ದುಬೈ | ದುಬೈ ಅಂತರಾಷ್ಟ್ರೀಯ ಹೋಲಿ ಖುರ್‌ಆನ್ ಅವಾರ್ಡ್ 25 ನೇ ಆವೃತ್ತಿಯು ಮುಕ್ತಾಯಗೊಂಡಿದೆ. ಸ್ಪರ್ಧೆಯಲ್ಲಿ ಅಲ್ಜೀರಿಯಾದ ಬೂಬಕ್ಕರ್ ಅಬ್ದುಲ್ ಹಾದಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಕಾರಂದೂರು ಜಾಮಿಆ ಮರ್ಕಝ್ ವಿದ್ಯಾರ್ಥಿ, ಕೋಝಿಕ್ಕೋಡ್‌ನ ಈಙಾಪುಝದ ಹಾಫಿಳ್ ಝೈನುಲ್ ಆಬಿದ್ 10 ಉನ್ನತ ಶ್ರೇಣಿಯಲ್ಲಿ ಆರನೇ ಸ್ಥಾನವನ್ನು ಪಡೆದರು.
ದುಬೈ ಇಂಟರ್‌ನ್ಯಾಶನಲ್ ಹೋಲಿ ಖುರ್‌ಆನ್ ಪ್ರಶಸ್ತಿಯು ಅತಿ ದೊಡ್ಡ ಬಹುಮಾನ ವಿಜೇತ ಸ್ಪರ್ಧೆಯಾಗಿದೆ. ದುಬೈನ ಅಲ್ ಮಂಝರ್ ಹಾಲ್ ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಯಿತು. ಸೆನೆಗಲ್ ಮತ್ತು ಈಜಿಪ್ಟ್‌ನ ಪ್ರತಿನಿಧಿಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದರು.ಶೈಖ್ ಮನ್ಸೂರ್ ಬಿನ್ ಮುಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಪ್ರಶಸ್ತಿ ಪ್ರದಾನ ಮಾಡಿದರು.
ಝೈನುಲ್ ಅಬಿದ್ ಈಗಾಗಲೇ ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಹೋಲಿ ಖುರ್‌ಆನ್ ಸ್ಪರ್ಧೆಗಳನ್ನು ಗೆದ್ದಿದ್ದಾರೆ. ತಾಂಜಾನಿಯಾದಲ್ಲಿ 2021 ರ ಇಂಟರ್ನ್ಯಾಷನಲ್ ಹೋಲಿ ಖುರ್‌ಆನ್ ಅವಾರ್ಡ್ ಸ್ಪರ್ಧೆಯಲ್ಲೂ ಪಾಲ್ಗೊಂಡಿದ್ದರು. ಮರ್ಕಝ್ ಜೂನಿಯರ್ ಶರಿಯಾ ವಿದ್ಯಾರ್ಥಿಯಾಗಿರುವ ಝೈನುಲ್ ಅಬಿದ್ ಕ್ಯಾಲಿಕಟ್ ವಿಶ್ವವಿದ್ಯಾನಿಲಯದಲ್ಲಿ ಬಿಎ ಇಂಗ್ಲಿಷ್ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ.
ಇವರು ಈಙಾಪುಝ ವಲಿಯೇರಿಯಿಲ್ ಅಬ್ದುರ್ರಹ್ಮಾನ್ ಮತ್ತು ಸಕೀನಾ ದಂಪತಿಯ ಪುತ್ರ. ಝೈನುಲ್ ಆಬಿದ್ ಅವರನ್ನು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅಭಿನಂದಿಸಿದ್ದಾರೆ.
ಅಂತರಾಷ್ಟ್ರೀಯ ಹೋಲಿ ಖುರ್‌ಆನ್ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಮಲೆಯಾಳಿ ವಿದ್ಯಾರ್ಥಿ ಹಾಫಿಝ್ ಝೈನುಲ್ ಅಬಿದೀನ್ ಅವರನ್ನು ಇಸಿಎಚ್ ವತಿಯಿಂದ ಸನ್ಮಾನಿಸಲಾಯಿತು.