janadhvani

Kannada Online News Paper

ಲಾಕ್ಡೌನ್ ಮುಂದುವರಿಸಲು ಎಲ್ಲ ರಾಜ್ಯಗಳಿಗೆ ಕೇಂದ್ರದ ಸುತ್ತೋಲೆ

ಬೆಂಗಳೂರು,ಏ.30:ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ. ಕೊರೋನಾ ನಿಯಂತ್ರಣಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಮೂರನೇ ಹಂತದಲ್ಲಿ ಲಾಕ್ಡೌನ್ ಮುಂದುವರಿಸುವುದು ಬಹುತೇಕ ಖಚಿತ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಎರಡನೇ ಹಂತದ ಲಾಕ್ಡೌನ್ ಮೇ 3ರಂದು ಪೂರ್ಣಗೊಳ್ಳಲಿದೆ. ಇದು ಮುಂದುವರಿಯಬೇಕೋ ಅಥವಾ ಬೇಡವೋ ಎನ್ನುವ ಕುರಿತಾಗಿ ಇತ್ತೀಚೆಗೆಷ್ಟೇ ಎಲ್ಲ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು. ಈಗ ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದ್ದು, ಹೊಸ ಮಾರ್ಗಸೂಚಿ ಜಾರಿಗೆ ತರಲು ಸಿದ್ಧರಾಗಿ ಎಂದು ಹೇಳಿದೆ.

ನಿನ್ನೆ ಎಲ್ಲರಾಜ್ಯಗಳೊಂದಿಗೆ ಗೃಹ ಇಲಾಖೆ ಸಭೆ ನಡೆಸಿದೆ. ಸಭೆಯಲ್ಲಿ ಕೊರೋನಾ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. “ಮೇ 4ರಿಂದ ಹೊಸ ಮಾರ್ಗಸೂಚಿ ಜಾರಿಗೆ ತರುತ್ತಿದ್ದೇವೆ. ಎಲ್ಲ ರಾಜ್ಯಗಳು ಅದನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಬೇಕು. ಆದರೆ ಈ ಬಾರಿ ಹೆಚ್ಚಿನ ವಿನಾಯಿತಿಗಳು ಇರಲಿವೆ,” ಎಂದು ಗೃಹ ಇಲಾಖೆ ರಾಜ್ಯಗಳಿಗೆ ತಿಳಿಸಿದೆ.

ಭಾರತದಲ್ಲಿ 33,062 ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು, ಇದುವರೆಗೂ 1,079 ಜನರು ಸಾವನ್ನಪ್ಪಿದ್ದಾರೆ. 8,437 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ

error: Content is protected !! Not allowed copy content from janadhvani.com