ಬೆಂಗಳೂರು: ಇಂಟರ್ನೆಟ್ ಕರೆಯ ಮೂಲಕ ನನಗೆ ಬೆದರಿಕೆ ಹಾಕ್ತಾರೆ. ನನಗೆ ಕೊಟ್ಟಿರುವ ಸೆಕ್ಯೂರಿಟಿ ವ್ಯವಸ್ಥೆಯನ್ನ 3 ವರ್ಷಗಳ ಹಿಂದೆಯೆ ತೆಗೆಯಲಾಗಿದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಗಾಂಧಿಗೆ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಬೆಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ತಮಗೆ ಬೆದರಿಕೆ ಇರುವ ಬಗ್ಗೆ ಪ್ರಿಯಾಂಕ್ ಗಾಂಧಿ ಮಾಹಿತಿ ನೀಡಿದರು.
ಸರ್ಕಾರದ ಅಸಮರ್ಥತೆಗೆ ಈ ನೋಟೀಸ್ ಸಾಕ್ಷಿ
ಈ ಸಂಬಂಧ ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ನಾನೇ ಭೇಟಿ ಮಾಡಿದ್ದೆ. ಸೆಕ್ಯೂರಿಟಿ ಬಗ್ಗೆ ಆಗ ಕೇಳಿದ್ದೆ. ಆದರೆ ನನಗೆ ಯಾವ ಸೆಕ್ಯೂರಿಟಿಯನ್ನೂ ಕೊಟ್ಟಿಲ್ಲ. ಕಳೆದ ಬಾರಿ ಬೆದರಿಕೆ ಕರೆಯ ಬಗ್ಗೆ ತನಿಖೆ ನಡೆದಾಗ ಅಮೆರಿಕ ಸರ್ವರ್ ವರೆಗೆ ಹೋಗಿ ಎಂಡ್ ಆಯ್ತು. ಅದರ ನಂತರ ಮೂಲ ಸಿಕ್ಕಿಲ್ಲ ಎಂದರು. ನಾನೂ ಸಹ ಹೋಗಲಿ ಬಿಡ್ರಪ್ಪ ಅಂದೆ, ಈಗ ಕಂಪ್ಲೆಂಟ್ ಕೊಟ್ಟರೂ ಇಷ್ಟೇ ಆಗೋದು ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಸಿಐಡಿ ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿನ್ನೆ ಸಂಜೆ ನನ್ನ ಮನೆಗೆ ಸಿಐಡಿಯವರು ಒಂದು ನೋಟೀಸ್ ಕೊಟ್ಟು ಹೋಗಿದ್ದಾರೆ. ಆ ನೋಟೀಸ್ನಲ್ಲಿ ಬಹಳಷ್ಟು ವಿಚಾರ ಪ್ರಸ್ತಾಪಿಸಿದ್ದಾರೆ. ಪಿಎಸ್ಐ ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದಾಖಲೆಗಳಿವೆ ಎಂದು ನೀವು ಹೇಳಿದ್ದೀರಿ, ಆ ದಾಖಲೆಗಳ ಸಲ್ಲಿಸಿ ಎಂದಿದ್ದಾರೆ. ಇದು ಸರ್ಕಾರದ ಅಸಮರ್ಥತೆಗೆ ಈ ನೋಟೀಸ್ ಸಾಕ್ಷಿ ಎಂದು ವಾಗ್ದಾಳಿ ನಡೆಸಿದರು.