janadhvani

Kannada Online News Paper

ಮೋದಿ ತಂದ ಕಪ್ಪು ಪೆಟ್ಟಿಗೆ- ತಕ್ಷಣ ತನಿಖೆ ನಡೆಸುವಂತೆ ಆಗ್ರಹ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ವೇಳೆ ಅವರ ಹೆಲಿಕಾಪ್ಟರ್‌ನಿಂದ ಕೆಳಗಿಳಿಸಿದ ‘ಕಪ್ಪು ಬಣ್ಣದ ಪೆಟ್ಟಿಗೆ ರಹಸ್ಯ’ ಕುರಿತು ತಕ್ಷಣ ತನಿಖೆ ನಡೆಸುವಂತೆ ಚುನಾವಣಾ ಆಯೋಗವನ್ನು ಕಾಂಗ್ರೆಸ್ ಆಗ್ರಹಿಸಿದೆ.

ಭಾನುವಾರ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡ ಆನಂದ ಶರ್ಮಾ ಅವರು, ಈ ಸಂಬಂಧ ವಿಡಿಯೊವೊಂದನ್ನು ಪ್ರದರ್ಶಿಸಿದರು. ಕಪ್ಪು ಟ್ರಂಪ್ ಹೊತ್ತ ಇಬ್ಬರು ವ್ಯಕ್ತಿಗಳು ಹೆಲಿಪ್ಯಾಡ್‌ನಲ್ಲಿ ನಿಲ್ಲಿಸಲಾಗಿದ್ದ ಖಾಸಗಿ ಕಾರಿಗೆ ಅದನ್ನು ವರ್ಗಾಯಿಸುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ. ಮೋದಿ ಅವರು ಹೆಲಿಕಾಪ್ಟರ್‌ನಿಂದ ಇಳಿದ ತಕ್ಷಣವೇ ಈ ಪೆಟ್ಟಿಗೆಯನ್ನು ಕಾರಿಗೆ ಸಾಗಿಸಲಾಗಿದೆ ಎಂದು ಆರೋಪಿಸಲಾಗಿದೆ.

ಪ್ರಧಾನಿಯವರ ಹೆಲಿಕಾಪ್ಟರ್‌ನಲ್ಲಿ ಏನನ್ನು ತುಂಬಿಸಲಾಗಿತ್ತು ಎಂದು ಎಸ್‌ಪಿಜಿ (ವಿಶೇಷ ರಕ್ಷಣಾ ದಳ) ಸ್ಪಷ್ಟಪಡಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಈ ಸಂಬಂಧ ಕರ್ನಾಟಕ ಕಾಂಗ್ರೆಸ್ ಘಟಕವು ಈಗಾಗಲೇ ಚುನಾವನಾ ಆಯೋಗಕ್ಕೆ ದೂರು ನೀಡಿದೆ.

ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಹಾಗೂ ಕೇಂದ್ರ ಸಚಿವರು ಪ್ರಯಾಣಿಸುವ ವಾಹನಗಳನ್ನು ಚುನಾವಣಾ ಆಯೋಗ ತಪಾಸಣೆಗೆ ಒಳಪಡಿಸಬೇಕು ಎಂದು ಶರ್ಮಾ ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com