janadhvani

Kannada Online News Paper

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ -ಶೇಕಡಾ 85.63ರಷ್ಟು ಫಲಿತಾಂಶ

ಪರೀಕ್ಷೆಗೆ ಒಟ್ಟು 8,53,436 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 7,30,881 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಬೆಂಗಳೂರು, ಮೇ.19: ಇಂದು ಕರ್ನಾಟಕ ಎಸ್‌ಎಸ್‌ಎಲ್‌ಸಿ 2021-22ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದೆ. ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ರವರು ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನುಪತ್ರಿಕಾಗೋಷ್ಠಿ ಮೂಲಕ ಪ್ರಕಟಿಸಿದರು.

ಈ ಬಾರಿಯ ಪರೀಕ್ಷೆಗೆ ಒಟ್ಟು 8,53,436 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 7,30,881 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಶೇಕಡಾ 85.63ರಷ್ಟು ಫಲಿತಾಂಶ ಬಂದಿದೆ. ಇನ್ನು ಲಿಂಗವಾರು ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಪ್ರಮಾಣವನ್ನು ನೋಡಿದ್ರೆ ಬಾಲಕಿಯರು ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಶೇಕಡ 90.29ರಷ್ಟು ಬಾಲಕಿಯರು ಉತ್ತೀರ್ಣರಾದರೆ, ಶೇ. 81.30 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. 145 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದ ಸಾಧನೆ ಮಾಡಿದ್ದಾರೆ. 329 ವಿದ್ಯಾರ್ಥಿಗಳು 624 ಅಂಕ ಪಡೆದಿದ್ದರೆ, 472 ವಿದ್ಯಾರ್ಥಿಗಳು 623 ಅಂಕ ಪಡೆದಿದ್ದಾರೆ. ಒಟ್ಟು 40,061 ಮಂದಿ ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ ಪಡೆದು ಪಾಸಾಗಿದ್ದಾರೆ. ಅವರಲ್ಲಿ 35,931 ವಿದ್ಯಾರ್ಥಿಗಳು ಕೇವಲ ಒಂದು ವಿಷಯದಲ್ಲಿ ಗ್ರೇಸ್ ಮಾರ್ಕ್ ಪಡೆದಿದ್ದಾರೆ. (ಮೂರು ಅಂಕಗಳನ್ನು ಗ್ರೇಸ್ ರೂಪದಲ್ಲಿ ನೀಡಲಾಗುತ್ತದೆ)

ವಿದ್ಯಾರ್ಥಿಗಳಿಗೆ ಶೇ.10 ರಷ್ಟು ಗ್ರೇಸ್‌ ಮಾರ್ಕ್ಸ್‌

ಉತ್ತೀರ್ಣಕ್ಕೆ ಬೆರಳಿಣಿಕೆಯಷ್ಟು ಅಂಕಗಳ ಕೊರತೆ ಹೊಂದಿರುವ ವಿದ್ಯಾರ್ಥಿಗಳಿಗೆ ಶೇಕಡಾ 10 ರಷ್ಟು ಗ್ರೇಸ್‌ ಮಾರ್ಕ್ಸ್‌ ನಿಡಲಾಗಿದೆ.

ಕಳೆದ ವರ್ಷ ಕೋವಿಡ್‌ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ 5 ಅಂಕಗಳ ಬದಲಾಗಿ 10 ಕೃಪಾಂಕಗಳನ್ನು ನೀಡಲಾಗಿತ್ತು. ಈ ಬಾರಿಯೂ ಕೂಡಾ ಕೊರೊನಾ ಎರಡನೇ ಅಲೆ ಇದ್ದಿದ್ದರಿಂದ ಮಕ್ಕಳಿಗೆ ಸರಿಯಾದ ಭೌತಿಕ ತರಗತಿಗಳು ನಡೆಯದಿರುವ ಕಾರಣ 10 ಗ್ರೇಸ್‌ ಮಾರ್ಕ್ಸ್‌ ಗಳನ್ನು ಶಿಕ್ಷಣ ಇಲಾಖೆ ನೀಡಿದೆ.

ಜಿಲ್ಲಾವರು ಫಲಿತಾಂಶದಲ್ಲಿ ಗ್ರೇಡ್ ವ್ಯವಸ್ಥೆಯನ್ನು ತರಲಾಗಿದ್ದು, ಎ ಗ್ರೇಡ್ ನಲ್ಲಿ 32 ಜಿಲ್ಲೆಗಳಿದ್ದರೆ, 2 ಜಿಲ್ಲೆಗಳು ಬಿ ಗ್ರೇಡ್ ಪಡೆದಿವೆ. 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.

