ಹೊಸದಿಲ್ಲಿ: ಫೆಡರಲ್ ರಿಸರ್ವ್‌ನ ಆಕ್ರಮಣಕಾರಿ ದರ ಏರಿಕೆಯ ನಂತರ ಅಮೆರಿಕದ ಖಜಾನೆ (ಟ್ರೆಷರಿ) ಬಾಂಡ್‌ಗಳ ಗಳಿಕೆ ಹೆಚ್ಚಾಗಿದ್ದು, ಇದರಿಂದ ಸೋಮವಾರ ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ದೇಶೀಯ ಈಕ್ವಿಟಿ ಮಾರುಕಟ್ಟೆಗಳು ದುರ್ಬಲಗೊಂಡಿರುವುದು, ವಿದೇಶಿ ಹೂಡಿಕೆದಾರರು ನಿರಂತರವಾಗಿ ಷೇರುಗಳನ್ನು ಮಾರಾಟ ಮಾಡುತ್ತಿರುವುದು ಕೂಡ ಭಾರತೀಯ ಕರೆನ್ಸಿಯನ್ನು ದುರ್ಬಲಗೊಳಿಸಿದೆ ಎಂದು ಡೀಲರ್‌ಗಳು ಹೇಳಿದ್ದಾರೆ.
ಡಾಲರ್ ವಿರುದ್ಧ ರೂಪಾಯಿ 77 ರೂ. ಮಟ್ಟಕ್ಕಿಂತಲೂ ಕೆಳಕ್ಕಿಳಿದಿದ್ದು 77.1325 ರೂ.ಗೆ ಕುಸಿದಿದೆ. ಈ ಹಿಂದೆ ಮಾರ್ಚ್ 7 ರಂದು ರೂಪಾಯಿ 76.98 ರೂ.ಗೆ ಇಳಿಕೆಯಾಗಿದ್ದೇ ಈ ಹಿಂದಿನ ಕನಿಷ್ಠ ಮಟ್ಟವಾಗಿತ್ತು.
ಹಿಂದಿನ ಮುಕ್ತಾಯ ಬೆಲೆ 76.9150 ರೂ.ಗೆ ಹೋಲಿಸಿದರೆ ರೂಪಾಯಿ ಸೋಮವಾರ 76.9580 ರೂ.ನಲ್ಲಿ ವಹಿವಾಟು ಆರಂಭಿಸಿತು. ಇಲ್ಲಿಯವರೆಗೆ ದಿನದಲ್ಲಿ ರೂಪಾಯಿ 76.9580-77.3450 ಮಟ್ಟದಲ್ಲಿ ವಹಿವಾಟು ನಡೆಸಿದೆ.
ಡಾಲರ್ ಆರ್ಭಟ
ಆರು ಪ್ರಮುಖ ಕರೆನ್ಸಿಗಳ ವಿರುದ್ಧ ಅಮೆರಿಕದ ಡಾಲರ್‌ನ ಮಟ್ಟವನ್ನು ಅಳೆಯುವ ‘ಅಮೆರಿಕ ಡಾಲರ್ ಸೂಚ್ಯಂಕ’ವು 100ರ ಗಡಿಯನ್ನು ದಾಟಿ 103.98 ರಷ್ಟಿತ್ತು. ಇದು ಹಿಂದಿನ ಮುಕ್ತಾಯ 103.79ಗಿಂತ ಪ್ರಬಲವಾಗಿದೆ. ಏತನ್ಮಧ್ಯೆ, 10-ವರ್ಷದ ಅಮೆರಿಕ ಟ್ರೆಷರಿ ಬಾಂಡ್ ಗಳಿಕೆಯು ಶೇ. 3.14ಕ್ಕೆ ಜಿಗಿದಿದ್ದು, ಹಿಂದಿನ ಮುಕ್ತಾಯಕ್ಕಿಂತ 10 ಮೂಲ ಅಂಕ ಏರಿಕೆ ಕಂಡಿದೆ.
ಕಳೆದ ವಾರ ಅಮೆರಿಕದ ಕೇಂದ್ರೀಯ ಬ್ಯಾಂಕ್ ‘ಫೆಡರಲ್ ರಿಸರ್ವ್’ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಬಡ್ಡಿದರಗಳಲ್ಲಿ 50 ಮೂಲ ಅಂಕ ಹೆಚ್ಚಿಸಿತ್ತು. ಇದಾದ ಬಳಿಕ ಮಾರುಕಟ್ಟೆಯಲ್ಲಿ ಈ ಬೆಳವಣಿಗೆಗಳು ನಡೆದಿವೆ.
ಹೆಚ್ಚಿನ ಅಮೆರಿಕ ಬಡ್ಡಿದರಗಳಿಂದಾಗಿ ಭಾರತದಂತಹ ಅಪಾಯಕಾರಿ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಸ್ವತ್ತುಗಳು ಆಕರ್ಷಣೆ ಕಳೆದುಕೊಳ್ಳುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ಕೆಲವು ತಿಂಗಳುಗಳಿಂದ ದೇಶೀಯ ಷೇರುಗಳನ್ನು ತೀವ್ರಗತಿಯಲ್ಲಿ ಮಾರಾಟ ಮಾಡುತ್ತಿದ್ದು, 2022ರಲ್ಲಿ ಇಲ್ಲಿಯವರೆಗೆ 1.3 ಲಕ್ಷ ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.
