ಮುಂದುವರಿದ ಅಲ್ಪಸಂಖ್ಯಾತ ವಿದ್ಯಾರ್ಥಿ ಬೇಟೆ – ಜೆಎಂಐ ವಿದ್ಯಾರ್ಥಿ ಮುಖಂಡನ ಬಂಧನ

ನವದೆಹಲಿ: ಲಾಕ್ ಡೌನ್ ಮರೆಯಲ್ಲಿ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಬಂಧನ ಕಾರ್ಯದಲ್ಲಿ ತೊಡಗಿದ ದೆಹಲಿ ಪೊಲೀಸರು, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಯ ವಿದ್ಯಾರ್ಥಿ ಮುಖಂಡನನ್ನು ಬಂಧಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಡಿಸೆಂಬರ್‌ 15ರಂದು ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮ ಹಿಂಸಾಚಾರಕ್ಕೆ ತಿರುಗಿತ್ತು.

ಪೊಲೀಸರ ಮಾಹಿತಿ ಪ್ರಕಾರ, 24 ವರ್ಷದ ಆಸಿಫ್‌ ಇಕ್ಬಾಲ್‌ ತನ್ಹಾ ಎಂಬಾತನನ್ನು ಬಂಧಿಸಲಾಗಿದ್ದು, ಗಲಭೆ ಆಯೋಜನೆಯಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದ ಎಂದು ಆರೋಪಿಸಲಾಗಿದೆ. ಆಸಿಫ್‌ನನ್ನು ಸದ್ಯ ಮೆಟ್ರೋಪಾಲಿಟಿನ್‌ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಗಿದ್ದು, ಮೇ 31ರ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಈತ, ಸಿಎಎ ವಿರುದ್ಧ ಪ್ರತಿಭಟನೆ ಆಯೋಜಿಸಿದ್ದ ಜಾಮಿಯಾ ಸಮನ್ವಯ ಸಮಿತಿಯ ಪ್ರಮುಖ ಸದಸ್ಯ ಎಂದು ತಿಳಿದುಬಂದಿದೆ.

‘2019ರ ಡಿಸೆಂಬರ್‌ 15ರಂದು ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸಿಫ್‌ ಎಂಬಾತನನ್ನು ಜಾಮಿಯಾ ಪೊಲೀಸರು ಬಂಧಿಸಿದ್ದಾರೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪರ್ಷಿಯನ್ ಭಾಷೆಯಲ್ಲಿ ಬಿಎ ಪದವಿ ವ್ಯಾಸಂಗ ಮಾಡುತ್ತಿರುವ ಆಸಿಫ್, ಇಸ್ಲಾಮಿಕ್ ವಿದ್ಯಾರ್ಥಿ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ ಮತ್ತು ಸಿಎಎ ವಿರೋಧಿಸಿದ ನಡೆದ ಗಲಭೆ ಪ್ರಕರಣದಲ್ಲಿ ಭಾಗವಹಿಸಿದ್ದ. ಗಲಭೆ ನಡೆದ ಮರುದಿನ (2019 ರ ಡಿಸೆಂಬರ್ 16 ) ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ದೆಹಲಿಯ ಶಾಹೀನ್‌ ಬಾಗ್‌ ನಿವಾಸಿಯಾದ ಈತನನ್ನು ಪ್ರಮುಖ ಆರೋಪಿ ಎಂದು ಉಲ್ಲೇಖಿಸಿದ್ದರು.

ಗಲಭೆ ಪ್ರಕರಣದೊಂದಿಗೆ ಸಂಬಂಧ ಹೊಂದಿದ್ದ ಆರೋಪದಲ್ಲಿ ಸದ್ಯ ಬಂಧಿಸಲಾಗಿರುವ ವಿವಿಯ ಹಲವು ವಿದ್ಯಾರ್ಥಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!