janadhvani

Kannada Online News Paper

ಮೃತ ಫಾಝಿಲ್ ಮನೆಗೆ ಸುನ್ನೀ ನಾಯಕರ ಭೇಟಿ. ಸೂಕ್ತ ಪರಿಹಾರಕ್ಕೆ ಒತ್ತಾಯ

ಕಾಟಿಪಳ್ಳ: ಸುರತ್ಕಲ್ ನಲ್ಲಿ ಹತ್ಯೆಯಾದ ಮಂಗಳಪೇಟೆ ನಿವಾಸಿ ಫಾಝಿಲ್ ಮನೆಗೆ ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಅಬೂಸುಫ್ಯಾನ್ ಇಬ್ರಾಹಿಂ ಮದನಿ, ಕರ್ನಾಟಕ ಜಂಇಯತುಲ್ ಉಲಮಾ ಕಾರ್ಯದರ್ಶಿ ತೋಕೆ ಮುಹ್‌ಯಿದ್ದೀನ್ ಕಾಮಿಲ್ ಸಖಾಫಿ, ಸುನ್ನೀ ಜಂಇಯತುಲ್ ಮುಅಲ್ಲಿಮೀನ್ ರಾಜ್ಯ ನಾಯಕ ಕೆಕೆಎಂ ಸಖಾಫಿ, ಎಸ್ ಎಸ್ ಎಫ್ ರಾಜ್ಯ ಕೋಶಾಧಿಕಾರಿ ಸುಫ್ಯಾನ್ ಸಖಾಫಿ, ದಕ್ಷಿಣ ಜಿಲ್ಲಾ ವೆಸ್ಟ್ ನಾಯಕ ಆರಿಫ್ ಝುಹ್‌ರಿ,ಜಂಇಯತುಲ್ ಉಲಮಾ ಸುರತ್ಕಲ್ ವಲಯ ನಾಯಕರಾದ ಫಾರುಕ್ ಸಖಾಫಿ ಮುಂತಾದ ನಾಯಕರು ಭೇಟಿ ನೀಡಿ ಸಾಂತ್ವನ ಪಡಿಸಿದರು.

ಪ್ರವೀನ್ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಮಸೂದ್ ಮತ್ತು ಫಾಝಿಲ್ ಹತ್ಯೆಯನ್ನು ಪರಿಗಣಿಸಬೇಕು ಹಾಗೂ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಿ ಎಂ ರವರು ಮಸೂದ್ ಮನೆಗೆ ಹೋಗದ್ದು ಮುಸ್ಲಿಂ ಸಮುದಾಯದಲ್ಲಿ ಅಭದ್ರತೆಯ ಭಾವನೆ ಮೂಡಲು ಕಾರಣ ವಾಗಿದೆ. ಇದೀಗ ಅಮಾಯಕ ಫಾಝಿಲ್ ಹತ್ಯೆಯಾಗಿ ದಿನ ಕಳೆದರು ಸರ್ಕಾರ ಪರವಾಗಿ ಸ್ಥಳೀಯ ಶಾಸಕರ ಸಹಿತ ಯಾವ ರಾಜಕಾರಣಿಗಳು ಭೇಟಿ ನೀಡದ್ದು ಸರ್ಕಾರದ ತಾರತಮ್ಯ ನೀತಿಯನ್ನು ಬೊಟ್ಟುಮಾಡುತ್ತದೆ ಎಂದು ಅಭಿಪ್ರಾಯ ಪಟ್ಟರು.

ಮಸೂದ್ ಮತ್ತು ಫಾಝಿಲ್ ಅಂತ್ಯ ಸಂಸ್ಕಾರ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಮುಸ್ಲಿಂ ಸಮುದಾಯ ಸಂಯಮ ಪಾಲಿಸಿದೆ.ಮುಸ್ಲಿಮರ ನೋವನ್ನು ಸರ್ಕಾರ ಅರ್ಥಮಾಡಿಕೊಂಡು ನ್ಯಾಯ ನೀಡಬೇಕೆಂದು ಆಗ್ರಹಿಸಿದರು.