ದುರ್ಬಲಗೊಳ್ಳುತ್ತಿರುವ ರೂಪಾಯಿಯಿಂದ ಭಾರತೀಯ ಆಸ್ತಿಗಳಿಂದ ಎಫ್‌ಐಐಗಳು ಗಳಿಸುವ ಆದಾಯ ಕೂಡ ಕುಸಿಯುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ದುರ್ಬರ ದಿನಗಳಿಗೆ ದೂಡಲಿದೆ.
ಕಳೆದ ವಾರ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಏರಿಕೆ ಮಾಡಿರುವುದು ಮಧ್ಯಮಾವಧಿಯಲ್ಲಿ ರೂಪಾಯಿಯನ್ನು ಬೆಂಬಲಿಸುವ ಅಂಶವೇನೋ ಹೌದು. ಆದರೆ ತಕ್ಷಣಕ್ಕೆ ರೂಪಾಯಿಯ ಮೇಲೆ ಕೆಳಮುಖ ಒತ್ತಡವನ್ನು ಉಂಟುಮಾಡಬಹುದು ಎಂದು ಡೀಲರ್‌ಗಳು ಹೇಳಿದ್ದಾರೆ.
ಇನ್ನೊಂದೆಡೆ ಕಳೆದ ವಾರ ಶೇ. 4ರಷ್ಟು ಕುಸಿತ ಕಂಡ ಬಳಿಕ ಬಿಎಸ್‌ಇ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಸೋಮವಾರ ಬೆಳಿಗ್ಗೆ 9:40ಕ್ಕೆ ಸುಮಾರು ಶೇ. 2ರಷ್ಟು ಕುಸಿದಿದ್ದವು.
“ಅನೇಕ ಕಾರಣಗಳಿಂದ ರೂಪಾಯಿ ಸಾರ್ವಕಾಲಿಕ ಕುಸಿತವನ್ನು ಅನುಭವಿಸುತ್ತಿರುವುದರಿಂದ ನಾವು ಬಲಿಪಶುಗಳಾಗಿದ್ದೇವೆ. ಕೆಲವು ಅಂಶಗಳನ್ನು ವಿವರಿಸುವುದಾದರೆ, ಪ್ರಬಲವಾದ ಅಮೆರಿಕ ಡಾಲರ್, ದುರ್ಬಲ ಏಷ್ಯಾ ಕರೆನ್ಸಿಗಳು, ತೈಲ ಬೆಲೆಗಳಲ್ಲಿನ ಏರಿಕೆ, ಮುಂದುವರಿದ ರಷ್ಯಾ-ಉಕ್ರೇನ್ ಯುದ್ಧ, ಎಫ್‌ಐಐ ಹೊರಹರಿವು ಮತ್ತು ಹಣದುಬ್ಬರವನ್ನು ನಿಭಾಯಿಸಲು ಆರ್‌ಬಿಐ ಆಶ್ಚರ್ಯಕರ ರೀತಿ ಬಡ್ಡಿ ಹೆಚ್ಚಳ ಮಾಡಿರುವುದು ಇದರ ಹಿಂದಿನ ಕಾರಣಗಳಾಗಿರಬಹುದು,” ಎಂದು ಸಿಆರ್ ಫಾರೆಕ್ಸ್ ಸಲಹೆಗಾರರಾದ ಎಂಡಿ ಅಮಿತ್ ಪಬಾರಿ ಹೇಳಿದ್ದಾರೆ.
ಆದಾಗ್ಯೂ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಮಾರಾಟದ ಮೂಲಕ ವಿನಿಮಯ ದರದಲ್ಲಿನ ಅತಿಯಾದ ಏರಿಳಿತವನ್ನು ಆರ್‌ಬಿಐ ತಡೆಯುತ್ತದೆ ಎಂದು ಡೀಲರ್‌ಗಳು ನಿರೀಕ್ಷಿಸುತ್ತಿದ್ದಾರೆ.
ಸುಮಾರು 600 ಬಿಲಿಯನ್ ಡಾಲರ್ ವಿದೇಶಿ ವಿನಿಮಿಯ ಮೀಸಲು ಸಂಗ್ರಹವನ್ನು ಹೊಂದಿರುವ ಆರ್‌ಬಿಐ ರೂಪಾಯಿಯ ಸವಕಳಿ ತಡೆಯುವ ಸಲುವಾಗಿ ಫೆಬ್ರವರಿ ಅಂತ್ಯದಿಂದ ಆಕ್ರಮಣಕಾರಿಯಾಗಿ ಡಾಲರ್‌ಗಳನ್ನು ಮಾರಾಟ ಮಾಡುತ್ತಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ.
ಆರ್‌ಬಿಐ ಉದ್ದೇಶವನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದಿರುವ ಅಮಿತ್ ಪಬಾರಿ, ರೂಪಾಯಿಯು ವಾರದಲ್ಲಿ 76.70 ರಿಂದ 77.30ರ ಶ್ರೇಣಿಯಲ್ಲಿ ವಹಿವಾಟು ನಡೆಸುವ ಸಾಧ್ಯತೆಯಿದೆ ಎಂದು ಅಂದಾಜಿಸಿದ್ದಾರೆ.
ಮೋದಿ ಹೈ ತೋ ಮಮ್ಕಿನ್ ಹೈ