janadhvani

Kannada Online News Paper

ದುಬೈನಿಂದ ಮಂಗಳೂರಿಗೆ ಆಗಮಿಸಿದ 20 ಮಂದಿಗೆ ಕೊರೋನಾ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 16 ಮಂದಿಯಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇವರಲ್ಲಿ 15 ಮಂದಿ ಬುಧವಾರ ದುಬೈಯಿಂದ ಆಗಮಿಸಿದವರಾಗಿದ್ದಾರೆ. ಮತ್ತೊಂದು ಪಾಸಿಟಿವ್ ಸುರತ್ಕಲ್ ನಲ್ಲಿ ಪತ್ತೆಯಾಗಿದೆ.

ಕಳೆದ ಒಂದೂವರೆ ತಿಂಗಳಿನಿಂದ ಸೋಂಕು ಮುಕ್ತ ಜಿಲ್ಲೆಯಾಗಿದ್ದ ಉಡುಪಿ ಜಿಲ್ಲೆಯಲ್ಲೂ ಇಂದು 6 ಪ್ರಕರಣ ವರದಿಯಾಗಿದೆ. ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಉಡುಪಿ ಜಿಲ್ಲೆಗೆ ಬುಧವಾರ ಆಗಮಿಸಿದ್ದ 52 ಮಂದಿಯ ಪೈಕಿ ಐದು ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.

ಮೇ.12 ರಂದು ವಿಶೇಷ ವಿಮಾನದ ಮೂಲಕ ಬಂದಿಳಿದ 179 ಮಂದಿ ಪೈಕಿ, ದಕ್ಷಿಣ ಕನ್ನಡದ 69 ಜನರ ಗಂಟಲಿನ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 15 ಮಂದಿಗೆ ಕೊರೊನಾ ತಗುಲಿರುವುದು ಖಚಿತವಾಗಿದೆ. ಇವರಲ್ಲಿ 12 ಪುರುಷರಿಗೆ ಮತ್ತು 3ಮಹಿಳೆಯರಿಗೆ ಸೋಂಕು ದೃಢವಾಗಿದೆ.15 ಮಂದಿ ಪೈಕಿ ಓರ್ವರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ.

ದ.ಕ ಜಿಲ್ಲಾಡಳಿತದ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ದುಬೈನಿಂದ ಬಂದ 179ಕರಾವಳಿಗರನ್ನು ಮನೆಗೆ ತೆರಳಲು ಹಾಗೂ ಯಾರನ್ನು ಸಂಪರ್ಕಿಸಿಲು ಬಿಡದೆ, ಕ್ವಾರಂಟೈನ್ ಗೆ ಒಳಪಡಿಸಿತ್ತು. ಈ ಕ್ರಮದಿಂದಾಗಿ ಜಿಲ್ಲೆಯ ಜನರಿಗೆ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಇದೆ.

ದುಬೈನಿಂದ ಬಂದ ವಿಮಾನದಲ್ಲಿ ದ.ಕ. ಜಿಲ್ಲೆಯ 96, ಉಡುಪಿ ಜಿಲ್ಲೆಯ 52 ಹಾಗೂ ಇತರ ಜಿಲ್ಲೆಗಳ 31 ಪ್ರಯಾಣಿಕರಿದ್ದರು. ಅವರಲ್ಲಿ 38 ಗರ್ಭಿಣಿಯರು, ವೈದ್ಯಕೀಯ ಚಿಕಿತ್ಸೆ ಪಡೆಯುವ ನಿರೀಕ್ಷೆಯಲ್ಲಿರುವವರು, ದುಬಾೖಯಲ್ಲಿ ಕೆಲಸ ಕಳೆದುಕೊಂಡವರು, ವೀಸಾ ಅವಧಿ ಮುಗಿದವರು, ಕುಟುಂಬ ಮೆಡಿಕಲ್‌ ಅಗತ್ಯ ಇರುವವರು, ಪ್ರವಾಸಕ್ಕೆ ಹೋಗಿ ಬಾಕಿಯಾದವರು ಸೇರಿದ್ದಾರೆ.

ಈಗಾಗಲೇ ಫಸ್ಟ್ ನ್ಯೂರೋ ನಂಟಿನಿಂದ ದ.ಕ ಜಿಲ್ಲೆಯಲ್ಲಿ ವ್ಯಾಪಕಗೊಳ್ಳುತ್ತಿರುವ ಕೊರೊನಾ ಸೋಂಕು ಮೊದಲೇ ಆತಂಕಕ್ಕೆ ಒಳಗಾಗಿರಬೇಕಾದ್ರೆ ಇದೀಗ ದುಬೈನಿಂದ ಮಂಗಳೂರಿಗೆ ಆಗಮಿಸಿರುವ ಪ್ರಯಾಣಿಕರ ಪೈಕಿ ಬರೋಬ್ಬರಿ 15 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿರುವುದು ಇಡೀ ಜಿಲ್ಲೆಯನ್ನು ಬೆಚ್ಚಿಬೀಳುವಂತೆ ಮಾಡಿದೆ.

ದ.ಕ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಕೇಸ್ ಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ 5 ಮಂದಿ ಬಲಿಯಾಗಿದ್ದಾರೆ

ಕರ್ನಾಟಕ ರಾಜ್ಯದಲ್ಲಿ ಶುಕ್ರವಾರ ಬೆಳಗ್ಗಿನ ಹೆಲ್ತ್ ಬುಲಿಟಿನ್ ನಲ್ಲಿ 45 ಮಂದಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1032ಕ್ಕೆ ತಲುಪಿದೆ. ಒಟ್ಟು 35 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

error: Content is protected !! Not allowed copy content from janadhvani.com