janadhvani

Kannada Online News Paper

ಕೊರೋನಕ್ಕೂ ಧರ್ಮದ ಲೇಪವನ್ನು ಹಚ್ಚಿದವರೊಂದಿಗೆ ಒಂದ್ನಿಮಿಷ…!

✍ #ಸ್ನೇಹಜೀವಿ ಅಡ್ಕ

ರಾಜಸ್ಥಾನದ ಜೈಪುರದಲ್ಲಿ ಗರ್ಭಿಣಿ ಮುಸ್ಲಿಂ ಮಹಿಳೆಗೆ ಅಲ್ಲಿನ ಸರ್ಕಾರಿ ಆಸ್ಪತ್ರೆಯೊಂದರ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ ಪರಿಣಾಮ ಮಗುವೊಂದು ಮೃತಪಟ್ಟ ದಾರುಣ ಘಟನೆಯೊಂದು ವರದಿಯಾಗಿದೆ.

ಜಾಗತಿಕ ಮಟ್ಟದಲ್ಲಿ ಕೊರೋನ ವೈರಸ್ ಒಂದು ರೋಗವಾಗಿ ಕಂಡು, ಅದಕ್ಕಾಗಿ ಚಿಕಿತ್ಸೆಯನ್ನು ಕಂಡು ಹುಡುಕುವ ತರಾತುರಿಯಲ್ಲಿದ್ದರೆ ಭಾರತದಲ್ಲಿ ಮಾತ್ರ ಕೊರೋನವನ್ನು ಕೂಡ ಮುಸ್ಲಿಂ ಸಮುದಾಯದ ತಲೆಗೆ ಕಟ್ಟುವ ವ್ಯವಸ್ಥಿತವಾದ ಪ್ರಯತ್ನದ ಫಲಿತಾಂಶವಾಗಿತ್ತು ಗರ್ಭಿಣಿಗೆ ಚಿಕಿತ್ಸೆ ನಿರಾಕರಿಸಿದ್ದು.
ಕೇವಲ ಇದೊಂದು ಘಟನೆಯಾದರೆ ನಮಗೆ ಸುಮ್ಮನಾಗಬಹುದಿತ್ತು.

ಹಸಿದ ಹೊಟ್ಟೆಯ ಹಸಿವನ್ನು ನೀಗಿಸಲು ಆಹಾರ ಸಾಮಾಗ್ರಿಗಳನ್ನು ಕೊಂಡು ಹೋಗುತ್ತಿದ್ದವರನ್ನು ತಡೆದು ನಿಲ್ಲಿಸಿದ ಘಟನೆ ಒಂದು ಕಡೆ ನಡೆದರೆ, ಇನ್ನೊಂದು ಕಡೆ ಕೊರೋನ ವೈರಸ್ ಇರುವಷ್ಟು ದಿನ ಈ ಏರಿಯಾದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಬರಬಾರದು ಅನ್ನುವ ಪೋಸ್ಟರೊಂದು ನೇತಾಡುವುದು ಕಾಣಸಿಕ್ಕಿದವು.

ಇಷ್ಟು ದಿನಗಳ ಕಾಲ ಅವರು ಒಳ್ಳೆಯವರು. ನಮ್ಮ ಕುರಿತು ಅವರಿಗೆ ಕೆಟ್ಟ ಭಾವನೆಗಳು ಇಲ್ಲ ಅಂತ ನಾವು ಅಭಿಮಾನ ಪಡುತ್ತಿದ್ದ ಹಿಂದೂ ಸಹೋದರರು ಕೂಡ ಇಂದು ಕೊರೋನ ನಿಮ್ಮವರಿಂದ ವ್ಯಾಪಿಸಿದೆ ಅಂತ ಹೇಳುವಾಗ ನಿಜಕ್ಕೂ ಬೇಸರವಾಗುತ್ತಿದೆ.

ಅದಕ್ಕಿಂತ ಮಿಗಿಲಾಗಿ ನನ್ನ ದೇಶದ ಪರಿಸ್ಥಿತಿಯನ್ನು ನೋಡಿ ಆತಂಕವಾಗುತ್ತಿದೆ.
ಮಾಧ್ಯಮಗಳು ಅಷ್ಟರ ಮಟ್ಟಿಗೆ ಕೊರೋನವನ್ನು ಒಂದು ಸಮುದಾಯದ ವಿರುದ್ಧ ಷಡ್ಯಂತ್ರ ರೂಪಿಸುವಲ್ಲಿ ಸಫಲಗೊಂಡಿದೆ.

ಕೊರೋನದಿಂದ ತತ್ತರಿಸಿದವರಲ್ಲಿ ಈ ದೇಶದ ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರೂ ಇದ್ದಾರೆ.
ಕೊರೋನ ಪೀಡಿತರಲ್ಲೂ ಕೂಡ ಎಲ್ಲಾ ಧರ್ಮೀಯರಿದ್ದಾರೆ. ಆದರೂ ಕೂಡ ಒಂದು ಸಮುದಾಯವನ್ನು ಮಾತ್ರ ಯಾಕೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ ಅನ್ನುವ ಪ್ರಶ್ನೆ ಕಾಡುವಾಗಲೆಲ್ಲಾ ನಮಗೆ ಅರ್ಥೈಸಬೇಕಾದ ವಾಸ್ತವ ಇಲ್ಲಿನ ಕೊರೋನಕ್ಕಿಂತಲೂ ಕೋಮು ವೈರಸ್ ಈ ದೇಶದಲ್ಲಿ ಬಲವಾಗಿ ಬೇರೂರಿದೆ. ಅದು ಈ ಮನುಕುಲಕ್ಕೆ ಮಹಾ ಆಪತ್ತು.

