janadhvani

Kannada Online News Paper

ಮೇ.3ರ ವರೆಗೆ ಲಾಕ್​ಡೌನ್​ ಮುಂದುವರಿಕೆ: ಎಲ್ಲಾ ವಿಮಾನಯಾನ ರದ್ದು

ನವದೆಹಲಿ, ಏ.14:ಇಂದು ಬೆಳಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಮೇ 3ರವರೆಗೆ ಈ ಲಾಕ್​ಡೌನ್​ ಮುಂದುವರಿಯಲಿದೆ ಎಂದು ಘೋಷಣೆ ಮಾಡಿದರು. ಕೊರೋನಾ ವೈರಸ್​ ನಿಯಂತ್ರಣ ಮಾಡಲು ದೇಶದಲ್ಲಿ 21 ದಿನಗಳ ಲಾಕ್​ಡೌನ್​ ಹೇರಲಾಗಿತ್ತು. ಆದಾಗ್ಯೂ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿಲ್ಲ. ಹೀಗಾಗಿ ಪ್ರಧಾನಿಯವರು ಲಾಕ್​ಡೌನ್​ಅನ್ನು ಮತ್ತೆ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

“ನಾನು ಲಾಕ್​ಡೌನ್​ ಬಗ್ಗೆ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಮಾತನಾಡಿದ್ದೇನೆ. ಈ ವೇಳೆ ಅವರು ಲಾಕ್​ಡೌನ್​ ಮುಂದುವರಿಸಬೇಕು ಎಂದು ಕೋರಿದ್ದರು. ಜನಸಾಮಾನ್ಯರು ಕೂಡ ಇದೇ ಅಭಿಪ್ರಾಯ ಹೊರಹಾಕಿದ್ದರು. ಹೀಗಾಗಿ, ಲಾಕ್​ಡೌನ್​ ಆದೇಶ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದೇನೆ,” ಎಂದು ಮೋದಿ ಹೇಳಿದರು.

21 ದಿನಗಳ ಲಾಕ್​ಡೌನ್​ನಿಂದಾಗಿ ದೇಶದ ಸಾಮಾನ್ಯ ಜನರಿಗೆ ತೀವ್ರ ತೊಂದರೆ ಉಂಟಾಗಿದೆ. ಆದಾಗ್ಯೂ ದೇಶದ ಒಳಿತಿಗೋಸ್ಕರ ಅದನ್ನು ಸಹಿಸಿಕೊಂಡ ಎಲ್ಲರಿಗೂ ಮೋದಿ ಧನ್ಯವಾದ ಅರ್ಪಿಸಿದ್ದಾರೆ.

“ಬೇರೇ ರಾಷ್ಟ್ರಗಳಲ್ಲಿ ಕೊರೋನಾ ತುಂಬಾನೇ ಭೀಕರವಾಗಿ ಹರಡುತ್ತಿದೆ. ಆದರೆ, ಭಾರತದಲ್ಲಿ ಇದರ ನಿಯಂತ್ರಣವಾಗುತ್ತಿದೆ. ಆರಂಭದಲ್ಲಿ ಭಾರತದಲ್ಲಿ ಒಂದೇ ಒಂದೇ ಪ್ರಕರಣವೂ ಇರಲಿಲ್ಲ. ಆದಾಗ್ಯೂ, ಕೊರೋನಾ ವೈರಸ್​ ಅಂಟಿದ ರಾಷ್ಟ್ರಗಳಿಂದ ಜನರಿಗೆ ಬರಲು ನಾವು ಅವಕಾಶ ನೀಡಿದೆವು. ಹೀಗೆ ಬಂದವರ ಸ್ಕ್ರೀನಿಂಗ್​ ಕೂಡ ಮಾಡಲಾಯಿತು. ಮಾಲ್​ ಕೂಡ ಬಂದ್​ ಮಾಡಲಾಯಿತು. ಆದಾಗ್ಯೂ ಕೊರೋನಾ ಹಬ್ಬಿದೆ,” ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.

ಆರಂಭದಲ್ಲಿ ಭಾರತ ಹಾಗೂ ಕೆಲ ರಾಷ್ಟ್ರಗಳಲ್ಲಿ ಕೊರೋನಾ ಪ್ರಕರಣಗಳು ಸಮವಾಗಿ ಇತ್ತು. ಆದರೆ, ಇಂದು ಅಲ್ಲಿ ಕೊರೋನಾ ಭೀಕರವಾಗಿದೆ. ಭಾರತದಲ್ಲಿ ನಿಯಂತ್ರಣದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ​ 121ನೇ ಜನ್ಮದಿನ. ಮೋದಿ ತಮ್ಮ ಭಾಷಣದಲ್ಲಿ ಅಂಬೇಡ್ಕರ್​ ಅವರನ್ನು ನೆನೆದರು.

” ವೈರಸ್​ ಹರಡದ ಕೆಲ ಪ್ರದೇಶಗಳಿಗೆ ಲಾಕ್​ಡೌನ್​ನಿಂದ ವಿನಾಯಿತಿ ನೀಡುತ್ತಿದ್ದೇವೆ. ಆದರೆ, ಷರತ್ತುಗಳು ಅನ್ವಯಿಸುತ್ತೇವೆ. ಒಂದೊಮ್ಮೆ ಈ ಷರತ್ತುಗಳನ್ನು ಮೀರಿದರೆ ವಿನಾಯಿತಿ ಹಿಂಪಡೆಯುತ್ತೇವೆ,” ಎಂದು ಮೋದಿ ಎಚ್ಚರಿಸಿದರು.

ವಿಮಾನಯಾನ ರದ್ದು : ದೇಶದಾದ್ಯಂತ ಲಾಕ್‌ಡೌನ್ ಅವಧಿ ಮುಂದುವರೆದಿರುವ ಕಾರಣ ಅಂತಾರಾಷ್ಟ್ರೀಯ ಮತ್ತು ದೇಶೀಯ ವಾಯು ವಿಮಾನ ಸಾರಿಗೆ ವ್ಯವಸ್ಥೆಯನ್ನು ಮೇ 03 ರ ಮಧ್ಯರಾತ್ರಿ 11.59 ರ ವರೆಗೆ ರದ್ದು ಮಾಡಲಾಗಿದೆ ಎಂದು ಭಾರತೀಯ ವಿಮಾನಯಾನ ಸಚಿವಾಲಯ ಸಂಸ್ಥೆ ತಿಳಿಸಿದೆ.

ಭಾರತದಲ್ಲಿ ಈಗಾಗಲೇ ಕಳೆದ ಒಂದು ತಿಂಗಳಿನಿಂದ ಎಲ್ಲಾ ವಿಮಾನ ನಿಲ್ದಾಣಗಳೂ ಸ್ಥಗಿತವಾಗಿವೆ. ಅಂತಾರಾಷ್ಟ್ರೀಯ ಹಾಗೂ ದೇಶೀಯ ವಿಮಾನ ಯಾನಕ್ಕೆ ಕೇಂದ್ರ ಸರ್ಕಾರ ತಡೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳೂ ನಷ್ಟದಲ್ಲಿದ್ದು ಅಪಾರ ಸಂಖ್ಯೆಯ ಉದ್ಯೋಗಿಗಳು ಇದೀಗ ಕೆಲಸ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

error: Content is protected !! Not allowed copy content from janadhvani.com