janadhvani

Kannada Online News Paper

ಶ್ರೀಲಂಕಾ:ತೀವ್ರ ಆರ್ಥಿಕ ಸಂಕಷ್ಟ-ಅಧ್ಯಕ್ಷರ ನಿವಾಸದ ಎದುರು ಪ್ರತಿಭಟನೆ, ಹಿಂಸಾಚಾರ

ರಾಷ್ಟ್ರಪತಿ ನಿವಾಸದ ಮುಂದೆ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 45 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲಂಬೊ, ಮಾರ್ಚ್ 31: ಶ್ರೀಲಂಕಾದ ಆರ್ಥಿಕ ಸ್ಥಿತಿ ನಿರಂತರವಾಗಿ ಕುಸಿಯ ತೊಡಗಿದೆ. ಖರ್ಚು ಕಡಿತ ಕಾರ್ಯದಲ್ಲಿ ಮಗ್ನವಾಗಿರುವ ಶ್ರೀಲಂಕಾ ಸರ್ಕಾರ, ಈಗ ವಿದ್ಯುತ್ ಉಳಿಸಲು ಬೀದಿ ದೀಪಗಳನ್ನು ಆಫ್ ಮಾಡುವ ನಿರ್ಧಾರ ಕೈಗೊಂಡಿದೆ. ಇಲ್ಲಿನ ಪ್ರಮುಖ ಷೇರುಪೇಟೆಯ ವಹಿವಾಟನ್ನೂ ಈಗಾಗಲೇ ಸ್ಥಗಿತಗೊಳಿಸಲಾಗಿದೆ.

22 ಮಿಲಿಯನ್ ಜನರಿರುವ ದ್ವೀಪ ರಾಷ್ಟ್ರದಲ್ಲಿ ಇಂಧನ ಆಮದು ಮಾಡಿಕೊಳ್ಳಲು ಸರ್ಕಾರಕ್ಕೆ ಸಾಕಷ್ಟು ವಿದೇಶಿ ವಿನಿಮಯವಿಲ್ಲದ ಕಾರಣ ದಿನಕ್ಕೆ 13 ಗಂಟೆಗಳ ಕಾಲ ಕತ್ತಲೆಯಲ್ಲಿ ಬದುಕು ತಳ್ಳುತ್ತಿದ್ದಾರೆ. ವಿದ್ಯುತ್ ಉಳಿತಾಯ ಮಾಡಲು ದೇಶಾದ್ಯಂತ ಬೀದಿ ದೀಪಗಳನ್ನು ಬಂದ್ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ವಿದ್ಯುತ್ ಸಚಿವೆ ಪವಿತ್ರಾ ವನ್ನಿಯಾರಾಚಿ ಸುದ್ದಿಗಾರರಿಗೆ ತಿಳಿಸಿದರು.

ಆಹಾರ ಹಣದುಬ್ಬರವು ಶೇಕಡ 30.2
ವಿದ್ಯುತ್ ಕಡಿತವು, ಈಗಾಗಲೇ ಅಗತ್ಯ ವಸ್ತುಗಳ ಕೊರತೆಯಿಂದ ತತ್ತರಿಸುತ್ತಿರುವ ಶ್ರೀಲಂಕಾದ ಸಂಕಷ್ಟಗಳನ್ನು ಹೆಚ್ಚಿಸಿದೆ. ಅಲ್ಲದೆ ಪ್ರತಿಯೊಂದು ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರವು 18.7% ಕ್ಕೆ ಏರಿದೆ ಎಂದು ಅಂಕಿಅಂಶ ಇಲಾಖೆ ತಿಳಿಸಿದೆ. ಕಳೆದ ವರ್ಷ ಕರೆನ್ಸಿ ಅಪಮೌಲ್ಯೀಕರಣ ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ನಿಷೇಧದ ನಂತರ ಆಹಾರ ಹಣದುಬ್ಬರವು ಮಾರ್ಚ್‌ನಲ್ಲಿ 30.2%ಕ್ಕೆ ಏರಿಕೆಯಾಯಿತು. ಫಸ್ಟ್ ಕ್ಯಾಪಿಟಲ್ ರಿಸರ್ಚ್‌ನ ಸಂಶೋಧನಾ ಮುಖ್ಯಸ್ಥ ಡಿಮಂತ ಮ್ಯಾಥ್ಯೂ, ದಶಕವೊಂದರಲ್ಲಿ ಶ್ರೀಲಂಕಾ ತನ್ನ ಕೆಟ್ಟ ಹಣದುಬ್ಬರದ ಹಂತವನ್ನು ಅನುಭವಿಸುತ್ತಿದೆ ಎಂದು ಹೇಳಿದರು.

