janadhvani

Kannada Online News Paper

ಮಕ್ಕಳ ಕೈಗೆ ಮೊಬೈಲ್‌: ಚಟವಾಗದಿರಲು ಏನು ಮಾಡಬೇಕು?

ಆನ್‌ಲೈನ್‌ ಕಲಿಕೆಯ ಅನಿವಾರ್ಯಕ್ಕೆ ಕಟ್ಟುಬಿದ್ದು ಪೋಷಕರು ಮಕ್ಕಳಿಗೆ ತಮ್ಮದೇ ಮೊಬೈಲ್‌ ಇಲ್ಲವೇ ಹೊಸ ಮೊಬೈಲ್‌ ಖರೀದಿಸಿ ನೀಡಿದ್ದಾರೆ. ಮಕ್ಕಳು ಅಪರೂಪಕ್ಕೊಮ್ಮೆ ತಮ್ಮ ಕೈಗೆ ಸ್ಮಾರ್ಟ್ ಫೋನ್‌ ಸಿಕ್ಕಿದಾಗಲೂ ಗೇಮಿಂಗ್‌ ಆ್ಯಪ್‌ಗಳ ಕಡೆಗೆ ಕಣ್ಣು ಹಾಯಿಸದೇ ಬಿಡುವುದಿಲ್ಲ ಎಂಬ ಸತ್ಯ ಹೆತ್ತವರಿಗೂ ತಿಳಿದಿರುವಂಥದ್ದೆ. ಹೀಗಿರುವಾಗ ಆನ್‌ಲೈನ್‌ ಕಲಿಕೆಗಾಗಿ ಸ್ವಂತ ಮೊಬೈಲ್‌ ಹೊಂದಿದ ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರಿಗೆ ಆತಂಕ ಇಲ್ಲದಾದೀತೇ? ಕಲಿಕೆಗಾಗಿ ನೀಡಿದ ಮೊಬೈಲ್‌ ಚಟವಾಗಿ ಬೆಳೆಯಬಹುದೆಂಬ ಭಯ ಸಹಜ. ಅದು ಚಟವಾಗಿ ಬೆಳೆದರೆ ಆಗುವ ಪರಿಣಾಮಗಳೇನು, ಚಟವಾಗದಿರಲು ಹೆತ್ತವರು ವಹಿಸಬೇಕಾದ  ಮುನ್ನೆಚ್ಚರಿಕೆಗಳೇನು ಎಂಬ ಬಗ್ಗೆ ಮನೋವೈದ್ಯೆ ಡಾ| ಪ್ರೀತಿ ಶಾನುಭಾಗ್‌ ವಿವರಿಸಿದ್ದಾರೆ.

ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಮಕ್ಕಳಿಗಾಗಿಯೇ ಎರಡು ಮೊಬೈಲ್‌ ಬೇಕೆಂಬ ಅನಿವಾರ್ಯವನ್ನು ಆನ್‌ ಲೈನ್‌ ತರಗತಿ ತಂದಿಟ್ಟಿದೆ. ಹೆತ್ತವರು ಕೆಲಸಕ್ಕೆ ಹೋಗುವವರಾದರೆ ಅವರ ಮೊಬೈಲ್‌ ಅವರ ಬಳಿಯೇ ಇರಬೇಕು. ಮಕ್ಕಳಿಬ್ಬರಿಗೂ ಒಂದೇ ಸಮಯಕ್ಕೆ ತರಗತಿ ಇದ್ದರೆ ಒಂದೇ ಮೊಬೈಲ್‌ನಿಂದ ಇಬ್ಬರೂ ನಿಭಾಯಿಸಲಾಗುವುದಿಲ್ಲ. ನಿಭಾಯಿಸುವ ಅವಕಾಶವಿದ್ದರೂ ಪ್ರತ್ಯೇಕ ಬೇಕೆಂಬ ಕಚ್ಚಾಟ ಆರಂಭವಾಗುತ್ತದೆ.

ಹೆತ್ತವರು ಉದ್ಯೋಗಿಗಳಾಗಿದ್ದಲ್ಲಿ ಮಕ್ಕಳ ಮೇಲೆ 24×7 ನಿಗಾ ಇರಿಸುವುದಕ್ಕೆ ಆಗುವುದಿಲ್ಲ. ಮನೆಯಲ್ಲೇ ಇರುವವರಾದರೂ ಹೆಚ್ಚಿನ ಹೆತ್ತವರಿಗೆ ಈಗಿನ ಸ್ಮಾರ್ಟ್‌ಫೋನ್‌ ಬಳಕೆ ಬಗ್ಗೆ ಅಷ್ಟಾಗಿ ಜ್ಞಾನ ಇರುವುದಿಲ್ಲ. ಎರಡೂ ವಿಧದ ಹೆತ್ತವರಿಗೂ ಮಕ್ಕಳು ಆನ್‌ಲೈನ್‌ ತರಗತಿ ಹೊರತುಪಡಿಸಿ ಮೊಬೈಲ್‌ನಲ್ಲಿ ಇನ್ನೇನು ಹುಡುಕುತ್ತಿದ್ದಾರೆ ಎಂಬುದು ತಿಳಿಯುವುದಿಲ್ಲ. ಹೆತ್ತವರ ಈ ಪರಿಸ್ಥಿತಿಯನ್ನು ಮಕ್ಕಳು ಬಳಸಿ ಮೊಬೈಲ್‌ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಅಗತ್ಯಕ್ಕಿಂತ ಜಾಸ್ತಿ ಮೊಬೈಲ್‌ ನೋಡುವುದರಿಂದ ಮಾನಸಿಕ ಮತ್ತು ದೈಹಿಕ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳಿವೆ.

