janadhvani

Kannada Online News Paper

ಸ್ಥಳಾಂತರಿಸಲ್ಪಟ್ಟ ಸಗಟು ವ್ಯಾಪಾರಸ್ಥರಿಗೆ ಮೂಲಸೌಕರ್ಯವಿಲ್ಲ- ಉಗ್ರ ಹೋರಾಟಕ್ಕೆ ಸಜ್ಜು

ಮಂಗಳೂರು:ಕೋವಿಡ್19 ಹರಡುವಿಕೆಯ ನೆಪದಲ್ಲಿ ನಗರದ ಕೇಂದ್ರ ಮಾರುಕಟ್ಟೆಯಲ್ಲಿದ್ದ ಸಗಟು ವ್ಯಾಪಾರಸ್ಥರನ್ನು ಬೈಕಂಪಾಡಿ ಎಪಿಎಂಸಿ ಯಾರ್ಡ್‌ಗೆ ತಾತ್ಕಾಲಿಕ ಸ್ಥಳಾಂತರಿಸಲಾಗಿದೆ.

ಮೂಲಸೌಕರ್ಯವಿಲ್ಲದೆ ಅಲ್ಲಿ ವ್ಯಾಪಾರ ಮಾಡಲು ಕಷ್ಟವಾಗಿದ್ದು, ಪ್ರತ್ಯೇಕ ವ್ಯವಸ್ಥೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಮಾನ ಮನಸ್ಕ ಸಂಘಟನೆಗಳನ್ನು ಒಗ್ಗೂಡಿಸಿ ಪ್ರಬಲ ಹೋರಾಟ ಮಾಡಲಾಗುವುದು ಎಂದು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಾರಾರ‍ಯಧ್ಯಕ್ಷ ಸುನೀಲ್‌ ಕುಮಾರ್‌ ಬಜಾಲ್‌ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಕಂಪಾಡಿಯಲ್ಲಿ ಮೂಲ ವ್ಯವಸ್ಥೆಯೇ ಮಾಡದೆ ವ್ಯಾಪಾರಿಗಳ ಮೇಲೆ ಜಿಲ್ಲಾಡಳಿತ ತೀರ್ಮಾನಗಳನ್ನು ಹೇರುತ್ತಾ ಹೋಗಿದೆ. ಮೊದಲ ಮಳೆಗೆ ತರಕಾರಿಗಳು ಕೆಸರು ನೀರಿನಲ್ಲಿ ತೇಲುತ್ತಿದೆ. ಇದರಿಂದ ಸುಮಾರು 50 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದರು.

ಬಂದ್‌ ಮಾಡಿ ಪ್ರತಿಭಟನೆ: ಸಗಟು ವ್ಯಾಪಾರಿಗೆ ಜಿಲ್ಲಾಡಳಿತ ಬೇರೆಡೆ ವ್ಯವಸ್ಥೆ ಮಾಡುವವರೆಗೆ ಕೇಂದ್ರ ಮಾರುಕಟ್ಟೆಯಲ್ಲಿಯೇ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಮಳೆಯಿಂದ 50 ಲಕ್ಷ ರೂ. ನಷ್ಟವಾಗಿದ್ದು ಅದಕ್ಕೆ ಪರಿಹಾರ ನೀಡಬೇಕು. ತಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಬಂದ್‌ ಮಾಡಿ ಪ್ರತಿಭಟಿಸಲಾಗುವುದು ಎಂದು ಸುನೀಲ್‌ ಕುಮಾರ್‌ ಹೇಳಿದರು.

ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಸ್ತಫ ಕುಂಞಿ ಮಾತನಾಡಿ, ಎಪಿಎಂಸಿ ಯಾರ್ಡ್‌ನ ಬಳಿ ರಾಸಾಯನಿಕ ಕಾರ್ಖಾನೆಗಳು ಇರುವ ತನಕ ತರಕಾರಿ, ಹಣ್ಣುಗಳು ಒಂದು ದಿನಕ್ಕಿಂತ ಜಾಸ್ತಿ ಉಳಿಯುವುದಿಲ್ಲ. ಬೈಕಂಪಾಡಿಗೆ ಹೋದ ಬಳಿಕ ವ್ಯಾಪಾರಿಗಳು ನಷ್ಟ ಅನುಭವಿದ್ದೇ ಹೆಚ್ಚು. ಬಂದರಿನ ದಿನಸಿ ವ್ಯಾಪಾರಿಗಳು, ಅಡಕೆ ವ್ಯಾಪಾರಿಗಳಿಗೆ ಮೀಸಲಿಟ್ಟ ಎಪಿಎಂಸಿ ಯಾರ್ಡ್‌ಗೆ ಅವರೇ ಹೋಗದಿರುವಾಗ ನಮ್ಮನ್ನು ಯಾಕೆ ಒತ್ತಡದಲ್ಲಿ ಕಳುಹಿಸಿಕೊಟ್ಟು ಸಂದಿಗ್ಧ ಸ್ಥಿತಿಗೆ ಹಾಕಿದರು. ಇದರಿಂದ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ 598 ವ್ಯಾಪಾರಸ್ಥರು ಅತಂತ್ರರಾಗಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜನಾರ್ದನ ಸಾಲಿಯಾನ್‌, ಗೌರವ ಸಲಹೆಗಾರ ಅನಿಲ್‌ ಕುಮಾರ್‌, ಉಪಾಧ್ಯಕ್ಷೆ ಗ್ರೇಸಿ ಫರ್ನಾಂಡಿಸ್‌, ಪ್ರಧಾನ ಕಾರ್ಯದರ್ಶಿ ಗಣೇಶ್‌, ಮುಸ್ತಾಕ್‌ ಮತ್ತಿತರರು ಉಪಸ್ಥಿತರಿದ್ದರು

error: Content is protected !! Not allowed copy content from janadhvani.com