janadhvani

Kannada Online News Paper

ಶುಲ್ಕ ಪಾವತಿಸದಿದ್ದರೆ ಆನ್‍ಲೈನ್ ತರಗತಿ ರದ್ದು- ಖಾಸಗಿ ಶಾಲೆಗಳ ಒಕ್ಕೂಟದಿಂದ ಎಚ್ಚರಿಕೆ

ಬೆಂಗಳೂರು,ನ.25: ಯಾವುದೇ ವಿದ್ಯಾರ್ಥಿ ಶುಲ್ಕ ಪಾವತಿಸದಿದ್ದರೆ ಅಂಥವರಿಗೆ ಆನ್‍ಲೈನ್ ತರಗತಿಗಳನ್ನು ರದ್ದು ಮಾಡ ಬಾರದೆಂಬ ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆ ಗಳು ಬಹಿರಂಗವಾಗಿಯೇ ಸೆಡ್ಡು ಹೊಡೆದಿವೆ. ನವೆಂಬರ್ ತಿಂಗಳ ಅಂತ್ಯದೊಳಗೆ ಮೊದಲ ಕಂತಿನ ಶುಲ್ಕವನ್ನು ಪಾವತಿ ಮಾಡದಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನು ಬಂದ್ ಮಾಡಲಾಗುವುದು ಎಂದು ಖಾಸಗಿ ಶಾಲೆಗಳ ಒಕ್ಕೂಟ ಎಚ್ಚರಿಸಿದೆ.

ಯಾವುದೇ ಒಬ್ಬ ವಿದ್ಯಾರ್ಥಿಯು ಶುಲ್ಕ ಪಾವತಿ ಮಾಡದಿದ್ದರೆ ಅಂಥವರಿಗೆ ಆನ್‍ಲೈನ್ ಶಿಕ್ಷಣವನ್ನು ಕಡಿತಗೊಳಿಸಬಾರದು. ಒಂದು ವೇಳೆ ಇಂಥ ಪ್ರಕರಣ ಎಲ್ಲಾದರೂ ಕಂಡುಬಂದರೆ ಅಂತಹ ಶಾಲೆಯ ವಿರುದ್ದ ಕಾನೂನು ಕ್ರಮ ಜರುಗಿಸುವುದಾಗಿ ಸಚಿವ ಎಸ್.ಸುರೇಶ್‍ಕುಮಾರ್ ಎಚ್ಚರಿಕೆ ನೀಡಿದ್ದರು.

ಇದೀಗ ಖಾಸಗಿ ಶಾಲಾ ಆಡಳಿತ ಮಂಡಳಿ ಸಚಿವರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡದೆ ಶುಲ್ಕ ಕಟ್ಟದಿದ್ದರೆ ಆನ್‍ಲೈನ್ ತರಗತಿಗಳನ್ನು ಕಡಿತ ಮಾಡುವುದಾಗಿ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ವಿದ್ಯುತ್, ನೀರು, ಸಿಬ್ಬಂದಿ ಹಾಗೂ ಶಿಕ್ಷಕರ ವೇತನ ಸೇರಿದಂತೆ ಮತ್ತಿತರ ಕಾರಣಗಳಿ ಗಾಗಿ ನಮ್ಮಿಂದ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪೋಷಕರು ಶುಲ್ಕ ಪಾವತಿಸದಿದ್ದರೆ ಅಂತಹ ವಿದ್ಯಾರ್ಥಿಯ ಆನ್‍ಲೈನ್ ತರಗತಿಯನ್ನು ರದ್ದುಪಡಿಸುವುದು ಅನಿವಾರ್ಯ ಎಂಬುದು ಖಾಸಗಿ ಶಾಲೆಯವರ ವಾದವಾಗಿದೆ.

ಇದರಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಇದೇ ಶನಿವಾರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ನೇತೃತ್ವದಲ್ಲಿ ಖಾಸಗಿ ಶಾಲೆಯ ಮಂಡಳಿಯ ಪ್ರಮುಖರ ಸಭೆ ಕರೆಯಲಾಗಿದೆ. ಕಳೆದ 8 ತಿಂಗಳಿನಿಂದ ಪೋಷಕರು ತಮ್ಮ ಮಕ್ಕಳ ಶುಲ್ಕವನ್ನು ಪಾವತಿಸುತ್ತಿಲ್ಲ.

ಇದರಿಂದ ನಾವು ಶಾಲೆಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಪೋಷಕರಿಗೆ ಶುಲ್ಕ ಕಟ್ಟುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೂ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ಕ್ರಮ ಅನಿವಾರ್ಯ ಎಂದು ಖಾಸಗಿ ಶಾಲೆಯವರು ಹೇಳುತ್ತಿದ್ದಾರೆ.

ಇತ್ತ ಪೋಷಕರು ಹೇಳುವಂತೆ ಕೋವಿಡ್-19 ಬಂದ ಕಾರಣ ಈ ಬಾರಿ ಆರ್ಥಿಕ ಪರಿಸ್ಥಿತಿ ಹಿಂದೆಂದಿಗಿಂತಲೂ ಬಿಗಡಾಯಿಸಿದೆ. ನಂಬಿಕೊಂಡ ಕೆಲಸವೂ ಇಲ್ಲ. ಅಷ್ಟೋ ಇಷ್ಟೋ ಹಣ ಹೊಂದಿಸಿ ವಿದ್ಯಾರ್ಥಿಯ ಶುಲ್ಕವನ್ನು ಪಾವತಿಸಿದ್ದೇವೆ. ನಾವು ಎಲ್ಲಿಯೂ ಶುಲ್ಕ ಕಟ್ಟುವುದಿಲ್ಲ ಎಂದು ಹೇಳಿಲ್ಲ. ಒಂದಿಷ್ಟು ಸಮಯಾವಕಾಶ ಕೊಡಿ ಎಂದು ಆಡಳಿತ ಮಂಡಳಿಗೆ ಮನವಿ ಮಾಡಿದ್ದೆವು. ಆದರೆ ಇದೀಗ ಶುಲ್ಕ ಕಟ್ಟದಿದ್ದರೆ ವಿದ್ಯಾರ್ಥಿಗಳ ಆನ್‍ಲೈನ್ ತರಗತಿಗಳನ್ನು ರದ್ದುಪಡಿಸುವುದಾಗಿ ಹೇಳುತ್ತಿದ್ದಾರೆ. ನಮಗೆ ದಿಕ್ಕು ತೋಚದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ತಪ್ಪಿತಸ್ಥ ಶಾಲೆಗಳ ವಿರುದ್ಧ ಕೆಲವೊಮ್ಮೆ ಕೇವಲ ಬಿಡಿಗಾಸು ದಂಡ ವಿಧಿಸಿ, ಶಿಕ್ಷಣ ಇಲಾಖೆ ಕೈ ತೊಳೆದುಕೊಳ್ಳುತ್ತಿದೆಯೇ ಹೊರತು, ಇಂತಹ ಶಾಲೆಗಳನ್ನು ನಿಯಂತ್ರಿಸಲು ಮುಂದಾಗುತ್ತಿಲ್ಲ.

error: Content is protected !! Not allowed copy content from janadhvani.com