ಮೊಬೈಲ್‌ ಚಟ: ಸಮಸ್ಯೆಗಳೇನು?

ಆನ್‌ಲೈನ್‌ ವೀಡಿಯೋ ಗೇಮ್‌ ಚಟ ಇದರಲ್ಲಿ ಸಿಗುವ ಪಾಯಿಂಟ್‌ಗಳು ಮಕ್ಕಳನ್ನು ಸೆಳೆಯುತ್ತವೆ. ಪರಿಣಾಮ ಸಾಮಾಜಿಕವಾಗಿ ಬೆರೆಯುವಿಕೆಯ ಆಸಕ್ತಿ, ಮಾತೂ ಕಡಿಮೆಯಾಗಿ ಮಕ್ಕಳು ಸದಾ ಮೊಬೈಲ್‌ನಲ್ಲೇ ಇರುತ್ತಾರೆ.

ಸಾಮಾಜಿಕ ತಾಣಗಳ ಮೂಲಕ ಖಿನ್ನತೆ ಸ್ನೇಹಿತರು ಹಾಕಿರುವ ಫೋಟೋಗಳನ್ನು ಫೇಸ್‌ಬುಕ್‌, ಇನ್‌ ಸ್ಟಾಗ್ರಾಮ್‌ಗಳಲ್ಲಿ ನೋಡುವ ಮಕ್ಕಳು ನನಗೆ ಜೀವನದಲ್ಲಿ ಅಂತಹ ಖುಷಿಗಳಿಲ್ಲ ಎಂದು ಮರುಗಿ ಖಿನ್ನತೆಗೆ ಒಳಗಾಗುತ್ತಾರೆ.

ಏಕಾಗ್ರತೆ ಕೊರತೆ ದಿನವಿಡೀ ಮೊಬೈಲ್‌ ಕೈಯಲ್ಲಿರುವುದರಿಂದ ಊಟ, ನಿದ್ದೆಯೂ ತಪ್ಪುತ್ತದೆ. ಜತಗೆ ಏಕಾಗ್ರತೆಯ ಕೊರತೆ, ಚಿಕ್ಕ ಮಕ್ಕಳಲ್ಲಿ ಗಮನದ ಕೊರತೆ ಜಾಸ್ತಿಯಾಗುತ್ತದೆ.

ಪೋಷಕರು ಏನು ಮಾಡಬೇಕು?

ಮಕ್ಕಳಿಗೆ ಆಫ್‌ಲೈನ್‌ ತರಗತಿಗಳು ಕೂಡ ಇರುತ್ತವೆ. ಹೆತ್ತವರು ಮಕ್ಕಳೊಂದಿಗೆ ಕುಳಿತು ಸ್ಕ್ರೀನ್‌ ಟೈಂ ಮತ್ತು ನಾನ್‌- ಸ್ಕ್ರೀನ್‌ ಟೈಂ ವೇಳಾಪಟ್ಟಿ ರಚಿಸಬೇಕು. ಶಿಕ್ಷಕರು ಆನ್‌ಲೈನ್‌ಗೆ ಬರುವ ಸಂದರ್ಭಕ್ಕೆ ಮಾತ್ರ ಆನ್‌ಲೈನ್‌, ಉಳಿದಂತೆ ಆಫ್‌ಲೈನ್‌ ಶಿಕ್ಷಣದಡಿ ಹೋಂ ವರ್ಕ್ ‌ಗಳನ್ನು ಮಾಡಿಸಬೇಕು.

ಸಾಧ್ಯವಾದರೆ ಇಬ್ಬರು ಮಕ್ಕಳಿಗೆ ಒಂದೇ ಮೊಬೈಲ್‌ ನೀಡಿ. ಇದರಿಂದ ಸುದೀರ್ಘ‌ ಕಾಲ ಓರ್ವನೇ ಮೊಬೈಲ್‌ ಕೈಯಲ್ಲಿ ಹಿಡಿದುಕೊಳ್ಳುವುದು ತಪ್ಪುತ್ತದೆ

ಹೆತ್ತವರು ಮನೆಯಲ್ಲಿದ್ದಷ್ಟೂ ಹೊತ್ತು ಆಟ, ಇತರ ಹವ್ಯಾಸಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಆಗ ಸಹಜವಾಗಿ ಮಕ್ಕಳು ಆಟದ ಕಡೆಗೆ ಆಸಕ್ತಿ ತೋರಿಸುತ್ತಾರೆ.

