janadhvani

Kannada Online News Paper

ಸ್ಲಂಗಳಿಗೆ ಅಡ್ಡಲಾಗಿ ಕಟ್ಟುತ್ತಿರುವ ಗೋಡೆ, ಟ್ರಂಪ್‌ ಆಗಮನಕ್ಕೆ ಸೀಮಿತವೆಂದು ಭಾವಿಸಿದ್ದೀರಾ..?

✍ಟಿ.ಎಂ ಸ‌ಅದಿ ತಂಬಿನಮಕ್ಕಿ

ಗುಜರಾತ್‌ನಲ್ಲಿ ಸ್ಲಂಗಳಿಗೆ ಅಡ್ಡಲಾಗಿ ಕಟ್ಟುವ ಗೋಡೆಗಳು ಕೇವಲ ಟ್ರಂಪ್‌ ಆಗಮನಕ್ಕೆ ಮಾತ್ರವೆಂದು ನೀವು ನಂಬಿದ್ದರೆ ನಿಮ್ಮದು ಕೇವಲ ಭ್ರಮೆ ಮಾತ್ರ. ಈ ಗೋಡೆಗಳ ಏಕೈಕ ಉದ್ದೇಶ ಬಡತನವನ್ನು ಸಂಪೂರ್ಣವಾಗಿ ಮರೆಮಾಚಿಡುವುದು. ಕೇವಲ ಟ್ರಂಪ್ ಕಾರ್ಯಕ್ರಮ ಮಾತ್ರವಾಗಿದ್ದರೆ ಅದಕ್ಕೆ ಇಷ್ಟೊಂದು ಮೊತ್ತದ, ಬಲಿಷ್ಟವಾದ ಗೋಡೆಯ ಅಗತ್ಯವಾದರೂ ಏನಿತ್ತು..? ಅಥವಾ ಈ ಸ್ಲಂಗಳಿರುವ ಪ್ರದೇಶದಲ್ಲೇ ಈ ಕಾರ್ಯಕ್ರಮ ನಡೆಸಬೇಕಿಂದಿತ್ತೇ..? ಈ ದಾರಿಯಿಂದಾಗಿಯೇ ಟ್ರಂಪ್‌ ಕಾರ್ಯಕ್ರಮಕ್ಕೆ ತಲುಪಬೇಕೆಂಬ ಶರತ್ತೇನಾದರೂ ಏನಿತ್ತು..?

ಈ ಎಲ್ಲಾ ಪ್ರಶ್ನೆಗಳೇ ಕೇಂದ್ರ ಸರಕಾರದ ಈ ‘ಗೋಡೆ’ಯ ಉದ್ದೇಶವನ್ನು ಬಟಾಬಯಲು ಮಾಡುತ್ತದೆ. ‘ಬಡತನಕ್ಕೆ ಗೋಡೆ’ ಕಟ್ಟಿ, ಹೊರಪ್ರಪಂಚದ ಸಂಪರ್ಕವನ್ನು ಕಡಿದು, ಶಾಶ್ವತವಾಗಿ ಅವರನ್ನು ನರಕಕ್ಕೆ ತಳ್ಳುವ ಉದ್ದೇಶವೇ ಕೇಂದ್ರ ಸರಕಾರದ್ದು. ಇದು ಕೇವಲ ಗುಜರಾತ್ ಮಾತ್ರವಲ್ಲ, ಇಡೀ ದೇಶದಲ್ಲೇ ಇಂಥದ್ದೊಂದು ಗೋಡೆ ಕಟ್ಟಿ ಬಡವರನ್ನು, ದುರ್ಬಲರನ್ನು ಸಮಾಜದ ಮುಖ್ಯವಾಹಿನಿಯಿಂದ ತಳ್ಳುವ ಕೆಲಸವನ್ನು ಬಿಜೆಪಿ ಕಳೆದ ಕೆಲವು ವರ್ಷಗಳಿಂದ ನಡೆಸುತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಇದಕ್ಕೊಂದು ಸ್ಪಷ್ಟ ಉದಾಹರಣೆಯಷ್ಟೇ. ಅಸ್ಸಾಂ ಸಮೇತ ದೇಶದಾದ್ಯಂತ ತಲೆಯೆತ್ತುತ್ತಿರುವ ಬಂಧೀಖಾನೆಗಳ ಉದ್ದೇಶವು ಈ ‘ಬಡತನ ನಿರ್ಮೂಲನೆ’ಯನ್ನಷ್ಟೇ ಹೊಂದಿದೆ.

ಇದು ಕೇವಲ ಬಡವರ ಸುತ್ತ ಹೆಣೆಯುವ ಗೋಡೆಗಳಲ್ಲ. ಸರಕಾರದ ದಬ್ಬಾಳಿಕೆಯ ವಿರುದ್ದ ಎದ್ದೇಳುತ್ತಿರುವ ಬಡವರ ಆಕ್ರಂಧನ, ದೀನ ರೋಧನೆಗಳಿಗೂ ಬಿಗಿಯಲಾಗಿರುವ ನಿರಂಕುಶತ್ವದ ಬಲಿಷ್ಟ ಬೇಲಿಗಳಿವು. ಟ್ರಂಪ್ ಕಣ್ಣಿಗೆ ಕಾಣದಂತೆ ಕಟ್ಟಲಾಗಿರುವ ಈ ಗೋಡೆಗಳಾಚೆ ನೆಲಕಚ್ಚುತ್ತಿರುವುದು ಬಡತನವೆಂಬ ಈ ದೇಶದ ಗರ್ಭಗುಡಿಗಳು. ಗೋಡೆ ಕಟ್ಟುವುದರಿಂದ ಸ್ಲಂಗಳು ನಿರ್ಮೂಲನೆಯಾಗಿ ನಿರ್ಮಲ ದೇಶವೊಂದು ನಿರ್ಮಾಣ ವಾಗಲಿದೆಯೆಂದು ಕೇಂದ್ರ ಸರಕಾರ ನಂಬಿದ್ದರೆ ಇದಕ್ಕಿಂತ ದೊಡ್ಡ ಭ್ರಮೆ ಬೇರೇನಿದೆ..?

