janadhvani

Kannada Online News Paper

ಕರಾವಳಿಯಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ – ಯೆಲ್ಲೋ ಅಲರ್ಟ್

ಮಂಗಳೂರು: ಕೊರೋನಾ ಭೀತಿ ನಡುವೆಯೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಇಂದು ಬೆಳಗ್ಗೆಯಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಮಂಗಳೂರಿನಲ್ಲಿ ನಗರವಾಸಿಗಳು ಹೈರಾಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು ನಗರದಲ್ಲಿ ಮುಂಜಾನೆ ಸುಮಾರು 5 ಗಂಟೆಗೆ ಆರಂಭಗೊಂಡ ಮಳೆಯು ಬೆಳಗ್ಗೆ 9ರವರೆಗೂ ಸುರಿದಿದೆ. ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡ ಅಂಫಾನ್ ಚಂಡಮಾರುತದ ಪ್ರಭಾವದಿಂದ ಮೋಡ ಕವಿದ ವಾತಾವರಣದ ಮಧ್ಯೆ ಮಳೆ ಸುರಿದಿದೆ.

ನಗರದ ವಿವಿಧೆಡೆ‌ ಮತ್ತು ಹೊರವಲಯದ ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ದೇರಳಕಟ್ಟೆ, ಕೊಣಾಜೆ, ಕೂಳೂರು, ಬೈಕಂಪಾಡಿ ಮತ್ತಿತರ ಪರಿಸರದಲ್ಲಿ ಮಳೆಯಾಗಿದೆ. ಮಳೆಯೊಂದಿಗೆ ಬಿರುಗಾಳಿಯೂ ಬೀಸಿದ ಪರಿಣಾಮ ಅಲ್ಲಲ್ಲಿ ಮರಗಳು ಉರುಳಿದ್ದು, ವಿದ್ಯುತ್ ಕೂಡ ಕೈ ಕೊಟ್ಟಿತ್ತು. ರವಿವಾರದವರೆಗೆ ಸುಡು ಬೇಸಿಗೆಯ ಧಗೆಯಿಂದ ತತ್ತರಿಸಿದ್ದ ಜನತೆಗೆ ಈ ಮಳೆ ಒಂದಷ್ಟು ಆಹ್ಲಾದಕರವನ್ನುಂಟು ಮಾಡಿತು.ಮಳೆಯ ನಿರೀಕ್ಷೆಯಲ್ಲಿದ್ದ ಕೃಷಿಕರು ಮತ್ತು ರೈತರು ಸಂತಸಗೊಂಡಿದ್ದಾರೆ.

ಭಾರೀ ಮಳೆಯ ಪರಿಣಾಮ ಡ್ರೈನೇಜ್ ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ವಾಹನ ಸವಾರರು ಪರದಾಡಿದ್ದಾರೆ. ಇಡೀ ಜಿಲ್ಲೆಯಾದ್ಯಂತ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್​ ಘೋಷಿಸಲಾಗಿದೆ.

ದೇಶದೆಲ್ಲೆಡೆ ಕೊರೋನಾ ವೈರಸ್​ನಿಂದಾಗಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಅಪ್ಪಳಿಸಿದೆ. ಈ ಚಂಡಮಾರುತಕ್ಕೆ ಅಂಫಾನ್ (Amphan) ಎಂದು ಹೆಸರಿಡಲಾಗಿದೆ. ಈ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕೆಲವು ಭಾಗಗಳಲ್ಲಿ ಇನ್ನು ಒಂದಷ್ಟು ದಿನ ಮಳೆ ಮುಂದುವರಿಯಲಿದೆ.

error: Content is protected !! Not allowed copy content from janadhvani.com