ರಾಮನಗರ: ಹಿಂದೂ ಪರಿಷತ್, ಭಜರಂಗದಳದವರು ಕಿಡಿಗೇಡಿಗಳು, ಸಮಾಜಘಾತುಕರು. ಅವರಿಗೆ ರೈತರ ಬದುಕು ಗೊತ್ತಿದೆಯಾ. ನಮ್ಮ ರೈತರು ಕಟ್ ಮಾಡುವ ಮಾಂಸ ಕ್ಲೀನ್ ಮಾಡಲು ಅದೇ ಸಮಾಜದವರೇ ಬರಬೇಕು ಈಗ ಹಲಾಲ್ – ಜಟ್ಕಾ ಕಟ್ ಅಂತಿದ್ದೀರಲ್ಲ ನೀವು ನಿಮ್ಮ ಜಟ್ಕಾ ಮಾಡೋಕು, ಇನ್ನೊಂದು ಮಾಡೋಕು ಅವರೇ ಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಷ್ಮೆ, ಮಾವು ಬೆಳೆ ಮಾರಾಟಕ್ಕೆ ಈ ಪೋಲಿಗಳು ಬರ್ತಾರಾ. ಅಕಾಲಿಕ ಮಳೆಯಿಂದಾಗಿ ಮಾವು ನಷ್ಟವಾಗಿದೆ. ಅದನ್ನ ಖರೀದಿ ಮಾಡಲು ಆ ಸಮಾಜದವರೇ ಬರಬೇಕು. ವಿಶ್ವ ಹಿಂದೂ ಪರಿಷತ್ನವರು ಭಜರಂಗದಳದವರು. ಇವರ ಹೊಟ್ಟೆಪಾಡಿಗೆ, ದೇಶ ಹಾಳು ಮಾಡಲು ಇಂತಹ ವಿಚಾರ ಇಟ್ಟುಕೊಂಡು ಬಂದಿದ್ದಾರೆ. ಇಷ್ಟು ವರ್ಷ ಹಲಾಲ್ ತಿಂದಿದ್ದೇವೆ, ಏನಾಗಿದೆ..? ಈಗ ಹಲಾಲ್ ತಿಂದರೆ ತೊಂದರೆ ಆಗುತ್ತದಾ..?, ನಮ್ಮ ದೇವರು ಮೆಚ್ಚಲ್ವಾ..? ಎಂದು ಪ್ರಶ್ನಿಸಿದ್ದಾರೆ.
ಇನ್ನು ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಜನ ಸತ್ತರು. ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಆಗಲಿಲ್ಲ. ಆಗ ಎಲ್ಲಿದ್ದರೂ ವಿಶ್ವ ಹಿಂದೂ ಪರಿಷತ್, ಭಜರಂಗದಳದವರು. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ಸಿಎಂ ಬೊಮ್ಮಾಯಿಗೆ ಗಂಡಸ್ತನ ಇದ್ದರೆ ಹಲಾಲ್ ವಿವಾದವನ್ನು ತಡೆಯಲಿ. ಸರ್ಕಾರ ಏನು ಗೊತ್ತಿಲ್ಲದಂತೆ ಮೌನವಾಗಿರಬಾರದು, ಅದರ ಅರ್ಥ ಏನು. ಸಮಾಜ ಹೊಡೆಯುವ ಶಕ್ತಿಗಳು ಹ್ಯಾಂಡ್ ಬಿಲ್ ಹಂಚುತ್ತಿದ್ದಾರೆ. ನನಗೆ ಮತ ಮುಖ್ಯವಲ್ಲ, ಈ ನಾಡು ಶಾಂತಿಯಿಂದ ಬದುಕಬೇಕು. ನಾನು ಮೌನವಾಗಿರಲು ಸಾಧ್ಯವಿಲ್ಲ. ಈ ಬಗ್ಗೆ ಮಾತನಾಡಲು ಕಾಂಗ್ರೆಸ್ನವರಿಗೆ ತಾಕತ್ತಿಲ್ಲ ಎಂದು ಕಿಡಿಕಾರಿದ್ದಾರೆ.