ಗೋಡೆಗಳು ಕೊಳಚೇರಿಯ ರುಘ್ನ ಚಿತ್ರಣಗಳನ್ನು ಕಣ್ಣಿಗೆ ಕಾಣದಂತೆ ಮರೆಮಾಚಿಡಬಹುದು. ಆದರೆ ಮೂಗಿಗೆ ಬಡಿಯುವ ಅಲ್ಲಿನ ವಾಸನೆಗಳಿಗೆ ಗೋಡೆ ಕಟ್ಟಲಾದೀತೇ..? ಆಳುವ ವರ್ಗದ ವಂಚನೆಯಿಂದ ಕಮರಿ ಹೋದ ಕಂಗಳು ಹರಿಸುವ ನೆತ್ತರ ಕಣ್ಣೀರಿಗೆ ಬೇಲಿ ಹಾಕಲಾದೀತೇ..? ಮೊರೆತವನ್ನುಂಟು ಮಾಡುವ ಅಂತರ್ಗತದ ಶಾಪಕ್ಕೆ ಕಟ್ಟುವ ತಡೆಗೋಡೆಯಾದರೂ ಯಾವ ಸೀಮೆಯದ್ದು..?
ಸರಕಾರದ ವಿರುದ್ದ ಬುಗಿಲೇಳುತ್ತಿರುವ ಸ್ಲಂನೊಳಗಿನ ಆಕ್ರೋಶಗಳಿಗೆ ಮಾತ್ರ ಗೋಡೆಗಳಿಂದ ತಡೆ ಹಾಕಬಹುದೇ ಹೊರತು ಆ ಆಕ್ರೋಶಗಳಿಗೆ ಅಂತ್ಯ ಹಾಡಲು ಸಾಧ್ಯವಿಲ್ಲ.

ಬಡತನ ನಿರ್ಮೂಲನೆಗೆ ಬಿಜೆಪಿ ಸರಕಾರ ಕಂಡು ಕೊಂಡ ದಾರಿ ಗೋಡೆ ನಿರ್ಮಾಣವಾಗಿರಬಹುದು. ಕರಾಳ ಕಾಯ್ದೆಗಳನ್ನು ತಂದು ಕಾನೂನು, ಕಟ್ಟಲೆಗಳ ಹೆಸರಲ್ಲಿ ಸತಾಯಿಸಿ ಅಂತ್ಯ ಕಾಣಿಸುವುದಾಗಿರಬಹುದು. ಆದರೆ ಸ್ವಾತಂತ್ರ್ಯೋತ್ತರದ ಅವಧಿಯಲ್ಲಿ ದೇಶವನ್ನಾಳಿದ ಪ್ರತೀ ಸರಕಾರವೂ ಬಡತನ, ಕೊಳಚೇರಿ ಪ್ರದೇಶಗಳ ನಿರ್ಮಾಣದಲ್ಲಿ ಸಾತ್ವಿಕವೆನಿಸಿದ ಹೆಜ್ಜೆಯನ್ನಿಟ್ಟದ್ದು ಕಾಣಲು ಸಾಧ್ಯವಿಲ್ಲ. ಇಂದಿರಾ ಗಾಂಧಿ ಬಡತನ ನಿರ್ಮೂಲನೆ ಬಗ್ಗೆ ಕಾಳಜಿ ಹೊಂದಿದ್ದರೂ ದೇಶದಲ್ಲಿ ಅತ್ಯಧಿಕ ಸ್ಲಂಗಳು ನೆಲಕಚ್ಚಿ ಬಡವರು ನಿರ್ವಸಿತರಾದದ್ದು ಅವರ ಕಾಲದಲ್ಲೇ. ಆಡಳಿತ ವರ್ಗವು ವ್ಯವಸ್ಥಿತವಾಗಿ ರೂಪಿಸಿರುವ ವಕ್ರವ್ಯೂಹದಿಂದ ಹೊರಬಂದು ಮಾನವ ಸಂವೇದನೆಯ ನೆಲೆಯಲ್ಲಿ ನಿಷ್ಕರ್ಷೆ ಮಾಡದೇ ಹೋದರೆ ಮುಂದೊಂದು ದಿನ ಬಡತನವು ದೇಶದಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆ.

ಹಾಗಂತಾದರೆ, ಬಡತನವೆಂಬ ಗೋಡೆಯೇ ದೇಶವನ್ನು ಹೊರಜಗತ್ತಿಗೆ ಕಾಣದಂತೆ ಬಿಗಿಯಾಗಿ ಆವರಿಸಿಕೊಳ್ಳಲಿದೆ. ಸರಕಾರದ ಅಪದ್ದ ನಡೆಗಳು ಭವಿಷ್ಯದಲ್ಲಿ ಅಂತದ್ದೊಂದು ಅನಾಹುತಕ್ಕೆ ಎಡೆ ಮಾಡದಿರಲೆಂದು ಆಶಿಸೋಣ.

~ಟಿ.ಎಂ ಸ‌ಅದಿ ತಂಬಿನಮಕ್ಕಿ

error: Content is protected !! Not allowed copy content from janadhvani.com