ಲಾಕ್‌ಡೌನ್: ಆದೇಶ ಉಲ್ಲಂಘಿಸಿದವರಿಗೆ 14 ದಿನ ಕ್ವಾರಂಟೈನ್- ಕೇಂದ್ರ ಆದೇಶ

ನವದೆಹಲಿ,ಮಾ.29: ಲಾಕ್‌ಡೌನ್ ಆದೇಶ ಉಲ್ಲಂಘಿಸಿ ನಗರಗಳಿಂದ ತಮ್ಮ ಊರುಗಳಿಗೆ ತೆರಳಿದ ಸಾವಿರಾರು ವಲಸೆ ಕಾರ್ಮಿಕರನ್ನು ಕಡ್ಡಾಯ 14 ದಿನ ಕ್ವಾರಂಟೈನ್‌ನಲ್ಲಿರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ.

21 ದಿನಗಳ ಕಾಲ ಇಡೀ ದೇಶವನ್ನು ಲಾಕ್‌ಡೌನ್ ಮಾಡಿದ ಹೊತ್ತಲೇ ಕೆಲವು ಭಾಗಗಳಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಪ್ರಯಾಣ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಯಾರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಬಾರದು. ಹೀಗೆ ನಗರಗಳಿಂದ ತಮ್ಮು ಊರುಗಳಿಗೆ ತೆರಳಿದ ಎಲ್ಲರನ್ನು ಕಡ್ಡಾಯವಾಗಿ 14 ದಿನ ಕ್ವಾರಂಟೈನ್‌ನಲ್ಲಿರಿಸಿ ಎಂದು ಸೂಚನೆ ನೀಡಿದೆ.

ಕೊರೋನಾ ವೈರಸ್ ತಡೆಗೆ ಇದೇ ಮಾರ್ಚ್ 25ನೇ ತಾರೀಕಿಂದೇ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಇಡೀ ದೇಶವನ್ನು ಲಾಕ್‌ಡೌನ್ ಮಾಡಿ ಆದೇಶಿಸಿದ್ದರು. ಇದನ್ನು ಅನುಷ್ಠಾನಗೊಳಿಸುವ ಹೊಣೆ ಜಿಲ್ಲಾ ಮೆಜಿಸ್ಟ್ರೇಟ್ ಮತ್ತು ಪೊಲೀಸ್ ಆಯುಕ್ತರದ್ದು ಎಂದು ಕೇಂದ್ರ ಪುನರುಚ್ಚರಿಸಿದೆ.

ಕೊರೋನಾ ಭೀತಿ ಹೆಚ್ಚಾಗಿರುವ ಹಿನ್ನೆಲೆ ಏಪ್ರಿಲ್ 14ರವರೆಗೆ ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸೇವೆಯ ಲಭ್ಯವಿಲ್ಲ. ಹೀಗಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬದುಕು ಕಟ್ಟಿಕೊಳ್ಳಲು ಬೇರೆಡೆಗೆ ವಲಸೆ ಹೋಗಿದ್ದ ಅಸಂಖ್ಯಾತ ಜನರು ಕೊರೋನಾ ಭೀತಿಯಿಂದ ತಮ್ಮ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದಾರೆ. ದೇಶಾದ್ಯಂತ ದಿನಗೂಲಿ ಕಾರ್ಮಿಕರು ಸೇರಿದಂತೆ ಅನೇಕ ಜನರು ಕಾಲ್ನಡಿಗೆಯಲ್ಲೇ ತಮ್ಮ ಮನೆ ಸೇರುವ ಧಾವಂತದಲ್ಲಿದ್ದಾರೆ.

ಈ ಮಧ್ಯೆ ಕೂಲಿ ಕಾರ್ಮಿಕರು ವಲಸೆ ಹೋಗುವಂತಹ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಬೇಕು. ಬಡವರು ಮತ್ತು ಅಗತ್ಯವಿದ್ದವರಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಏರ್ಪಡಿಸಿದಂತೆಯೇ, ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲೂ ವ್ಯವಸ್ಥೆ ಮಾಡಬೇಕು. ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ವೇತನ ತಪ್ಪದಂತೆ ನೋಡಿಕೊಳ್ಳಬೇಕು. ಕಾರ್ಮಿಕರಿಂದ ಮನೆ ಬಾಡಿಗೆ ಕೇಳದಂತೆ ಮನೆಯ ಮಾಲೀಕರಿಗೆ ಸೂಚನೆ ನೀಡಬೇಕು. ಕಾರ್ಮಿಕರು ಮತ್ತು ವಿದ್ಯಾರ್ಥಿಗಳನ್ನು ಮನೆ ಖಾಲಿ ಮಾಡುವಂತೆ ಹೇಳುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೇಂದ್ರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!