ಹಸಿದ ಹೊಟ್ಟೆಗೆ ಅನ್ನ ನೀಡುವ ಕೈಗಳನ್ನು ಕಟ್ಟಿ ಹಾಕುವ ವ್ಯಾಮೋಹವಿದ್ದರೆ ಅದನ್ನು ಬಿಟ್ಟು ಬಿಡಿ.
ಡೆಂಗ್ಯೂ ಜ್ವರ ಅತಿಯಾಗಿ ಕಾಡಿದಾಗ ಇಲ್ಲಿನ ಎಲ್ಲಾ ಧರ್ಮೀಯರೂ ಕೂಡ ಡೆಂಗ್ಯೂ ಭಾದಿತರಾಗಿದ್ದರು.
ಡೆಂಗ್ಯೂ ಪೀಡಿತರಿಗೆ ರಕ್ತದ ಅಗತ್ಯತೆ ಇದ್ದಾಗ ಹಲವಾರು ಹಿಂದೂ ಧರ್ಮೀಯರಿಗೆ ಸಕಾಲದಲ್ಲಿ ರಕ್ತದ ಪೂರೈಕೆಯನ್ನು ಮಾಡಿಕೊಟ್ಟವರು ಇಲ್ಲಿನ ಮುಸ್ಲಿಂ ಸಹೋದರರಾಗಿದ್ದಾರೆ. ನಿಮಗೆ ಸಂಶಯವಿದ್ದಲ್ಲಿ ಇಲ್ಲಿರುವ ಬ್ಲಡ್ ಬ್ಯಾಂಕ್ ಗಳತ್ತ ಹೋಗಿ ಒಮ್ಮೆ ವಿಚಾರಿಸಿ ಬನ್ನಿ. ಅಂದೂ ಕೂಡ ನೀವು ತಡೆಯಬೇಕಿತ್ತು.
ಇಂದು ಮಾನವೀಯ ನೆಲೆಯಲ್ಲಿ ಆಹಾರ ಒದಗಿಸಿಕೊಡುವಾಗ ಅವರನ್ನು ತಡೆದು ಪೌರುಷ ತೋರಿಸುವ ತಾವುಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ.

“ನಿನ್ನ ನೆರೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ಮುಸ್ಲಿಮನಲ್ಲ” ಎಂದು ಕಲಿಸಿದ ಇಸ್ಲಾಂ ನಿನ್ನ ನೆರೆಯವನು ಯಾವುದೇ ಧರ್ಮೀಯನಾದರೂ ನೀನು ಆತನಿಗೆ ಸಹಾಯ ಮಾಡಬೇಕೆಂದು ಕಲಿಸಿಕೊಟ್ಟಿದೆ.
ಕೊರೋನ ವೈರಸ್ ನಿಂದಾಗಿ ಲಾಕ್ ಡೌನ್ ಘೋಷಿಸಿದ ನಂತರ ಹಸಿವಿನಿಂದ ಬಳಲಬಾರದು ಅನ್ನುವ ದೃಷ್ಟಿಯಿಂದ ಇಲ್ಲಿನ ಮುಸ್ಲಿಂ ಸಂಘಟನೆಗಳು ಅವರಿಗೆ ನೆರವಾಗುವ ಪ್ರಯತ್ನ ಮಾಡಿದೆ, ಮಾಡುತ್ತಲೂ ಇದೆ.
ಅದನ್ನು ಸಹಿಸಲಾಗದಾಗ ಸುಳ್ಳಾರೋಪಗಳನ್ನು ಹೊರಿಸಿ ತಡೆಯುವ ಪ್ರಯತ್ನ ನೀವು ಮಾಡುವುದಾದರೆ ಅದು ತಿರುಕನ ಕನಸಾಗಿ ಉಳಿಯುವುದರಲ್ಲಿ ಸಂಶಯವಿಲ್ಲ.
ದೆಹಲಿಯ ವಿಷಯವನ್ನು ಮುಂದಿರಿಸಿ ಮುಸ್ಲಿಮರನ್ನೇ ಹೊಣೆಯಾಗಿಸಿ ಸ್ಟೇಟಸ್ ಹಾಕುವುದಾದರೆ ನಿಮ್ಮ ತಿಳಿಗೇಡಿತನಕ್ಕೆ ನಾವು ಜವಾಬ್ದಾರರಲ್ಲ.
ನಿಮ್ಮ ಮನಸ್ಸಿನ ಅಂತರಾಳದಲ್ಲಿ ಬೆಳೆದು ನಿಂತ ಕೋಮು ವೈರಸ್ ನನ್ನು ಸಾಯಿಸಿ ಮಾನವೀಯತೆ ಮೈಗೂಡಿಸಿಕೊಂಡ ಮನುಷ್ಯರಾಗಿ ಬಾಳುವಂತಾಗಿರಿ.

error: Content is protected !! Not allowed copy content from janadhvani.com