janadhvani

Kannada Online News Paper

‘ಸಹಿಷ್ಣುತೆಯ ವರ್ಷ’ ಇದೇ ಮೊದಲ ಬಾರಿಗೆ ಅಂತರ್ಜನಾಂಗೀಯ ಮಗುವಿಗೆ ಜನನ ಪ್ರಮಾಣಪತ್ರ ನೀಡಿದ ಯುಎಇ

ದುಬೈ: ಸಹಿಷ್ಣುತೆಯ ವರ್ಷದಲ್ಲಿ ನಿರ್ಣಾಯಕ ನಿಲುವಿನೊಂದಿಗೆ ಹಿಂದೂ- ಮುಸ್ಲಿಮ್ ದಂಪತಿಗೆ ಜನಿಸಿದ ಮಗುವಿಗೆ ಜನನ ಪ್ರಮಾಣ ಪತ್ರ ನೀಡಿದ ಯುಎಇ ಕಾನೂನು ತಿದ್ದುಪಡಿ ನಡೆಸಿದೆ.

ವಿವಾಹ ಕಾನೂನಿನ ಪ್ರಕಾರ ಅನಿವಾಸಿಗಳ ಪೈಕಿ ಮುಸ್ಲಿಮ್ ಪುರುಷರಿಗೆ ಅನ್ಯ ಮತೀಯರನ್ನು ಮದುವೆಯಾಗಬಹುದು. ಆದರೆ ಮುಸ್ಲಿಮ್ ಮಹಿಳೆಗೆ ಇತರ ಸಮುದಾಯದವರನ್ನು ವಿವಾಹವಾಗುವಂತಿಲ್ಲ.

2016 ರಲ್ಲಿ ಕೇರಳದ ಕಿರಣ್ ಬಾಬು ಮತ್ತು ಸನಂ ಸಾಬು ಸಿದ್ದೀಕ್ ಕೆರಳದಲ್ಲಿ ವಿವಾಹಿತರಾಗಿದ್ದರು. ಅವರು 2017ರಲ್ಲಿ ದುಬೈ ತಲುಪಿದ್ದು, 2018ರಲ್ಲಿ ಮಗು ಜನಿಸಿದಾಗ ಪೇಚಿಗೀಡಾಗಿದ್ದರು. ತಂದೆ ಹಿಂದೂ ಆದ ಕಾರಣ ಜನನ ಸರ್ಟಿಫಿಕೇಟ್ ನೀಡಲಾಗದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ನಂತರ ಎನ್‌ಒಸಿ ಸರ್ಟಿಫಿಕೇಟ್‌ಗಾಗಿ ಪ್ರಯತ್ನ ಮುಂದುವರಿಯಿತು. ನಾಲ್ಕು ತಿಂಗಳ ವಿಚಾರಣೆ ಬಳಿಕ ಪ್ರಕರಣವನ್ನು ಕೊನೆಗೊಳಿಸಲಾಗಿತ್ತು.

ನಂತರ ಸಾರ್ವಜನಿಕ ಕ್ಷಮಾಪಣೆ ಸಂದರ್ಭದಲ್ಲಿ ಮತ್ತೆ ಪ್ರಯತ್ನ ಆರಂಭಿಸಲಾಯ್ತು.ಭಾರತೀಯ ದೂತಾವಾಸದ ಸಹಾಯದೊಂದಿಗೆ ಮತ್ತೊಮ್ಮೆ ಜನನ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಲಾಗಿದ್ದು, ವಿಷು ಹಬ್ಬದ ಮುನ್ನಾದಿನದಂದು ಯುಎಇ ಅಧಿಕಾರಿಗಳು ಜನನ ಪ್ರಮಾಣ ಪತ್ರವನ್ನು ನೀಡಿದ್ದಾರೆ ಎಂದು ಕಿರಣ್ ತಿಳಿಸಿದ್ದಾರೆ.

ಅನಮ್ತ ಅಸ್ಲಿನ್ ಕಿರಣ್ ಎಂದು ನಾಮಕರಣ ಮಾಡಲಾದ ಮಗು ಮತ್ತು ತಾಯಿ ಸಧ್ಯ ಕೇರಳದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !! Not allowed copy content from janadhvani.com