janadhvani

Kannada Online News Paper

ಯುಎಇ ಗೆ ಹೊರಟಿದ್ದ ಬಿ.ಆರ್. ಶೆಟ್ಟಿ ಗೆ ಇಮಿಗ್ರೇಷನ್ ಅಧಿಕಾರಿಗಳಿಂದ ತಡೆ

ಬೆಂಗಳೂರು: ಉಡುಪಿಯ ಅನಿವಾಸಿ ಭಾರತೀಯ ಉದ್ಯಮ ದೊರೆ, ಎನ್‌ ಎಂ ಸಿ ಹೆಲ್ತ್ ಮತ್ತು ಫಿನಬ್ಲರ್ ಕಂಪೆನಿಗಳ ಮಾಲೀಕ ಬಿ.ಆರ್ ಶೆಟ್ಟಿ ತಮ್ಮ ಕಂಪೆನಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನೆರವು ನೀಡುವುದಕ್ಕಾಗಿ 8 ತಿಂಗಳ ನಂತರ ಯುಎಇಗೆ ತೆರಳಲು ಹೊರಟಿದ್ದು, ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ಶನಿವಾರ ಬೆಳಗ್ಗೆ ತಡೆ ಒಡ್ಡಿದ್ದಾರೆ.

ಶೆಟ್ಟಿ ಅವರು ಇತ್ತಿಹಾದ್ ವಿಮಾನದಲ್ಲಿ ಯುಎಇಗೆ ತೆರಳಲು ಮುಂದಾಗಿದ್ದಾಗ ಈ ಘಟನೆ ನಡೆದಿದೆ. ಬಿ.ಆರ್. ಶೆಟ್ಟಿ ಮತ್ತು ಅವರ ಕಂಪನಿಗಳು ಹಣಕಾಸಿನ ಅಕ್ರಮ ಹಾಗೂ ಶತಕೋಟಿ ಡಾಲರ್‌ ವಂಚನೆ ವೆಸಗಿದ ಆರೋಪ ಎದುರಿಸುತ್ತಿದೆ.

ಇತ್ತಿಹಾದ್ ಇವೈ 217 ವಿಮಾನ ಮೂಲಕ ಅಬುಧಾಬಿಗೆ ತೆರಳಲು ಅವರು ಮಾಡಿದ ಪ್ರಯತ್ನ ವಿಫಲವಾಗಿದೆ ಎನ್ನಲಾಗಿದೆ.”ಯುಎಇಯ ನ್ಯಾಯ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ” ಆದ್ದರಿಂದ ನಾನು ಯುಎಇ ಗೆ ಮರಳಲಿದ್ದೇನೆ ಎಂದು ಶೆಟ್ಟಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಜಗತ್ತಿನ ಕಣ್ಣುಕುಕ್ಕುವಂತೆ ತಾನೆ ಕಟ್ಟಿಬೆಳೆಸಿದ್ದ ದೈತ್ಯ ಎನ್‍ಎಂಸಿ ಕಂಪನಿಯಿಂದ ಹಣಕಾಸಿನ ವಂಚನೆ ಆರೋಪದಲ್ಲಿ ತೊಲಗಬೇಕಾಗಿ ಬಂದಿದ್ದ ಬಿ.ಆರ್. ಶೆಟ್ಟಿ,2020 ಫೆಬ್ರುವರಿಯಲ್ಲಿ ಭಾರತಕ್ಕೆ ಮರಳಿದ್ದರು. ಬಿಆರ್ ಶೆಟ್ಟಿಯ ವ್ಯವಹಾರಗಳು ನಂಬಿಕೆಗೆ ಅರ್ಹವಲ್ಲವೆಂದು ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ “ಮುಡ್ಡಿ ವಾಟರ್ಸ್” ವರದಿ ಸಲ್ಲಿಸಿದೆ. ಈ ತನಿಖಾ ವರದಿ ಹೊರಬರುತ್ತಿದ್ದಂತೆಯೇ ಶೆಟ್ಟಿಯ ಉದ್ಯಮಗಳ ಕೇಂದ್ರ ಅಬುದಾಬಿಯ ವಾಣಿಜ್ಯ ವಲಯವು ಅಲ್ಲೋಲಕಲ್ಲೋಲವಾಗಿದೆ.

ಎಪ್ಪತ್ತರ ದಶಕದಲ್ಲಿ ಹೊಟ್ಟೆಪಾಡಿನ ಚಾಕರಿಗಾಗಿ ದುಬೈ ಸೇರಿಕೊಂಡಿದ್ದ ಶೆಟ್ಟಿ ಅಲ್ಲಿಯ ವೈದ್ಯಕೀಯ ವಾಣಿಜ್ಯ ವ್ಯವಹಾರ ನಡೆಸಿ ಸಂಪತ್ತು ಗಳಿಸುತ್ತಾರೆ. ಆ ಬಂಡವಾಳದಿಂದ ಸ್ವಂತ ಉದ್ಯಮ ಆರಂಭಿಸುತ್ತಾರೆ. ದುಬೈನ ದುಡ್ಡಿನ ಕುಳಗಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದ ಶೆಟ್ರು ಅಭಿವೃದ್ಧಿಯಾಗುತ್ತಲೇ ಹೋದರು. ದುಡ್ಡಿನ ಫಲದಲ್ಲಿ ಭಾರತದಲ್ಲಿ ಬಿರುದು-ಬಾವುಲಿಗಳು- ಪ್ರಶಸ್ತಿಗಳನ್ನು ಕೊಂಡುಕೊಂಡರು. ಮಹಾನ್ ದಾನಿ ಎನಿಸಿಕೊಂಡರು. ಆನಂತರ ಅಬುದಾಬಿಯ ಅತ್ಯುನ್ನತ ಪುರಸ್ಕಾರ, ಭಾರತದ ಪದ್ಮಪ್ರಶಸ್ತಿಗಳೂ ಹಣವಂತ ಉದ್ಯಮಪತಿಗೆ ನಿರಾಯಾಸವಾಗಿ ಒಲಿಯಿತು.

ಜಗತ್ತಿನಲ್ಲೇ ಎತ್ತರದ ಬುರ್ಜ್ ಖಲೀಫಾ ಕಟ್ಟಡದಲ್ಲಿ ಒಂದು ಅಂತಸ್ತು ಖರೀದಿಸಿರುವ ಶೆಟ್ರು ಜಗತ್ತಿನಾದ್ಯಂತ 270 ಆಸ್ಪತ್ರೆ ಸ್ಥಾಪಿಸಿದ್ದೇನೆಂದು ಹೇಳುತ್ತಿದ್ದಾರೆ.

error: Content is protected !! Not allowed copy content from janadhvani.com