janadhvani

Kannada Online News Paper

ಮದ್ರಸಾ ಆಡಳಿತ ಸಮಿತಿಗೆ ಪ್ರೀತಿಯ ಪತ್ರ

🖋️ ಕೊಡಂಗಾಯಿ ಕಾಮಿಲ್ ಸಖಾಫಿ

ಮಾನ್ಯ ರಕ್ಷಕರೇ, ಊರಿನ ಪ್ರಮುಖ ನೇತಾರರೇ,
ಅರಿವು ಇಸ್ಲಾಮಿನ ಜೀವಾಳ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂರವರು ತಿಳಿಸಿಕೊಟ್ಟದ್ದು ನಮಗೆಲ್ಲ ತಿಳಿದಿರುವ ವಿಷಯವಾಗಿದೆ.

ಇಸ್ಲಾಮಿನ ಅರಿವನ್ನು ನೀಡಿ ಮಕ್ಕಳನ್ನು ನೈಜ ಮುಸಲ್ಮಾನರನ್ನಾಗಿಸಲು ರಾತ್ರಿ-ಹಗಲೆನ್ನದೆ ಕಠಿಣ ಪ್ರಯತ್ನ ಪಡುತ್ತಿರುವ ಅಧ್ಯಾಪಕರು ಈ ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ. ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವುದು, ನಮಾಜ್ ಸಹಿತ ಕಡ್ಡಾಯ ಆರಾಧನೆಗಳನ್ನು ಕಲಿಸುವ ಜವಾಬ್ದಾರಿಯನ್ನು ಪ್ರತೀ ಮಾತಾ-ಪಿತರ ಮೇಲೆ ಪವಿತ್ರ ಇಸ್ಲಾಮ್ ಅರ್ಪಿಸಿದೆ.

ಆದರೆ ಮಹಾ ಈ ಕರ್ತವ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ತಂದೆತಾಯಿಗಳನ್ನು ಕೂಡಾ ರಕ್ಷಿಸುವ ಮದ್ರಸ ಅಧ್ಯಾಪಕರು, ತಾವು ಚಿಕ್ಕ ವೇತನವನ್ನು ಪಡೆಯುತ್ತಿದ್ದರೂ ಅಂತ್ಯ ದಿನದ ತನಕ ಇಸ್ಲಾಮಿನ ಚಿಹ್ನೆಗಳು ಇಲ್ಲಿ ಉಳಿಯಬೇಕು ಎಂಬ ಉದ್ದೇಶದಿಂದ ಭೂಮಿಯಲ್ಲಿರುವ ಸರ್ವ ಕಡೆಗಳಲ್ಲೂ ದರ್ಸ್, ಮದ್ರಸಗಳಂತಹ ಕಾರ್ಯಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಪರಂಪರಾಗತವಾಗಿ ಬಂದ ಕಾರ್ಯವಾಗಿದೆ.

ಕೊರೋನಾ ಎಂಬ ಮಹಾ ವ್ಯಾಧಿಯು ಈ ಭೂಮಿಯಲ್ಲಿ ಹರಡಲು ಮುಅಲ್ಲಿಮರೇ ಕಾರಣಕರ್ತರು ಎಂಬ ರೀತಿಯಲ್ಲಿ ಇಲ್ಲಿನ ಬಹುತೇಕ
ಮಸೀದಿ, ಮದ್ರಸ ಆಡಳಿತ ಸಮಿತಿಯವರು ನಡೆದುಕೊಂಡ ಕಾರಣದಿಂದ ಹೆಚ್ಚಿನ ಉಸ್ತಾದರುಗಳ ಬದುಕು ಬೀದಿಗೆ ಬಂದಿರುವುದು ಇದೀಗ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆಳಕಿಗೆ ಬರುತ್ತಿದೆ.

ಮದ್ರಸಾ ಅಧ್ಯಾಪಕರು ಹೊಟ್ಟೆಪಾಡಿಗಾಗಿ ವ್ಯಾಪಾರದತ್ತ ಮೊರೆ ಹೋಗುತ್ತಿರುವ ದೃಶ್ಯಗಳನ್ನು ಕಾಣುತ್ತಿರುವಾಗ ನೈಜ ಮುಸಲ್ಮಾನರ ಕಣ್ಣುಗಳಿಂದ ಅಶ್ರುಧಾರೆಗಳು ಹರಿಯುತ್ತಿದೆ. ಇದು ಮುಂದುವರಿದರೆ ಖಂಡಿತವಾಗಿಯೂ ದೊಡ್ಡ ಅಪಾಯವನ್ನು ಈ ಸಮಾಜವು ಎದುರಿಸಬೇಕಾಗುತ್ತದೆ.

ಕೆಲವು ಸಮಯಗಳ ಬಳಿಕ ಕೊರೋನಾ ವೈರಸ್ ಕಣ್ಮರೆಯಾಗಬಹುದು. ಆ ನಂತರ ಮಸೀದಿ, ಮದ್ರಸಗಳ ಸೇವೆಗೆ ಅಧ್ಯಾಪಕರ ಕೊರತೆಯು ಉಂಟಾದ್ದಲ್ಲಿ ನಮ್ಮ ಮಕ್ಕಳು ಧಾರ್ಮಿಕ ಶಿಕ್ಷಣದಿಂದ ವಂಚಿತರಾಗಲು ಕಾರಣವಾಗಬಹುದು. ಆದುದರಿಂದ ಆದಷ್ಟು ಬೇಗ ಆಡಳಿತ ಸಮಿತಿಯು ಎಚ್ಚೆತ್ತು ಅಧ್ಯಾಪಕ ವೃಂದವನ್ನು ರಕ್ಷಿಸಬೇಕಾಗಿದೆ. ಅವರ ಜೀವನೋಪಾಯಕ್ಕೆ ಅಗತ್ಯವಾದ ಕನಿಷ್ಠ ವೇತನವನ್ನಾದರೂ ನೀಡಿ ಸಂತೈಸಬೇಕು. ಇಲ್ಲವಾದರೆ ಅಪಾಯವು ಕಟ್ಟಿಟ್ಟ ಬುತ್ತಿಯಾಗಿದೆ.

🖋️ ಕೊಡಂಗಾಯಿ ಕಾಮಿಲ್ ಸಖಾಫಿ

error: Content is protected !! Not allowed copy content from janadhvani.com