janadhvani

Kannada Online News Paper

ತೆಲಂಗಾಣ: ಬೇಜವಾಬ್ದಾರಿಯುತ ಮೌಲ್ಯಮಾಪನ- 19 ವಿದ್ಯಾರ್ಥಿಗಳ ಆತ್ಮಹತ್ಯೆ

ಹೈದರಾಬಾದ್: ತೆಲಂಗಾಣ ರಾಜ್ಯ ಶಿಕ್ಷಣ ಮಂಡಳಿ ನಡೆಸುವ 11 ಮತ್ತು 12ನೇ (ಪಿಯುಸಿ) ತರಗತಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಗೊಂದಲದಿಂದಾಗಿ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಉತ್ತಮ ಅಂಕಗಳ ನಿರೀಕ್ಷೆಗಳ ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿನಿಂದ ನಾಪಾಸಾದ ವಿಚಾರ ತಿಳಿದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಾಪಾಸದ ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡುವಂತೆ ಹೈಕೋರ್ಟ್‌ ಆದೇಶಿಸಿದೆ.

ಫಲಿತಾಂಶ ಗೊಂದಲದಿಂದ ರಾಜ್ಯದ ವಿವಿಧೆಡೆ ಈವರೆಗೆ 19 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೋಷಕರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಪರಿಸ್ಥಿತಿಯ ಗಾಂಭೀರ್ಯ ಮನಗಂಡ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌ ವಸ್ತುಸ್ಥಿತಿ ಪರಿಶೀಲನಾ ಸಭೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ನಾಪಾಸದ ಎಲ್ಲ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಉಚಿತ ಮೌಲ್ಯಮಾಪನ ಮತ್ತು ಅಂಕಗಳ ಮರುಎಣಿಗೆಗೆ ಆದೇಶಿಸಿದ್ದಾರೆ.

ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಎ.ಅಶೋಕ್, ಫಲಿತಾಂಶ ಪ್ರಕಟಣೆಯಲ್ಲಿ ಗೊಂದಲವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ‘ಹೆದರಬೇಡಿ, ಸರಿಪಡಿಸುತ್ತೇವೆ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ’ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿ, ಶೀಘ್ರ ವರದಿ ಸಲ್ಲಿಸುವಂತೆ ಸೂಚಿಸಿದೆ. ಫಲಿತಾಂಶ ಗೊಂದಲಕ್ಕೆ ಮಂಡಳಿಯ ಪರವಾಗಿ ಪರೀಕ್ಷೆ ನಡೆಸುವ ಕಂಪನಿಯೇ ಕಾರಣ ಎಂದು ಅಧಿಕಾರಿಗಳು ದೂರಿದ್ದಾರೆ.

ತೆಲಂಗಾಣ ಪರೀಕ್ಷಾ ಮಂಡಳಿ ಏ.18ರಂದು ತನ್ನ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಿತ್ತು. ಪರೀಕ್ಷೆಗೆ ಹಾಜರಾಗಿದ್ದ 9.5 ಲಕ್ಷ ವಿದ್ಯಾರ್ಥಿಗಳ ಪೈಕಿ 3 ಲಕ್ಷ ಮಂದಿ ನಪಾಸಾಗಿದ್ದರು. ರಾಜ್ಯದ ವಿವಿಧೆಡೆ ವಿದ್ಯಾರ್ಥಿಗಳು ಮತ್ತು ಪೋಷಕರು ನಡೆಸುತ್ತಿದ್ದ ಪ್ರತಿಭಟನೆಗೆ ಬಿಜೆಪಿ ಯುವ ಮೋರ್ಚಾ ಬೆಂಬಲ ಘೋಷಿಸಿ, ಬೀದಿಗಿಳಿಯುವುದರೊಂದಿಗೆ ಈ ಪ್ರಕರಣಕ್ಕೆ ರಾಜಕೀಯ ಬಣ್ಣವೂ ಬಂದಿದೆ.

error: Content is protected !! Not allowed copy content from janadhvani.com