ಮಂಗಳೂರು : ರಾಜ್ಯದಲ್ಲಿ ಧ್ವನಿವರ್ಧಕ ಬಳಕೆಯ ಬಗ್ಗೆ ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿದಂತೆ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ನಿರ್ದಿಷ್ಟ ಡೆಸಿಬಲ್, ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನಿರ್ದಿಷ್ಟ ಮಿತಿಯ ಧ್ವನಿವರ್ಧಕ ಬಳಸಲು ಸೂಚಿಸಿದ್ದು, ಅದಕ್ಕೆ ಸೂಕ್ತ ಸುತ್ತೋಲೆ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದು, ಅದಕ್ಕೆ ನಮ್ಮ ಸಮ್ಮತಿ ಇದೆ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.
ಪ್ರಮೋದ್ ಮುತಾಲಿಕ್ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಕೆಲವರು ಆಝಾನ್ ಸಮಯದಲ್ಲಿ ಹನುಮಾನ್ ಚಾಲಿಸ, ಭಜನೆ, ಸುಪ್ರಭಾತ ಮಾಡುವುದಾಗಿ ಆದೇಶವನ್ನು ಕೊಟ್ಟಿರುತ್ತಾರೆ. ಇದು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರವಾಗಿದೆ. ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರು ಪ್ರಮೋದ್ ಮುತಾಲಿಕ್ ರನ್ನು ಉಡುಪಿ ಪ್ರವೇಶಕ್ಕೆ ನಿರ್ಬಂಧಿಸಿದ್ದು, ಅನೇಕ ನಾಯಕರು ಗಳು ಅದರಲ್ಲೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಮಾಜದಲ್ಲಿ ಶಾಂತಿ ಕದಡುತ್ತಿರುವ ಪ್ರಮೋದ್ ಮುತಾಲಿಕ್ ಸೇರಿದಂತೆ ಇನ್ನಿತರರನ್ನು ಬಂಧಿಸಬೇಕು ಎಂದು ಹೇಳಿಕೆ ನೀಡಿದ್ದರು. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಸೂದ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನಾಯಕರಾದ ಬಿ.ಕೆ. ಹರಿಪ್ರಸಾದ್‌ರವರು ಸೌಹಾರ್ದ ವಾತಾವರಣ ಕೆಡಿಸಿ ಅಶಾಂತಿ ಸೃಷ್ಟಿಸುವ ಭಯೋತ್ಪಾದಕರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ದೇಶದ್ರೋಹಿ, ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಪ್ರಮೋದ್ ಮುತಾಲಿಕ್ ಮಂಗಳೂರಿಗೆ ಬಂದು ನಮ್ಮ ಮಂಗಳೂರಿನ ಒಳ್ಳೆಯ ನಡತೆಯ ಜನರೊಂದಿಗೆ ಲವಲವಿಕೆಯಿಂದ ಬೆರೆಯುವ ಪೊಲೀಸ್ ಆಯುಕ್ತ ಶಶಿಕುಮಾರ್ ರವರು ಮುತಾಲಿಕ್ ರಿಗೆ ತನ್ನ ಕುರ್ಚಿ ಬಿಟ್ಟು ಬಂದು ಸ್ವಾಗತಿಸಿರುತ್ತಾರೆ. ಸಾಮಾನ್ಯವಾಗಿ ಆಯುಕ್ತರು ಮನವಿ ನೀಡಲು ಆಗಮಿಸುವವರೊಂದಿಗೆ ಮಾತುಕತೆ ಮಾಡುವುದು ಸಹಜ. ಆದರೆ ಮುತಾಲಿಕ್ ರನ್ನು ಕಂಡೊಡನೆ ಕುರ್ಚಿ ಬಿಟ್ಟು ಬಂದು ಸ್ವಾಗತಿಸಿರುವುದನ್ನು ನಾವು ಖಂಡಿಸುತ್ತೇವೆ ಎಂದು ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.
