ್ಲಿನ ಲುಸೈಲ್ ಸ್ಟೇಡಿಯಂನಲ್ಲಿ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ 2-1 ಗೋಲುಗಳಿಂದ ಜಯ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಸಲೆಹ್ ಅಲ್‌ಶೆಹ್ರಿ ಮತ್ತು ಸಲೇಮ್ ಅಲ್ದಾವ್ಸರಿ ತಲಾ ಒಂದು ಗೋಲು ಗಳಿಸುವ ಮೂಲಕ ಸೌದಿ ಅರೇಬಿಯಾ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು. ಈ ಬಾರಿ ಫಿಫಾ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿದ್ದ ಅರ್ಜೆಂಟೀನಾಗೆ ಮೊದಲನೇ ಪಂದ್ಯದಲ್ಲೇ ಮುಖಭಂಗವಾಗಿದೆ.

ಅರ್ಜೆಂಟೀನಾ ತಂಡದ ಲಿಯೊನೆಲ್ ಮೆಸ್ಸಿ ಪಂದ್ಯದ ಆರಂಭದಲ್ಲೇ ಗೋಲು ಗಳಿಸುವ ಮೂಲಕ ಅರ್ಜೆಂಟೀನಾ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟಿದ್ದರು. ಅರ್ಜೆಂಟೀನಾ ಸುಲಭವಾಗಿ ಈ ಪಂದ್ಯವನ್ನು ಗೆಲ್ಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ತಿರುಗಿಬಿದ್ದ ಸೌದಿ ಅರೇಬಿಯಾ ಅರ್ಜೆಂಟೀನಾ ರಕ್ಷಣಾವಿಭಾಗವನ್ನು ಛಿದ್ರಗೊಳಿಸಿ ಎರಡು ಗೋಲು ದಾಖಲಿಸಿ ಇತಿಹಾಸ ಸೃಷ್ಟಿಸಿದೆ.

ಸಲೆಹ್ ಅಲ್‌ಶೆಹ್ರಿ 48ನೇ ನಿಮಿಷದಲ್ಲಿ ಮೊದಲನೇ ಗೋಲು ಗಳಿಸುವ ಮೂಲಕ 1-1 ಗೋಲಿನಿಂದ ಆಟದಲ್ಲಿ ಸಮಬಲ ಸಾಧಿಸಿದರು. ಅದಾದ ಕೇವಲ ಐದು ನಿಮಿಷದಲ್ಲೇ ಸಲೇಮ್ ಅಲ್ದಾವ್ಸರಿ ಸೌದಿ ಅರೇಬಿಯಾ ಪರವಾಗಿ 2ನೇ ಗೋಲು ಗಳಿಸಿ ಫುಟ್ಬಾಲ್ ಲೋಕವನ್ನು ದಂಗುಬಡಿಸಿದರು.
ಅಲ್ಲಿಂದ ಕೊನೆಯ ಕ್ಷಣದವರೆಗೂ ಅರ್ಜೆಂಟೀನಾ ಒಂದು ಗೋಲು ಗಳಿಸಲು ಕೂಡ ಸಾಧ್ಯವಾಗದಂತೆ ಬಲಿಷ್ಠ ರಕ್ಷಣಾ ಕೋಟೆ ನಿರ್ಮಿಸಿದ ಸೌದಿ ಅರೇಬಿಯಾ, ಅವಿಸ್ಮರಣೀಯ ವಿಜಯದೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿತು.

error: Content is protected !! Not allowed copy content from janadhvani.com