janadhvani

Kannada Online News Paper

ಲುಲು ಯೂಸುಫ್ ಅಲಿಯವರಿಗೆ ಬೊಮ್ಮಾಯಿ ಸರ್ಕಾರ ರಾಯಭಾರಿತ್ವ ಘೋಷಿಸಲಿ- ಕೆ.ಅಶ್ರಫ್

ಇತ್ತೀಚೆಗೆ ಮಾಜಿ ರಿಸರ್ವ್ ಬ್ಯಾಕ್ ಗವರ್ನರ್ ರಘುರಾಮ್ ರಾಜನ್ ಅಭಿಪ್ರಾಯ ಪಟ್ಟು, ಭಾರತದಲ್ಲಿ ಅಲ್ಪ ಸಂಖ್ಯಾತ ಜನಾಂಗದ ವಿರುದ್ಧದ ವಿದ್ವೇಶದ ಸ್ಪಷ್ಟ ಕಾರಣಕ್ಕಾಗಿ ವಿದೇಶಿ ಸಂಸ್ಥೆಗಳು ತನ್ನ ಬಂಡವಾಳ ಹೂಡಿಕೆಯನ್ನು ಪರಿಣಾಮಾತ್ಮಕವಾಗಿ ಹಿಂಪಡೆಯುತ್ತಿರುವ ಸಂಭಾವ್ಯ ಅಪಾಯ ಮತ್ತು ಭಾರತದ ಆರ್ಥಿಕ ಪರಿಣಾಮಗಳ ಮೇಲೆ ಈ ಹಿಂಪಡೆತ ಎಷ್ಟು ಪ್ರಭಾವ ಬೀರಲಿದೆ ಎಂಬ ಬಗ್ಗೆಗಿನ ಗಂಭೀರತೆಯ ಬಗ್ಗೆ ಹೇಳಿಕೆ ನೀಡಿರುತ್ತಾರೆ.

ಮುಂದುವರಿದು,ಖ್ಯಾತ ಪತ್ರಕರ್ತರು, ದಿ ಹಿಂದೂ ಪತ್ರಿಕಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಎನ್.ರಾಮ್ ಹೇಳಿಕೆ ನೀಡಿ ಭಾರತದ ಆರ್ಥಿಕ ವ್ಯವಸ್ಥೆ ಶ್ರೀಲಂಕಾ ದೇಶದ ಮಾದರಿಯನ್ನು ಹಿಂಬಾಲಿಸುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ಡಾ. ಅಶ್ವತ್ ನಾರಾಯಣ್ ರವರ ತಂಡ ಕರ್ನಾಟಕ ಸರಕಾರವನ್ನು ಪ್ರತಿನಿಧಿಸಿ ಮೊನ್ನೆ ಸ್ವಿಜರ್ ಲ್ಯಾಂಡ್, ದಾವೋಸ್ ನಲ್ಲಿ ನಡೆದ ವಿದೇಶಿ ಬಂಡವಾಳ ಹೂಡಿಕೆಯಲ್ಲಿನ ಸಭೆಯಲ್ಲಿ ಪಾಲ್ಗೊಂಡು, ಖ್ಯಾತ ಉದ್ಯಮಿ ಲುಲು ಸಂಸ್ಥೆಯ ಮುಖ್ಯಸ್ಥರಾದ ಯೂಸುಫ್ ಅಲಿ ಯವರೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಂಡು ಕರ್ನಾಟಕದಲ್ಲಿ ಉದ್ದೇಶಿತ ಹೈಪರ್ ಮಾರ್ಕೆಟ್ ಸ್ಥಾಪನೆ ಗಾಗಿ 2000 ಕೋಟಿ ಬಂಡವಾಳ ಹೂಡಿಕೆ ಮತ್ತು ಹತ್ತು ಸಾವಿರ ಜನರಿಗೆ ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ಪೂರೈಸುವುದಾಗಿ ಘೋಷಿಸಿದ್ದಾರೆ.

ವಿಪರ್ಯಾಸವೆಂದರೆ, ಸ್ವಿಜರ್ಲ್ಯಾಂಡ್ ನ ದಾವೊಸ್ ನಲ್ಲಿ ನಡೆದ ಜಾಗತಿಕ ಆರ್ಥಿಕ ಸಮಿತಿಯಲ್ಲಿ ಲುಲು ಗ್ರೂಪ್ ಸಮೂಹ ಸಂಸ್ಥೆಯನ್ನು ಪ್ರತಿನಿಧಿಸಿದ, ಕರ್ನಾಟಕದ ಪಕ್ಕದ ರಾಜ್ಯದ ಕೇರಳ ಮೂಲದ ಯೂಸುಫ್ ಅಲಿ ಯವರ ಹೆಸರು ತನ್ನ ಉಚ್ಛಾರಣೆಯಿಂದ ತಪ್ಪಿ ಹೋದದ್ದು, ಬಹುಷಃ ರಾಜ್ಯದ ಮುತಾಲಿಕ್ ಮತ್ತು ಕಾಳಿ ಸ್ವಾಮಿಯ, ಮುಸ್ಲಿಮರೊಂದಿಗಿನ ವ್ಯವಹಾರ ನಿರ್ಭಂದ ಘೋಷಣೆಗೆ ಹೆದರಿಯೇ ಇರಬಹುದು.

