janadhvani

Kannada Online News Paper

ಸೌದಿಯ ಎಲ್ಲ ವ್ಯಾಪಾರ ಕೇಂದ್ರಗಳಲ್ಲಿ ಇ-ಪಾವತಿ ವ್ಯವಸ್ಥೆ ಕಡ್ಡಾಯ

ರಿಯಾದ್: ಸೌದಿ ಅರೇಬಿಯಾದ ಎಲ್ಲ ವ್ಯಾಪಾರ ಕೇಂದ್ರಗಳಲ್ಲಿ ಇ-ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಆಗಸ್ಟ್ ಅಂತ್ಯದ ಮೊದಲು ಎಲ್ಲಾ ಕೇಂದ್ರಗಳಲ್ಲಿ ಇ-ಪಾವತಿ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಉಲ್ಲಂಘನೆ ಕಂಡುಬಂದರೆ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.

ಇ-ಪಾವತಿ ವ್ಯವಸ್ಥೆಯನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವ ಬಗ್ಗೆ ದೇಶದ ಎಲ್ಲ ವ್ಯಾಪಾರ ಸಂಸ್ಥೆಗಳಲ್ಲಿ ಈಗಾಗಲೇ ಯೋಜನೆ ರೂಪಿಸಲಾಗಿದೆ. ಯೋಜನೆಯ ಮೊದಲ ಹಂತವನ್ನು ಈ ವರ್ಷದ ಜುಲೈನಲ್ಲಿ ಇಂಧನ ಕೇಂದ್ರಗಳು ಮತ್ತು ಸಂಬಂಧಿತ ಸೇವಾ ಕೇಂದ್ರಗಳಲ್ಲಿ ಪ್ರಾರಂಭಿಸಲಾಗಿತ್ತು. ಈ ವರ್ಷದ ನವೆಂಬರ್‌ನಿಂದ, ಪಂಚರ್ ಅಂಗಡಿಗಳು, ಬಿಡಿಭಾಗಗಳ ಅಂಗಡಿಗಳು ಮತ್ತು ವರ್ಕ್ ಶಾಪ್ಗಳು ಸೇರಿದಂತೆ ಎಲ್ಲಾ ವಾಹನ ಸಂಬಂಧಿತ ಸಂಸ್ಥೆಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.

ಮುಂದಿನ ಆಗಸ್ಟ್ ವೇಳೆಗೆ ದೇಶದ ಎಲ್ಲಾ ವ್ಯಾಪಾರ ಸಂಸ್ಥೆಗಳಿಗೆ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆ ಕಡ್ಡಾಯ ಎಂದು ವಾಣಿಜ್ಯ ಸಚಿವಾಲಯ ಪ್ರಕಟಿಸಿದೆ. ಹಾಗೆ ಮಾಡಲು ವಿಫಲರಾದವರಿಗೆ ದಂಡ ವಿಧಿಸಲಾಗುತ್ತದೆ. ಪುನರಾವರ್ತಿಸಿದರೆ, ಸಂಸ್ಥೆಗಳನ್ನು ಮುಚ್ಚಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಈ ಯೋಜನೆಯನ್ನು ದೇಶದ ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಿಗೂ ವಿಸ್ತರಿಸುವುದಾಗಿ ಭಯೋತ್ಪಾದನಾ ವಿರೋಧಿ ಕಾರ್ಯಕ್ರಮದ ಭಾಗವಾಗಿ ಈ ಹಿಂದೆ ಘೋಷಿಸಲಾಗಿತ್ತು. ದೇಶದಲ್ಲಿ ಕರೆನ್ಸಿ ರಹಿತ ವಹಿವಾಟಿನ ಪ್ರಚಾರಪಡಿಸುವುದರ ಭಾಗವಾಗಿ, ವಾಣಿಜ್ಯ ಹೂಡಿಕೆ ಸಚಿವಾಲಯ, ನಗರಸಭೆ, ಗ್ರಾಮೀಣ ವ್ಯವಹಾರಗಳ ಸಚಿವಾಲಯ ಮತ್ತು ಸೌದಿ ಅರೇಬಿಯನ್ ಕರೆನ್ಸಿ ಏಜೆನ್ಸಿಯ ಸಹಕಾರದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

error: Content is protected !! Not allowed copy content from janadhvani.com