ಮಕ್ಕಳು ಆನ್‌ಲೈನ್‌ ಕಲಿಕೆ ಹೊರತಾಗಿ ಮೊಬೈಲ್‌ ಬಳಸುವಾಗ ಮಕ್ಕಳನ್ನು ಅನುಮಾನದ ದೃಷ್ಟಿಯಿಂದ ನೋಡದೆ, ಆದಷ್ಟು ಪ್ರೀತಿಯಿಂದ ತಿದ್ದಲು ಪ್ರಯತ್ನಿಸಬೇಕು.

ಮಕ್ಕಳು ಮೊಬೈಲ್‌ನಲ್ಲಿ ಆಡುವುದು ಹೊಸತಲ್ಲ. ಆದರೆ ಶಾಲೆಗೆ ಹೋಗುತ್ತಿದ್ದಾಗ ಹೆಚ್ಚು ಹೊತ್ತು ಮೊಬೈಲ್‌ ಸಿಗುತ್ತಿರಲಿಲ್ಲ. ಸಿಕ್ಕರೂ ಹೆತ್ತವರೂ ಜತೆ ಇರುತ್ತಿದ್ದರು. ಪ್ರಸ್ತುತ ಆನ್‌ಲೈನ್‌ ಶಿಕ್ಷಣದಿಂದಾಗಿ ಮಕ್ಕಳಿಗೆ ಮೊಬೈಲ್‌ ವರದಾನವಾದಂತಾಗಿದೆ. ಹೆತ್ತವರು ಉದ್ಯೋಗಕ್ಕೆ ತೆರಳಿದರೆ ಮಕ್ಕಳ ಕಡೆಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಜಾಸ್ತಿ ಮೊಬೈಲ್‌ ವೀಕ್ಷಣೆ ಮಾಡಿದರೆ ಚಟವಾಗಿ ಬೆಳೆಯುವ ಸಾಧ್ಯತೆ ಇದೆ. ಹೀಗಾಗಿ ಹೆತ್ತವರು ಆದಷ್ಟು ಮಕ್ಕಳನ್ನು ಇತರ ಹವ್ಯಾಸಗಳತ್ತ ಅವರನ್ನು ಸೆಳೆಯಲು ಪ್ರಯತ್ನಿಸಬೇಕು.
-ಡಾ| ಪ್ರೀತಿ ಶಾನುಭಾಗ್‌, ಮನೋವೈದ್ಯರು, ಮಂಗಳೂರು

ಈಗ ಶಾಲೆಗೆ ರಜಾ‌ ಸಮಯವಾಗಿರುವುದರಿಂದ ಆನ್‌ಲೈನ್ ತರಗತಿಗಳು ನಡೆಯುವುದಿಲ್ಲ. ಆದರೂ, ಮಕ್ಕಳ ಕೈಯಲ್ಲಿ ಹೆಚ್ಚಿನ ಸಮಯ ಮೊಬೈಲ್ ಇದೆಯೆಂದಾದರೆ ಅವರು ಮೊಬೈಲ್ ಚಟಕ್ಕೆ ಬಲಿಯಾಗುವ ಸಂಭವ ಹೆಚ್ಚು.

ಈ ಸಮಯದಲ್ಲಿ ಮಕ್ಕಳ ಕೈಯಿಂದ ಮೊಬೈಲನ್ನು ದೂರವಿರಿಸಿ, ಇತರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು. ಉದಾಹರಣೆಗೆ, ಕೈ ತೋಟ ನಿರ್ಮಾಣ, ಆಟೋಟ ಚಟುವಟಿಕೆ, ಪುಸ್ತಕ ಓದಿ ಮುಗಿಸುವ ಹವ್ಯಾಸ ಇತ್ಯಾದಿ.

ನಮ್ಮ ಮಕ್ಕಳನ್ನು ಸರಿದಾರಿಗೆ ತರಲು ನಾವಲ್ಲದೇ ಬೇರಾರೂ ಇಲ್ಲ ಅನ್ನುವುದನ್ನು ಎಲ್ಲಾ ಪೋಷಕರೂ ಗಮನದಲ್ಲಿಟ್ಟುಕೊಳ್ಳಬೇಕು. ಮೊಬೈಲ್‌ನಿಂದ ಒಳಿತಿಗಿಂತ ಕೆಡುಕಿನತ್ತ ಸಾಗುವುದೇ ಹೆಚ್ಚು. ಆದುದರಿಂದ, ಪೋಷಕರು ಪ್ರತ್ಯೇಕ ಗಮನ ಇಟ್ಟು ಮಕ್ಕಳ ಸುರಕ್ಷತೆಯನ್ನು ಖಾತ್ರಿ ಮಾಡಿಕೊಳ್ಳಬೇಕು. ಇಲ್ಲ, ನಮ್ಮ ಮಕ್ಕಳು ನಮ್ಮ ಕೈಗೆ ಸಿಗದೇ ಮೊಬೈಲ್ ದಾಸರಾಗುವುದು ಖಚಿತ. ಚಿಂತಿಸಿ, ಜಾಣ್ಮೆಯಿಂದ ವ್ಯವಹರಿಸೋಣ.