janadhvani

Kannada Online News Paper

ಬಾಲಕಿಗೆ ವೇದಿಕೆ ನಿಷೇಧ- ಸಮಸ್ತ ಕಾರ್ಯದರ್ಶಿ ವಿರುದ್ಧ ಪ್ರಕರಣ ದಾಖಲು

ವಿವಾದ ಅನಗತ್ಯ, ವಿದ್ಯಾರ್ಥಿನಿಯನ್ನು ಅವಮಾನಿಸಿಲ್ಲ, ಸಮಸ್ತದ ನಿಲುವು ವ್ಯಕ್ತಪಡಿಸಲಾಗಿದೆ

ತಿರುವನಂತಪುರ: ಬಾಲಕಿಗೆ ವೇದಿಕೆ ನಿಷೇಧಿಸಲಾಗಿದೆ ಎಂದು ಆರೋಪಿಸಿ, ಸಮಸ್ತ ಕಾರ್ಯದರ್ಶಿ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಕ್ಕಳ ಹಕ್ಕು ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಘಟನೆಯಲ್ಲಿ ಆಯೋಗವು ಅಬ್ದುಲ್ಲಾ ಮುಸ್ಲಿಯಾರ್ ಮತ್ತು ಪೆರಿಂತಲ್ಮಣ್ಣ ಸಿಐಗೆ ನೋಟಿಸ್ ಕಳುಹಿಸಿದೆ. ಮಲಪ್ಪುರಂ ಜಿಲ್ಲಾ ಮಕ್ಕಳ ರಕ್ಷಣಾ ಆಯುಕ್ತರಿಂದಲೂ ವಿವರಣೆ ಕೇಳಲಾಗಿತ್ತು.

ಇದಕ್ಕೂ ಮುನ್ನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಸಾರ್ವಜನಿಕವಾಗಿ ಬಾಲಕಿಗೆ ಕಿರುಕುಳ ನೀಡುವುದು ಅಪರಾಧವಾಗಿದ್ದು, ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

‘ಹೆಣ್ಣು ಮಕ್ಕಳ ಘನತೆ, ಅಭಿಮಾನ ಕಾಪಾಡಲು ರಾಜಕೀಯ ಪಕ್ಷಗಳು ಮಧ್ಯಪ್ರವೇಶಿಸಬೇಕು. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳ ಮೌನಕ್ಕೆ ತೀವ್ರ ಬೇಸರವಿದೆ. ಅಚ್ಚರಿಯ ಸಂಗತಿ ಎಂದರೆ ಬಾಲಕಿಗೆ ಕಿರುಕುಳ ನೀಡಿದವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.ಅವಮಾನಿಸಲ್ಪಟ್ಟರೂ ಅನಗತ್ಯವಾಗಿ ಪ್ರತಿಕ್ರಿಯಿಸದೇ ಮೌನವಹಿಸಿರುವ ಹುಡುಗಿ ಮತ್ತು ಕುಟುಂಬಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಇಂತಹ ವಿಷಯಗಳು ಇಸ್ಲಾಮೋಫೋಬಿಯಾ ಬೆಳವಣಿಗೆಗೆ ಕೊಡುಗೆ ನೀಡುತ್ತವೆ. “ಇಸ್ಲಾಂ ಧರ್ಮವು ಹೆಣ್ಣು ಭ್ರೂಣಗಳನ್ನು ಕೊಲ್ಲುವುದನ್ನೂ ನಿಷೇಧಿಸಿದೆ” ಎಂದು ಅವರು ಹೇಳಿದರು.

ವಿದ್ಯಾರ್ಥಿನಿಯನ್ನು ಅವಮಾನಿಸಲಾಗಿದೆಯೇ?

ಬಹು: ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ ಅವರು ಭಾಗವಹಿಸಿದ್ದ ಸಮಾರಂಭವೊಂದರಲ್ಲಿ ಕಳೆದ ಸಾಲಿನ ಮದ್ರಸಾ ಪಬ್ಲಿಕ್ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವಿತ್ತು.