ದ.ಕ., ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಯು ಸುಪ್ರೀಂ ಆದೇಶವನ್ನು ಪಾಲಿಸಬೇಕೆಂದು ಎಲ್ಲಾ ಜಮಾಅತಿಗೆ ಮನವಿ ಮಾಡಿರುತ್ತೇವೆ ಎಂದು ಮಸೂದ್ ತಿಳಿಸಿದ್ದಾರೆ. ಧ್ವನಿವರ್ಧಕ ವಿಷಯದಲ್ಲಿ ರಾಮಸೇನೆಯ ಮುತಾಲಿಕ್ ಮುಸ್ಲಿಂ ಜನಾಂಗದವರನ್ನು ದೇಶದ್ರೋಹಿ ಎಂದು ಹೇಳಿರುತ್ತಾರೆ. ಈ ಬಗ್ಗೆ ಮುತಾಲಿಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಆಗ್ರಹಿಸುವುದಾಗಿ ಮಸೂದ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸರ್ಕಾರ ಕೊಟ್ಟಿರುವ ಸೂಚನೆಗಳನ್ನು ನಾನು ಕುದ್ರೋಳಿ ಮಸೀದಿಯ ಅಧ್ಯಕ್ಷನಾಗಿ ಪಾಲಿಸಲು ತಿಳಿಸಿದ್ದೇನೆ.
ಹಿಂದೂ ಸಮಾಜೋತ್ಸವಕ್ಕೆ ಲಿಂಬೆ ಶರ್ಬತ್
ಹಿಂದೂ ಸಮಾಜೋತ್ಸವ, ಬಾಬರಿ ಮಸೀದಿ ವಿಷಯದಲ್ಲಿ ಆಗಿನ ಶಾಸಕ ಯೋಗೀಶ್ ಭಟ್‌ರವರೊಂದಿಗೆ ಮಾತನಾಡುವ ಸಮಯದಲ್ಲಿ ಮೊದಲಿನ ಸಭೆ, ಯೋಗೀಶ್ ಭಟ್‌ರವರ ಮನೆಯಲ್ಲಿ ನಡೆಯಿತು. ಎರಡನೇ ಸಭೆ ನನ್ನ ಮನೆಯಲ್ಲಿ ಜರುಗಿದ್ದು ಆ ಸಭೆಯಲ್ಲಿ ಅಂದಿನ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ನಾಗರಾಜ್ ಶೆಟ್ಟಿ ಮತ್ತು ಜಿಲ್ಲಾಧಿಕಾರಿ, ಐ.ಜೆ. ಎಲ್ಲರೂ ಭಾಗವಹಿಸಿದ್ದು, ಈ ಸಭೆಯಲ್ಲಿ ನಾಗರಾಜ್ ಶೆಟ್ಟಿಯವರು ಸಮಾಜೋತ್ಸವಕ್ಕೆ ನೀವು ನಮಗೆ ಲಿಂಬೆ ಶರಬತ್ತು ನೀಡಬೇಕೆಂದು ಹೇಳಿದಾಗ ನಾವೆಲ್ಲ ಸೇರಿ ಲಿಂಬೆ ಮತ್ತು ಸಕ್ಕರೆಯನ್ನು ಕೊಟ್ಟಿರುತ್ತೇವೆ.
ಈ ನಿಟ್ಟಿನಲ್ಲಿ ಬೆಂಬಲ ನೀಡಿದ್ದ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಕೃತಜ್ಞತೆಗಳು. ಇಸ್ಲಾಂ ಧರ್ಮವು ಶಾಂತಿ ಕಾಪಾಡುವ ಧರ್ಮ ಎಂದು ಈ ಸಂದರ್ಭ ಅಲ್ ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷರಾದ ಬಿ.ಎ.ಮುಮ್ತಾಝ್ ಅಲಿ, ಅಶ್ರಫ್ ಕೆ, ಬಾಷಾ ತಂಙಳ್, ಸಿ.ಮುಹಮ್ಮದ್ ಪುತ್ತುಬಾವ ಹಾಜಿ ಮೊದಲಾದವರು ಉಪಸ್ಥಿತರಿದ್ದರು.