ಶನಿವಾರದಂದು ಭಾರತದಿಂದ $500 ಮಿಲಿಯನ್ ಆರ್ಥಿಕ ನೆರವಿನಡಿಯಲ್ಲಿ ಡೀಸೆಲ್ ಸಾಗಣೆಯನ್ನು ನಿರೀಕ್ಷಿಸಲಾಗಿದೆ ಎಂದು ವನ್ನಿಯಾರಾಚಿ ತಿಳಿಸಿದರು. ಆದರೂ ಇದರಿಂದ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇಲ್ಲ. ಒಮ್ಮೆ ಬಂದರೆ ಲೋಡ್ ಶೆಡ್ಡಿಂಗ್ ಅವಧಿಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು. ಆದರೆ ಮಳೆ ಬಾರದೆ ಇದ್ದರೆ ಬಹುಶಃ ಮೇ ತಿಂಗಳಲ್ಲಿ ಸ್ವಲ್ಪ ಸಮಯದವರೆಗೆ ವಿದ್ಯುತ್ ಕಡಿತವನ್ನು ಮುಂದುವರಿಸಬೇಕಾಗುತ್ತದೆ. ನಾವು ಬೇರೇನೂ ಮಾಡಲು ಸಾಧ್ಯವಿಲ್ಲ. ಜಲವಿದ್ಯುತ್ ಯೋಜನೆಗಳನ್ನು ನಡೆಸುತ್ತಿರುವ ಜಲಾಶಯಗಳಲ್ಲಿನ ನೀರಿನ ಮಟ್ಟವು ದಾಖಲೆಯ ಮಟ್ಟಕ್ಕೆ ಕುಸಿದಿದೆ ಎಂದು ತಿಳಿಸಿದರು.

ಶ್ರೀಲಂಕಾ ಅನೇಕ ದೇಶಗಳಿಂದ ಸಾಲವನ್ನು ಪಡೆದುಕೊಂಡಿದೆ. ಅಲ್ಲದೆ ಜನವರಿಯಲ್ಲಿ ವಿದೇಶಿ ವಿನಿಮಯ ಸಂಗ್ರಹವು ಶೇಕಡ 70ಕ್ಕಿಂತ ಕುಸಿದು $2.36 ಬಿಲಿಯನ್‌ಗೆ ತಲುಪಿದೆ. ವಿದೇಶಿ ವಿನಿಮಯ ಕೊರತೆಯಿಂದ ದೇಶದಲ್ಲಿರುವ ಬಹುತೇಕ ಅಗತ್ಯ ವಸ್ತುಗಳು, ಔಷಧಗಳು, ಪೆಟ್ರೋಲ್, ಡೀಸೆಲ್ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿಲ್ಲ. ದೇಶದಲ್ಲಿ ಅಡುಗೆ ಅನಿಲ ಮತ್ತು ವಿದ್ಯುತ್ ಕೊರತೆಯಿಂದಾಗಿ ಸುಮಾರು 1,000 ಬೇಕರಿಗಳನ್ನು ಮುಚ್ಚಲಾಗಿದೆ. ಅಲ್ಲದೆ ಅಳಿದುಳಿದ ಬೇಕರಿಗಳಲ್ಲಿ ಸರಿಯಾಗಿ ಉತ್ಪಾದನೆಯಾಗುತ್ತಿಲ್ಲ.