ವಿದ್ಯಾರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕೃತ karresults.nic.in / sslc.karnataka.gov.in ವೆಬ್‌ಸೈಟ್‌ನಲ್ಲಿ ಮಧ್ಯಾಹ್ನ ಫಲಿತಾಂಶ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಮಾತ್ರವಲ್ಲದೇ, ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಫೋನ್‌ ನಂಬರ್‌ಗೆ ಎಸ್‌ಎಂಎಸ್‌ ಮೂಲಕವು ಫಲಿತಾಂಶ ಬರಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮಾರ್ಚ್ 28 ರಿಂದ ಏಪ್ರಿಲ್‌ 11 ರವರೆಗೆ ನಡೆಸಲಾಗಿತ್ತು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಏಪ್ರಿಲ್‌ 12 ರಂದೇ ಕೀ ಉತ್ತರಗಳನ್ನು ಬಿಡುಗಡೆ ಮಾಡಿತ್ತು.

ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ 27 ಮೇಯಿಂದ ಜೂನ್ 4 ರ ವರೆಗೆ ನಡೆಯಲಿದೆ. ಮೇ 20 ರಿಂದ ಆನ್ಲೈನ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದಾಗಿದೆ.

ಒತ್ತಡದಲ್ಲಿರುವ ವಿದ್ಯಾ ರ್ಥಿಗಳಿಗೆ ಸಹಾಯವಾಣಿ

ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಹಿನ್ನೆಲೆ ಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಮ್ಹಾನ್ಸ್ ಸಹಾಯದೊಂದಿಗೆ ಮಾನಸಿಕ ಆರೋಗ್ಯ ಸಹಾ ಯವಾಣಿ ತೆರೆದಿದೆ. ಒತ್ತಡ ದಲ್ಲಿರುವ ವಿದ್ಯಾ ರ್ಥಿಗಳಿಗೆ ಈ ಮೂಲಕ ಟೆಲಿ ಕೌನ್ಸೆಲಿಂಗ್‌ ಒದಗಿಸಲಾಗುತ್ತಿದ್ದು, ವಿದ್ಯಾರ್ಥಿಗಳು 080-46110007 ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದ್ದಾರೆ.

2021ರ SSLC ಫಲಿತಾಂಶದ ವಿವರ

ಕಳೆದ ಬಾರಿ ಕೋವಿಡ್‌ ಹಿನ್ನಲೆಯಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿಯು ಕೆಲವು ಕಟ್ಟುನಿಟ್ಟಿನ ಮಾರ್ಗಸೂಚಿಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿತ್ತು. ಜುಲೈ 19,21ರಂದು ಒಂದು ದಿನಕ್ಕೆ ಮೂರು ವಿಷಯದಂತೆ ಕೇವಲ ಎರಡು ದಿನಗಳಲ್ಲಿ ಪರೀಕ್ಷೆ ಮಾಡಿ ಮುಗಿಸಿತ್ತು. ಕಳೆದ ಬಾರಿ ಶೇಕಡಾ 99.9 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಬೆಂಗಳೂರು ಉತ್ತರ ಪ್ರಥಮ ಸ್ಥಾನ ಪಡೆದುಕೊಂಡರೆ, ಬೆಂಗಳೂರು ದಕ್ಷಿಣ ದ್ವಿತೀಯ ಸ್ಥಾನವನ್ನ ಪಡೆದುಕೊಂಡಿತ್ತು. ಇನ್ನು ಬಳ್ಳಾರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿತ್ತು. ಕಳೆದ ಬಾರಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
2021ನೇ ಸಾಲಿನಲ್ಲಿ 157 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದಿದ್ದರು.

ಕೊರೊನಾ ಕಾರಣದಿಂದಾಗಿ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ಜೂನ್‌ 25 ರಿಂದ ಜುಲೈ 4 ರವರೆಗೆ ನಡೆಸಲಾಗಿತ್ತು. 8 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 2020ರಲ್ಲಿ ಶೇಕಡ 71.80 ರಷ್ಟು ಫಲಿತಾಂಶ ಬಂದಿತ್ತು.

error: Content is protected !! Not allowed copy content from janadhvani.com