janadhvani

Kannada Online News Paper

ಭಾರತಕ್ಕೆ ಅಪ್ಪಳಿಸಲಿದೆ ಮಹಾ ಚಂಡಮಾರುತಗಳು- ತಜ್ಞರಿಂದ ಎಚ್ಚರಿಕೆ

ಜಾಗತಿಕವಾಗಿ ತಾಪಮಾನ ಏರಿಕೆ, ಸಮುದ್ರ ಮಟ್ಟದಲ್ಲಿ ಆಗುತ್ತಿರುವ ಏರಿಕೆಗಳೂ ಈ ಮಹಾ ಚಂಡಮಾರುತ ಸೃಷ್ಟಿಗೆ ಕಾರಣ ಆಗಬಲ್ಲವು ಎಂದು ತಜ್ಞರು ಅಂದಾಜಿಸಿದ್ದಾರೆ

ಲಂಡನ್ : ಭಾರತ ದೇಶವು ಭವಿಷ್ಯದಲ್ಲಿ ಹಲವು ಸೂಪರ್ ಸೈಕ್ಲೋನ್ (ಮಹಾ ಚಂಡಮಾರುತ) ಎದುರಿಸಬೇಕಾದ ಸನ್ನಿವೇಶ ಎದುರಾಗಬಹುದು ಎಂದು ಲಂಡನ್‌ನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ಸೇರಿದಂತೆ ಹಲವು ಮಾನವ ನಿರ್ಮಿತ ಅವಾಂತರಗಳೇ ಇದಕ್ಕೆ ಕಾರಣ ಎಂದು ತಜ್ಞರ ಸಂಶೋಧನಾ ವರದಿ ಬಹಿರಂಗಪಡಿಸಿದೆ.
ಬ್ರಿಟನ್‌ನ ಬ್ರಿಸ್ಟಾಲ್ ವಿವಿ ತಜ್ಞರು ಈ ಸಂಶೋಧನೆ ನಡೆಸಿದ್ದು, 2020ರಲ್ಲಿ ಭಾರತಕ್ಕೆ ಅಪ್ಪಳಿಸಿದ ಸೂಪರ್ ಸೈಕ್ಲೋನ್ ಆಂಫನ್‌ ಮಾದರಿಯಲ್ಲಿ ಹಲವು ಮಹಾ ಚಂಡಮಾರುತಗಳು ಭಾರತ ದೇಶ ಹಾಗೂ ದಕ್ಷಿಣ ಏಷ್ಯಾ ರಾಷ್ಟ್ರಗಳನ್ನು ಕಾಡಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಾಗತಿಕವಾಗಿ ತಾಪಮಾನ ಏರಿಕೆ, ಸಮುದ್ರ ಮಟ್ಟದಲ್ಲಿ ಆಗುತ್ತಿರುವ ಏರಿಕೆಗಳೂ ಈ ಮಹಾ ಚಂಡಮಾರುತ ಸೃಷ್ಟಿಗೆ ಕಾರಣ ಆಗಬಲ್ಲವು ಎಂದು ತಜ್ಞರು ಅಂದಾಜಿಸಿದ್ದಾರೆ.
ಈ ಕುರಿತಂತೆ ಅಧ್ಯಯನ ವರದಿ ಕೂಡಾ ಪ್ರಕಟವಾಗಿದ್ದು, ಸದ್ಯ ವಾತಾವರಣಕ್ಕೆ ಬಿಡುಗಡೆ ಅಗುತ್ತಿರುವ ಹಸಿರು ಮನೆ ಅನಿಲಗಳ ಪ್ರಮಾಣ ಇದೇ ರೀತಿಯಲ್ಲಿ ಮುಂದುವರೆದರೆ, ಭಾರತದ ಬಹಳಷ್ಟು ಜನತೆ ಪ್ರವಾಹದಿಂದ ಬಾಧಿತರಾಗಬೇಕಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

2020ರಲ್ಲಿ ಸಂಭವಿಸಿದ ರೀತಿಯಲ್ಲೇ 1 ಮೀಟರ್‌ಗೂ ಹೆಚ್ಚು ಎತ್ತರದ ಪ್ರವಾಹ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.
ಜಾಗತಿಕವಾಗಿ ದಕ್ಷಿಣ ಏಷ್ಯಾ ಪ್ರಾಂತ್ಯವು ಹವಾಮಾನ ಸೂಕ್ಷ್ಮ ವಲಯವಾಗಿದ್ದು, ಇಲ್ಲಿ ಸೂಪರ್ ಸೈಕ್ಲೋನ್ ಸಂಭವಿಸಿದರೆ, ಕೋಟ್ಯಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಜನಸಂಖ್ಯೆ ಹೆಚ್ಚಾಗಿರುವ ಪ್ರದೇಶವಾದ ಕಾರಣ ಸಾವಿರಾರು ಜನರ ಸಾವು – ನೋವು ಕೂಡಾ ಸಂಭವಿಸಬಹುದಾಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಭಾರತ ಮಾತ್ರವಲ್ಲ, ಬಾಂಗ್ಲಾ ದೇಶ ಕೂಡಾ ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಬಾಂಗ್ಲಾ ದೇಶದ 60 ರಿಂದ 70 ರಷ್ಟು ಜನ ಸಮೂಹವು ಹವಾಮಾನ ವೈಪರಿತ್ಯದಿಂದ ಎದುರಾಗುವ ಸೂಪರ್ ಸೈಕ್ಲೋನ್‌ಗಳಿಗೆ ಸಾಕ್ಷಿ ಆಗಬೇಕಿದೆ. ಅದರಲ್ಲೂ ಕರಾವಳಿಯಲ್ಲಿ ನೆಲೆಸಿರುವ ಜನರು ಈ ರೀತಿಯ ಸಮಸ್ಯೆಗೆ ಅತಿ ಹೆಚ್ಚು ತುತ್ತಾಗುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

ಭಾರತದಲ್ಲಿ ಕೂಡಾ ಹವಾಮಾನ ವೈಪರಿತ್ಯದಿಂದ ಎದುರಾಗುವ ಮಹಾ ಚಂಡಮಾರುತಗಳಿಂದ ದೇಶದ ಒಟ್ಟು ಜನಸಂಖ್ಯೆಯ ಶೇ. 50 ರಿಂದ 80ರಷ್ಟು ಜನರು ಪ್ರವಾಹದ ಕರಾಳ ಅನುಭವ ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಈ ರೀತಿಯ ಮಹಾ ಚಂಡ ಮಾರುತಗಳು ಎದುರಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದು, ನಿರ್ದಿಷ್ಟ ವರ್ಷವನ್ನು ಉಲ್ಲೇಖಿಸಿಲ್ಲ. ಆದ್ರೆ, ಪ್ಯಾರಿಸ್ ಒಪ್ಪಂದ ಅನ್ವಯ, ತಾಪಮಾನ ಮಿತಿಗೊಳಿಸುವ, ಅತಿ ಕಡಿಮೆ ಇಂಗಾಲಾಮ್ಲ ಹೊರ ಸೂಸುವ ನಿಯಮಕ್ಕೆ ದೇಶಗಳು ಬದ್ಧರಾಗಬೇಕು ಎಂದು ತಜ್ಞರು ಹೇಳಿದ್ದಾರೆ.

error: Content is protected !! Not allowed copy content from janadhvani.com