janadhvani

Kannada Online News Paper

ಕೋಝಿಕ್ಕೋಡ್ ದುರಂತ ತಪ್ಪಿಸಲು ಹರಸಾಹಸ ಪಟ್ಟಿದ್ದ ವಿಮಾನದ ಪೈಲಟ್

ಕೋಝಿಕ್ಕೋಡ್: ಇಲ್ಲಿಯ ಕರಿಪುರ್ ಏರ್ಪೋರ್ಟ್ನಲ್ಲಿ ನಿನ್ನೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ರನ್ವೇಯಿಂದ ಜಾರಿಬಿದ್ದು ಅಪಘಾತ ಸಂಭವಿಸಿತ್ತು. ಭಾರೀ ಮಳೆಯಿಂದಾಗಿ ಆದ ಈ ಅವಘಡದಲ್ಲಿ 19 ಮಂದಿ ಮೃತಪಟ್ಟಿದ್ಧಾರೆ.

ಈ ದುರಂತ ತಪ್ಪಿಸಲು ವಿಮಾನದ ಪೈಲಟ್ ಬಹಳ ಹರಸಾಹಸ ಮಾಡಿರುವುದು ಬೆಳಕಿಗೆ ಬಂದಿದೆ. ಮಳೆಯ ಮಧ್ಯೆ ಉಬ್ಬಿದ ರನ್ ವೇಯಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಪೈಲಟ್ ಎರಡು ಬಾರಿ ಪ್ರಯತ್ನಿಸಿದ್ದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ವಿಮಾನ ಇಳಿಯುವ ಮುನ್ನ ಹಲವು ಬಾರಿ ಏರ್ಪೋರ್ಟ್ ಅನ್ನು ವಿಮಾನ ಸುತ್ತಾಡಿದೆ. ಜಾಗತಿಕವಾಗಿ ವಿಮಾನಗಳನ್ನ ಲೈವ್ ಆಗಿ ಟ್ರ್ಯಾಕ್ ಮಾಡುವ FlightRadar24 ಎಂಬ ಫ್ಲೈಟ್ ಟ್ರ್ಯಾಕರ್ ವೆಬ್ಸೈಟ್ನಲ್ಲಿನ ಮಾಹಿತಿಯಲ್ಲಿ ಇದು ಬೆಳಕಿಗೆ ಬಂದಿದೆ.

ಈ ದುರಂತದಲ್ಲಿ ಬದುಕುಳಿದವರೂ ಕೂಡ ಇದನ್ನು ದೃಢಪಡಿಸಿದ್ದಾರೆ. ವಿಮಾನ ಕೆಳಗಿಳಿಯುವ ಮುನ್ನ ಹಲವು ಬಾರಿ ಸುತ್ತಾಡಿತು. ರನ್ ವೇಗೆ ಇಳಿದಾಗ ವಿಮಾನ ಜಾರಿ ಕೆಳಗಿನ ಹಳ್ಳಕ್ಕೆ ಬಿದ್ದಿತು ಎಂದು ಪ್ರಯಾಣಿಕರು ಈ ಘೋರ ದುರಂತ ಘಟನೆಯನ್ನು ವಿವರಿಸಿದ್ಧಾರೆ.

ದುರಂತಕ್ಕೀಡಾದ ಬೋಯಿಂಗ್ 737 ಎನ್ಜಿ ವಿಮಾನ ದುಬೈನಿಂದ 190 ಮಂದಿಯನ್ನು ಹೊತ್ತು ಬಂದಿತ್ತು. ಇಬ್ಬರು ಪೈಲಟ್ಸ್ ಸೇರಿದಂತೆ 18 ಮಂದಿ ಸಾವನ್ನಪ್ಪಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದೆ. ಈ ವಿಮಾನದಲ್ಲಿ 184 ಪ್ರಯಾಣಿಕರು, ಇಬ್ಬರು ಪೈಲಟ್ಗಳು ಮತ್ತು ನಾಲ್ವರು ಕ್ಯಾಬಿನ್ ಸಿಬ್ಬಂದಿ ಇದ್ದರು. ಪ್ರಯಾಣಿಕರಲ್ಲಿ 10 ಪುಟ್ಟ ಮಕ್ಕಳೂ ಇದ್ದವೆನ್ನಲಾಗಿದೆ.

ಟೇಬಲ್ಟಾಪ್ (ಉಬ್ಬಿದ) ರನ್ವೇಯಿಂದ ವಿಮಾನ 35 ಅಡಿ ಆಳದ ಕಣಿವೆಗೆ ಉರುಳಿಬಿದ್ದು ಇಬ್ಭಾಗ ಆಗಿದೆ. ಮಳೆಯ ಜೊತೆಗೆ ಈ ರನ್ವೇ ಕೂಡ ವಿಮಾನ ದುರಂತಕ್ಕೆ ಕಾರಣವೆನ್ನಲಾಗಿದೆ. ಅತ್ಯುತ್ತಮ ಪೈಲಟ್ಗಳಿಗೂ ಇಂಥ ಉಬ್ಬಿದ ರನ್ವೇಯಲ್ಲಿ ವಿಮಾನವನ್ನು ಇಳಿಸುವುದು ಕಷ್ಟದ ಕೆಲಸ. ವಿಮಾನವನ್ನು ಚಾಲನೆ ಮಾಡುತ್ತಿದ್ದ ಪೈಲಟ್ ಕೂಡ ವಾಯುಪಡೆಯಿಂದ ಗೌರವ ಪಡೆದಿದ್ದಂಥವರೂ.

ಈ ದುರಂತದ ಬಗ್ಗೆ ಡಿಜಿಸಿಎ ತನಿಖೆಗೆ ಆದೇಶ ಮಾಡಿದೆ. ಈ ಬಗ್ಗೆ ಮಾತನಾಡಿದ ಡಿಜಿಸಿಎ ನಿರ್ದೇಶಕ ಅರುಣ್ ಕುಮಾರ್, “ವಿಮಾನ ಸರಿಯಾಗಿ ಕೆಳಗಿಳಿದಿಲ್ಲ. ಭಾರೀ ಮಳೆಯಾಗುತ್ತಿತ್ತು. ವಿಮಾನ ಜಾರಿ 35 ಅಡಿ ಕಣಿವೆಗೆ ಬಿದ್ದಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಾವು ಪರಿಸ್ಥಿತಿ ಅವಲೋಕಿಸುತ್ತಿದ್ದೇವೆ” ಎಂದಿದ್ಧಾರೆ.

error: Content is protected !! Not allowed copy content from janadhvani.com