janadhvani

Kannada Online News Paper

ದೆಹಲಿ ಹಿಂಸಾಚಾರ: ಮೃತರ ಸಂಖ್ಯೆ ಏಳಕ್ಕೇರಿಕೆ- ಕೇಜ್ರಿವಾಲ್ ತುರ್ತು ಸಭೆ

ನವದೆಹಲಿ,ಫೆ.25: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನೆ ವಿರೋಧಿಸಿ ದೆಹಲಿಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಸೋಮವಾರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವ ಸಂಖ್ಯೆ ಏಳಕ್ಕೇರಿದೆ.ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ನಡೆದಿದ್ದು, ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಹೆಡ್​ ಕಾನ್ಸ್​ಟೇಬಲ್ ರತನ್​ ಲಾಲ್​ (42)​​​​ ಸೇರಿ ನಾಲ್ವರು ಮೃತಪಟ್ಟಿದ್ದರು. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ಆಗಿದೆ.ಸದ್ಯ, ಈಶಾನ್ಯ ದೆಹಲಿಯಲ್ಲಿ ಸೆಕ್ಷನ್​ 144 ಜಾರಿ ಮಾಡಲಾಗಿದೆ. ಈ ಭಾಗದಲ್ಲಿ ಕೆಲ ಮನೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಸದ್ಯ, ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

ಶಾಸಕರ ತುರ್ತುಸಭೆ ಕರೆದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ಈಶಾನ್ಯ ದೆಹಲಿಯ ಕೆಲವೆಡೆ ಮಂಗಳವಾರವೂ ಹೊಸದಾಗಿ ಕಲ್ಲುತೂರಾಟ ಪ್ರಕರಣಗಳು ವರದಿಯಾಗಿವೆ. ಉದ್ವಿಗ್ನ ಪರಿಸ್ಥಿತಿ ತಹಬದಿಗೆ ಬಂದಿಲ್ಲ. ತಕ್ಷಣ ಹಿಂಸಾಚಾರ ನಿಲ್ಲಿಸಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

‘ನಗರದ ಕೆಲ ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ನನಗೆ ಆತಂಕವಾಗಿದೆ. ನಾವೆಲ್ಲರೂ ಸೇರಿ ದೆಹಲಿಯಲ್ಲಿ ಶಾಂತಿ ಮರುಸ್ಥಾಪನೆಗೆ ಪ್ರಯತ್ನಿಸಬೇಕು. ಹಿಂಸಾಚಾರವನ್ನು ತಕ್ಷಣ ನಿಲ್ಲಿಸಿ ಎಂದು ನಾನು ಎಲ್ಲರಲ್ಲಿಯೂ ಮನವಿ ಮಾಡುತ್ತಿದ್ದೇನೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

‘ಹಿಂಸಾಚಾರ ನಡೆದಿರುವ ಕ್ಷೇತ್ರಗಳ ಎಲ್ಲ ಶಾಸಕರು ಮತ್ತು ಹಿರಿಯ ಅಧಿಕಾರಿಗಳನ್ನು ಶೀಘ್ರ ಭೇಟಿಯಾಗಲಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ನಗರದ ಕೆಲ ಭಾಗಗಳಲ್ಲಿ ಮಂಗಳವಾರವೂ ಹಿಂಸಾಚಾರ ಮುಂದುವರಿದಿದೆ. ಕರವಲ್ ನಗರ್ ಟೈರ್‌ ಮಾರ್ಕೆಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದು ಅಗ್ನಿ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವಾಗಿ ನಡೆದ ದುಷ್ಕೃತ್ಯವೋ ಎನ್ನುವುದು ದೃಢಪಟ್ಟಿಲ್ಲ.

ಅಗ್ನಿಶಾಮಕ ಸಿಬ್ಬಂದಿಗೆ ಅಗ್ನಿಅನಾಹುತದ ಸ್ಥಳ ತಲುಪಲೂ ಸಾಧ್ಯವಾಗಿಲ್ಲ. ಅಗ್ನಿಸಾಮಕ ವಾಹನವು ಪೊಲೀಸ್ ರಕ್ಷಣೆಗಾಗಿ ಜಾಫ್ರಾಬಾದ್ ಪೊಲೀಸ್ ಠಾಣೆ ಸಮೀಪವೇ ಕಾದು ನಿಂತಿದೆ.

ದೆಹಲಿ ಮೆಟ್ರೊ ರೈಲು ನಿಗಮವು ಐದು ಸ್ಟೇಷನ್‌ಗಳಲ್ಲಿ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ಟ್ವೀಟ್ ಮಾಡಿದೆ. ‘ಜಾಫ್ರಾಬಾದ್, ಮೌಜ್‌ಪುರ್–ಬಾಬರ್‌ಪುರ್, ಗೋಕುಲ್‌ಪುರಿ, ಜೊಹ್ರಿ ಎನ್‌ಕ್ಲೇವ್ ಮತ್ತು ಶಿವ್‌ ವಿಹಾರ್‌ ನಿಲ್ದಾಣಗಳನ್ನು ಮುಚ್ಚಲಾಗಿದೆ. ವೆಲ್‌ಕಮ್ ಮೆಟ್ರೊ ಸ್ಟೇಷನ್‌ನಲ್ಲಿಯೇ ರೈಲು ಸಂಚಾರ ಅಂತ್ಯಗೊಳ್ಳಲಿದೆ ಎಂದು ನಿಗಮ ಹೇಳಿದೆ.

error: Content is protected !! Not allowed copy content from janadhvani.com