janadhvani

Kannada Online News Paper

ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಬೇಡ ಎನ್ನುವುದು ಸರಿಯಲ್ಲ- ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನ ರದ್ದು ಮಾಡಿ ಎಂಬ ಕೂಗು ಸಾಕಷ್ಟು ಕೇಳಿಬರುತ್ತಿದೆ. ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಪರೀಕ್ಷೆ ಬೇಡ ಎಂಬ ಅಭಿಪ್ರಾಯ ಇದೆ. ಕೆಲವರಂತೂ ಈ ಶೈಕ್ಷಣಿಕ ವರ್ಷವನ್ನೇ ರದ್ದು ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ. ಪರೀಕ್ಷೆ ನಡೆಸುವ ಇರಾದೆಯಲ್ಲಿರುವ ಸರ್ಕಾರ ಕೂಡ ಈಗ ಸಂದಿಗ್ಧ ಸ್ಥಿತಿಯಲ್ಲಿದೆ. ಇದೇ ವೇಳೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪರೀಕ್ಷೆ ನಡೆಸುವುದಕ್ಕೆ ಬಂಬಲ ನೀಡಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪರೀಕ್ಷೆ ಬೇಡ ಎಂಬುದಕ್ಕೆ ತಮ್ಮ ವಿರೋಧ ಇರುವುದನ್ನು ತಿಳಿಸಿದರು. ಪರೀಕ್ಷೆ ನಡೆಸುವುದು ಬೇಡ ಎನ್ನುವುದು ಸರಿಯಲ್ಲ. ಪರೀಕ್ಷೆ ಮಾಡಬೇಕು. ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ಪರೀಕ್ಷೆ ನಡೆಸಲಿ ಎಂದು ಮಾಜಿ ಮುಖ್ಯಮಂತ್ರಿಗಳು ಒತ್ತಾಯಿಸಿದರು.

ಇನ್ನು, ಈ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲೆಗಳು ಮಾಮೂಲಿಯ ದಾಖಲಾತಿ ಶುಲ್ಕ ವಸೂಲಿ ಮಾಡುತ್ತಿವೆ. ಈ ದಾಖಲಾತಿ ಶುಲ್ಕವನ್ನು ಕಡಿಮೆ ಮಾಡಬೇಕೆಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಸಿದ್ದರಾಮಯ್ಯ ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಖಾಸಗಿ ಶಾಲೆಗಳಲ್ಲೂ ಬಡಮಕ್ಕಳು ಓದುತ್ತಿದ್ದಾರೆಂಬುದನ್ನು ಗಮನಿಸಬೇಕು. ಸರ್ಕಾರ ಎಲ್ಲವನ್ನೂ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಿ ಎಂದವರು ಸಲಹೆ ನೀಡಿದರು.

error: Content is protected !! Not allowed copy content from janadhvani.com