ರಾಜ್ಯದಲ್ಲಿ ಕೇರಳ ಮೂಲದ ವ್ಯಕ್ತಿಗಳು ಸ್ವರ್ಣ ವ್ಯವಾಹಾರ ನಡೆಸ ಕೂಡದು, ಅದರ ಆದಾಯವನ್ನು ಕೇರಳದಲ್ಲಿ ಭಯೋತ್ಪಾದನೆ ಕೃತ್ಯಕ್ಕೆ ಬಳಸಲಾಗುತ್ತಿದೆ ಎಂಬ ಮುತಾಲಿಕ್ ನ ಬೊಬ್ಬೆಗೆ ಕರ್ನಾಟಕದಲ್ಲಿ ಬೊಮ್ಮಾಯಿ ನೇತೃತ್ವದ ವಿದೇಶಿ ವಾಣಿಜ್ಯ ಹೂಡಿಕೆ ತಂಡ ಸಿದ್ದ ಉತ್ತರ ತಯಾರಿ ಮಾಡಿ ಕೊಂಡೇ ರಾಜ್ಯಕ್ಕೆ ಆಗಮಿಸುವುದು ಒಳಿತು.ತಪ್ಪಿದಲ್ಲಿ ಮುತಾಲಿಕರ ಪುಂಡ ಹಿಂಬಾಲಕರು ಮತ್ತು ಕಾಳಿ ಸ್ವಾಮಿ ಯಿಂದ ಬೊಮ್ಮಾಯಿ ತಂಡ ಸೂಕ್ತ ‘ ಸ್ವಾಗತ ‘ ನಿರೀಕ್ಷಿಸ ಬೇಕಾಗಬಹುದು.

ಭಾರತದ ಪ್ರಸಕ್ತ ಸನ್ನಿವೇಶದಲ್ಲಿ ವಿದೇಶಿ ಸಂಸ್ಥೆಗಳು ಹೊಡಿಕೆ ಹಿಂಪಡೆಯುವ ಈ ಸಂಧರ್ಬದಲ್ಲಿ, ಅಂತಾರಾಷ್ಟ್ರೀಯ ಹೂಡಿಕೆ ಖ್ಯಾತಿಯ ಲುಲು ಸಂಸ್ಥೆಯ ಮುಖ್ಯಸ್ಥ ಯೂಸುಫ್ ಅಲಿಯವರ ಹೂಡಿಕೆಯ ಧೈರ್ಯವನ್ನು ಮೆಚ್ಚಲೇ ಬೇಕು. ಓರ್ವ ಸಮರ್ಥ ಭಾರತೀಯ ಮೂಲದ ಉದ್ಯಮಿಯಾದ ಲುಲು ಯೂಸುಫ್ ಅಲಿಯವರನ್ನು ಕರ್ನಾಟಕ ಸರಕಾರ ತನ್ನ ರಾಜ್ಯದ ‘ ಹೂಡಿಕೆ ರಾಯಭಾರಿ ‘ ಯನ್ನಾಗಿ ಘೋಷಿಸಲಿ.

ಇಡೀ ಭಾರತಕ್ಕೆ ಕರ್ನಾಟಕದ ಘೋಷಣೆಯು ಮಾದರಿಯಾಗುವಂತೆ ನೋಡಿ ಕೊಳ್ಳುವುದು ಬೊಮ್ಮಾಯಿ ನೇತೃತ್ವದ ಕರ್ನಾಟಕ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಬೊಮ್ಮಾಯಿ ಸರ್ಕಾರದ ಘೋಷಣೆಯಿಂದ ಭಾರತದ ಸರ್ವ ರಾಜ್ಯಗಳು ವಿದೇಶಿ ಮೂಲದ ಹೂಡಿಕೆದಾರರಿಗೆ ಪೂರಕ ವಾತಾವರಣ ನಿರ್ಮಿಸುವಂತಹ ಸನ್ನಿವೇಶ ನಿರ್ಮಾಣವಾಗಲಿ.

ಕರ್ನಾಟಕ ರಾಜ್ಯದಲ್ಲಿನ ಬಂಡವಾಳ ಹೂಡಿಕೆ ಪ್ರಕ್ರಿಯೆ, ಮುಕ್ತ ವ್ಯವಹಾರ ನೀತಿಯ ಬಗ್ಗೆ ಬೊಮ್ಮಾಯಿ ಸರ್ಕಾರ, ಪ್ರಮೋದ್ ಮುತಾಲಿಕ್ ಮತ್ತು ಕಾಳಿಸ್ವಾಮಿಯವರಂತಹ ‘ ವಾಣಿಜ್ಯ ತಜ್ಞ ‘ ರಿಂದ ಸಲಹೆ ಪಡೆಯುವುದಕ್ಕೆ ಇನ್ನೂ ಹೆಚ್ಚಿನ ಮಿತಿ ಹೇರಿದರೆ, ಹೂಡಿಕೆದಾರರ, ನೌಕರಿ ಹೊಂದುವವರ ಮತ್ತು ವ್ಯವಹಾರ ನಡೆಸುವವರು ಆಚರಿಸುವ ಧರ್ಮ ಎಂದಿಗೂ ಅಡ್ಡ ಬರಲಾರದು ಎಂದು ಬೊಮ್ಮಾಯಿಯ ತಂಡ ತಿಳಿಯುವುದು ಒಳಿತು.

ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com