ವಿದ್ಯಾರ್ಥಿಗಳ ಪಟ್ಟಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಹೆಸರುಗಳಿದ್ದು, ಅವರನ್ನು ವೇದಿಕೆಗೆ ಕರೆದು ಸನ್ಮಾನಗಳನ್ನು ನೀಡಲಾಗಿದೆ. ಈ ಸಂದರ್ಭದಲ್ಲಿ 10 ನೇ ತರಗತಿಯಲ್ಲಿ ಕಲಿತಿರುವ ವಿದ್ಯಾರ್ಥಿನಿಯನ್ನು ಸಾರ್ವಜನಿಕ ವೇದಿಕೆಗೆ ಕರೆದಿರುವ ಬಗ್ಗೆ ಉಸ್ತಾದರಿಗೆ ಅಸಮಾಧಾನ ಉಂಟಾಗಿದ್ದು, ಹಿರಿಯ ವಿದ್ಯಾರ್ಥಿನಿಗಳನ್ನು ಸಾರ್ವಜನಿಕ ವೇದಿಕೆಗೆ ಹತ್ತಿಸುವುದು ಸಮಸ್ತದ ನಿಲುವಿಗೆ ವಿರುದ್ಧವಾಗಿದೆ ಎಂದು ಉಸ್ತಾದರು ಆಯೋಜಕರಿಗೆ ತಾಕೀತು ನೀಡಿದ್ದರು.

ಈ ವೀಡಿಯೋ ತುಣುಕನ್ನು ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟು, ಕೆಲವು ಕಿಡಿಗೇಡಿಗಳು ವಿಕೃತ ಆನಂದ ಪಡೆದಿದ್ದಾರೆ. ಕೆಲವು ಸಮಾಜ ಸೇವಕರೆನ್ನುವವರು ಉಸ್ತಾದರ ವಿರುದ್ಧ ಚಕಾರವೆತ್ತಿ ಸಾಮಾಜಿಕ ತಾಣದಲ್ಲಿ ತಮ್ಮ ಧರ್ಮ ವಿರೋಧಿ ನಿಲುವನ್ನು ಉಗಿದಿದ್ದಾರೆ.

ಆ ವಿದ್ಯಾರ್ಥಿನಿಯು ಸನ್ಮಾನವನ್ನು ಪಡೆದು, ವೇದಿಕೆಯಿಂದ ತೆರಳಿದ ಬಳಿಕವಷ್ಟೆ ಉಸ್ತಾದರು ಅದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರೇ ಹೊರತು ವಿದ್ಯಾರ್ಥಿನಿಯನ್ನು ತಡೆದಿರಲಿಲ್ಲ.

ವಿವಾದ ಅನಗತ್ಯ- ಆಯೋಜಕರು

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಮಾರಂಭದ ಆಯೋಜಕರಲ್ಲೊಬ್ಬರಾದ, ಅಬೂ ತಾಹಿರ್ ಮುಸ್ಲಿಯಾರ್, ಎಂ.ಟಿ.ಅಬ್ದುಲ್ಲಾಹ್ ಉಸ್ತಾದರು ವಿದ್ಯಾರ್ಥಿನಿಯನ್ನು ಅವಮಾನಿಸಲಿಲ್ಲ, ಸಮಸ್ತದ ನಿಲುವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೆ. ಈ ಬಗ್ಗೆ ವಿದ್ಯಾರ್ಥಿನಿ ಮತ್ತು ಪೋಷಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಅವರಿಗೂ ಯಾವುದೇ ವೈಮನಸ್ಯವಿಲ್ಲ, ಸಾಮಾಜಿಕ ತಾಣಗಳ ಮೂಲಕ ಅನಗತ್ಯ ವಿವಾದವನ್ನು ಉಂಟು ಮಾಡಲಾಗಿದೆ ಎಂದರು.

error: Content is protected !! Not allowed copy content from janadhvani.com