janadhvani

Kannada Online News Paper

ಕಿನ್ಯಾ: ಮುಅದ್ಸಿನ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ವಫಾತ್

ಕಿನ್ಯಾ: ಇಲ್ಲಿನ ಪ್ರಖ್ಯಾತ ಕೇಂದ್ರ ಜುಮಾ ಮಸೀದಿಯಲ್ಲಿ ಸುದೀರ್ಘ 40 ವರ್ಷಗಳ ಕಾಲ ಮುಅದ್ಸಿನ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೆ.ಬಿ.ಅಬ್ದುಲ್ ರಹ್ಮಾನ್ ಮುಸ್ಲಿಯಾರ್(60) ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮರಳುವ ಸಂದರ್ಭದಲ್ಲಿ ಹೃದಯಾಘಾತ ಉಂಟಾಗಿ ಕೊನೆಯುಸಿರೆಳೆದಿದ್ದಾರೆ.

ಕಿನ್ಯಾ ಹಾಗೂ ಪರಿಸರ ಪ್ರದೇಶಗಳಲ್ಲೆಲ್ಲ ಅದ್ರಾಮುಕ್ರಿಕ ಎಂದೇ ಪ್ರಸಿದ್ಧಿಯಾಗಿರುವ ಅವರು, ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವನ್ನು ಹೊಂದಿದ್ದರು. ಪಾರಂಪರಿಕವಾಗಿ ಮುಕ್ರಿಕಾ ಕುಟುಂಬದವರಾದ ಅವರು,ಕಿನ್ಯಾ ಮಸೀದಿಯಲ್ಲಿ ಸೇವೆ ಗೈಯುತ್ತಿದ್ದ ತಂದೆಯ ಅಗಲಿಕೆ ನಂತರ ಅದೇ ಸ್ಥಾನದಲ್ಲಿ ಸೇವೆ ಗೈಯುತ್ತಾ ಬಂದಿದ್ದರು.

“ಮುಕ್ರಿ” ಅಂದರೆ ಅರಬಿ ಭಾಷೆಯ ‘ಮುಖ್ರಿಅ್’ ಓದಿಸುವವನು ಎಂಬ ಅರ್ಥವನ್ನು ಹೊಂದಿದ್ದು, ಹಳೇ ಕಾಲದಲ್ಲಿ ಖುರ್ ಆನ್ ಕಲಿಸಿ ಕೊಡುತ್ತಿದ್ದ ಕುಟುಂಬಸ್ಥರನ್ನು ಓದಿಸುವವರ ಕುಟುಂಬ ಅಥವಾ ಮುಕ್ರಿಕಾ ಕುಟುಂಬ ಎಂದು ಕರೆಯಲಾಗುತ್ತಿತ್ತು.

ಮುಕ್ರಿಕ ಎಂಬ ಪದ ಬಳಕೆಗೆ ಕೀಳರಿಮೆ ಬೇಡ ಎಂದು ತೋರಿಸಿಕೊಟ್ಟ ಹೆಗ್ಗಳಿಕೆ ಮರ್ಹೂಂ ಅಬ್ದುಲ್ ರಹ್ಮಾನ್ ಉಸ್ತಾದರಿಗೆ ಸಲ್ಲುತ್ತದೆ. ಅವರು ತಮ್ಮನ್ನು “ನಾನು ಕಿನ್ಯಾ ಅದ್ರಾಮುಕ್ರಿಕ” ಎಂದೇ ಪರಿಚಯಿಸುತ್ತಿದ್ದರು.

ಅವರು ಮಸೀದಿಯಲ್ಲಿ ಅದ್ಸಾನ್ ಕರೆ ಮಾತ್ರವಲ್ಲದೆ, ಮದ್ರಸಾ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.ಅಪಾರ ಬಂಧು ಮಿತ್ರರನ್ನು ಅಗಲಿದ ಅಬ್ದುಲ್ ರಹ್ಮಾನ್ ಉಸ್ತಾದರ ಪರಲೋಕ ಜೀವನ ಹಸನಾಗಿರಲಿ. ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಸ್ಥರಿಗೆ ಅಲ್ಲಾಹನು ದಯಪಾಲಿಸಲಿ.

error: Content is protected !! Not allowed copy content from janadhvani.com