ಅಧ್ಯಕ್ಷರ ನಿವಾಸದ ಎದುರು ಪ್ರತಿಭಟನೆ, ಹಿಂಸಾಚಾರ
ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟಿನ ಕುರಿತು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ನಿವಾಸದ ಹೊರಗೆ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ನಂತರ ಕೊಲಂಬೊದ ಹಲವು ಭಾಗಗಳಲ್ಲಿ ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂ ಅನ್ನು ಇಂದು ಬೆಳಿಗ್ಗೆ 5 ಗಂಟೆಗೆ ಹಿಂತೆಗೆದುಕೊಳ್ಳಲಾಯಿತು. ರಾಷ್ಟ್ರಪತಿ ನಿವಾಸದ ಮುಂದೆ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 45 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನಗಳಿಗೆ ಬೆಂಕಿ ಹಚ್ಚಿದ ಸಂದರ್ಭದಲ್ಲಿ ಐವರು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೊಲಂಬೊ ಉತ್ತರ, ದಕ್ಷಿಣ, ಕೊಲಂಬೊ ಸೆಂಟ್ರಲ್, ನುಗೆಗೋಡ, ಮೌಂಟ್ ಲ್ಯಾವಿನಿಯಾ ಹಾಗೂ ಕೆಲನಿಯಾ ಪೊಲೀಸ್ ವಿಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಮುಸ್ಲಿಮರಿಗೆ ವ್ಯಾಪಾರ ನಡೆಸದಂತೆ ಕರೆ ನೀಡಿದ್ದ ಬೌದ್ಧ ಸನ್ಯಾಸಿ

2019 ರ ಈಸ್ಟರ್ ದಿನದಂದು ನಡೆದ ಬಾಂಬ್ ಸ್ಫೋಟದ ಬಳಿಕ ಗ್ರಾಹಕರು ಮುಸ್ಲಿಂ ಅಂಗಡಿಗಳಿಂದ ಖರೀದಿಸುವುದನ್ನು ನಿಲ್ಲಿಸಿದ್ದರು. ಅಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದು, ಬಹುಪಾಲು ಸಿಂಹಳೀಯರು ವಾಸಿಸುತ್ತಿದ್ದಾರೆ. ದಶಕಗಳಿಂದ, ಎಲ್ಲಾ ಧರ್ಮೀಯರೊಂದಿಗೂ ಮುಸ್ಲಿಮರು ಉತ್ತಮ ವ್ಯವಹಾರ ನಡೆಸುತ್ತಿದ್ದರು.

ಆದರೆ 2019 ಏಪ್ರಿಲ್ನಲ್ಲಿ ಶ್ರೀಲಂಕಾದ ಈಸ್ಟರ್ ಸಂಡೆ ಬಾಂಬ್ ಸ್ಫೋಟದ ನಂತರ ಎಲ್ಲವೂ ಬದಲಾಗಿದೆ. ಶ್ರೀಲಂಕಾದ ಹಲವಾರು ಭಾಗಗಳಲ್ಲಿ ಮುಸ್ಲಿಂ ಒಡೆತನದ ವ್ಯವಹಾರ ಕೇಂದ್ರ ಮತ್ತು ಮನೆಗಳ ಮೇಲೆ ದಾಳಿ ಮಾಡಲಾಗಿದ್ದು, ಮೇ ತಿಂಗಳಲ್ಲಿ ಭೀಕರ ಹಿಂಸಾಚಾರ ನಡೆದಿದೆ.

2019 ರ ಜೂನ್‌ನಲ್ಲಿ ಹಿರಿಯ ಬೌದ್ಧ ಸನ್ಯಾಸಿಯೊಬ್ಬರು ಸಿಂಹಳೀಯರು, ಮುಸ್ಲಿಂ ಅಂಗಡಿಗಳಿಂದ ಖರೀದಿಸದಂತೆ ಬಹಿರಂಗವಾಗಿ ಕರೆ ನೀಡಿದ್ದರು. ಶ್ರೀಲಂಕಾದ 22 ಮಿಲಿಯನ್ ಜನರಲ್ಲಿ ಮುಸ್ಲಿಮರು ಸುಮಾರು 10% ರಷ್ಟಿದ್ದರೆ, ಜನಸಂಖ್ಯೆಯ ಸುಮಾರು 12% ಹಿಂದೂಗಳು ಮತ್ತು 7% ಕ್ರಿಶ್ಚಿಯನ್ನರು.

ಶ್ರೀಲಂಕಾ: ಬಾಂಬ್ ಸ್ಫೋಟದ ಬಳಿಕ ಮುಸ್ಲಿಂ ಅಂಗಡಿಗಳಿಗೆ ವ್ಯಾಪಾರವಿಲ್ಲ

error: Content is protected !! Not allowed copy content from janadhvani.com