janadhvani

Kannada Online News Paper

ನಾಲ್ಕು ದಿನಗಳಿಂದ ಸತತ ತೈಲ ಬೆಲೆಯೇರಿಕೆ- ಗ್ರಾಹಕರು ಕಂಗಾಲು

ನವದೆಹಲಿ:ಗ್ರಾಹಕರಿಗೆ ತೈಲ ಬೆಲೆ ಏರಿಕೆಯ ಬಿಸಿ ತಟ್ಟಿದೆ.ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಸಾಮಾನ್ಯರು ಕಂಗಾಲಾಗಿದ್ದಾರೆ. ಕಳೆದ ಮೂರು ದಿನಗಳಿಂದ ತಲಾ 60 ಪೈಸೆ ಏರಿಕೆಯಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸತತ ನಾಲ್ಕನೇ ದಿನವೂ ಏರಿಕೆ ಮಾಡಲಾಗಿದೆ. ಬುಧವಾರ ಲೀಟರ್ ಪೆಟ್ರೋಲ್ ದರವು 40 ಪೈಸೆ ಹಾಗೂ ಡೀಸೆಲ್ ಬೆಲೆ 45 ಪೈಸೆ ಏರಿಕೆ ಮಾಡಲಾಗಿದೆ.

ಇದರೊಂದಿಗೆ ನಾಲ್ಕು ದಿನದಲ್ಲಿ ಪೆಟ್ರೋಲ್ ದರ 2.15 ಮತ್ತು ಡೀಸೆಲ್ ದರ ರೂ.2.23ರಷ್ಟು ಹೆಚ್ಚಳ ಮಾಡಿದಂತಾಗಿದೆ. ಏರಿಕೆ ಬಳಿಕ ಬೆಂಗಳೂರಿಲ್ಲಿ ಪೆಟ್ರೋಲ್ ದರ 75.77 ಮತ್ತು ಡೀಸೆಲ್ ದರ 68.09ಕ್ಕೆ ತಲುಪಿದೆ. ತೈಲದ ಮೇಲೆ ಬಾರೀ ಪ್ರಮಾಣದ ತೆರಿಗೆ ಹೇರಲಾಗಿದ್ದು, ಪ್ರಸಕ್ತ ಪೆಟ್ರೋಲ್ ಮೇಲೆ ಶೇ.275ರಷ್ಟು ಮತ್ತು ಡೀಸೆಲ್ ಮೇಲೆ ಶೇ.255ರಷ್ಟು ತೆರಿಗೆಯನ್ನು ಗ್ರಾಹಕರು ಪಾವತಿ ಮಾಡುತ್ತಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್ ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಏರಿಳಿತ ಕಾಣುತ್ತವೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ಬಳಿಕ ಪ್ರತಿ ನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ. ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಹಾಗೂ ಡೀಸೆಲ್ ದರವನ್ನು ನೀಡುತ್ತವೆ.

ಈ ತಿಂಗಳಲ್ಲಿ ಪೆಟ್ರೋಲ್​-ಡೀಸೆಲ್​ ದರ ಹೆಚ್ಚಳ?:

ಲಾಕ್‌ಡೌನ್‌ ಸಡಿಲಿಕೆ ಆಗಿರುವ ಬೆನ್ನಿಗೆ ದೇಶದ ಎರಡು ಪ್ರಮುಖ ಪೆಟ್ರೋಲಿಯಂ ತೈಲ ಕಂಪೆನಿಗಳು ದರ ಪರಿಷ್ಕರಣೆಗೆ ಮುಂದಾಗಿದ್ದು, ಜೂನ್ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕನಿಷ್ಠ ಲೀಟರ್‌ಗೆ 4 ರಿಂದ 5 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಯಾರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

error: Content is protected !! Not allowed copy content from janadhvani.com