ಎಚ್ಚರಿಕೆ: ಸೆಲ್ಫಿ ಕ್ಲಿಕ್ಕಿಸಿದರೆ ಕಾದಿದೆ ಗಂಡಾಂತರ-5 ಲಕ್ಷ ದಿರ್ಹಂ ದಂಡ

ಅಬುಧಾಬಿ: ಖಾಸಗಿ ಅಥವಾ ಇನ್ನಿತರ ಸಮಾರಂಭದಲ್ಲಿ ನೀವು ಸ್ನೇಹಿತರೊಂದಿಗೆ ಕ್ಲಿಕ್ಕಿಸುವ ಸೆಲ್ಫಿಗಳು ಕೆಲವೊಮ್ಮೆ ಯುಎಇಯಲ್ಲಿ ನಿಮ್ಮನ್ನು ಗಂಡಾಂತರದಲ್ಲಿ ಸಿಲುಕಿಸುವ ಅಪಾಯವಿದೆ ಎಂದು ಕಾನೂನು ಪರಿಣಿತರು ಎಚ್ಚರಿಕೆ ನೀಡಿದ್ದಾರೆ. ಇಂತಹ ಸೆಲ್ಫಿಗಳಿಂದಾಗಿ 5 ರಿಂದ 10 ಲಕ್ಷ ದಿರ್ಹಂ ವರೆಗೆ (ಇಂದಿನ ಲೆಕ್ಕಾಚಾರ ಪ್ರಕಾರ 1.9 ಕೋಟಿ ರೂ.) ದಂಡ ಪಾವತಿಸಬೇಕಾಗುತ್ತದೆ.

ಸೆಲ್ಫಿಗಳಲ್ಲಿ ಅನಿರೀಕ್ಷಿತವಾಗಿ ಸೆರೆಹಿಡಿಯಲ್ಪಡುವ ಅಪರಿಚಿತರು ನಿಮಗೆ ಗಂಡಾಂತರವನ್ನು ತಂದೊಡ್ಡಲಿದ್ದಾರೆ. ಇಂತಹ ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಯ ಬಿಡುವುದು ಖಾಸಗಿತನದ ಉಲ್ಲಂಘನೆಯಾಗಿ ಪರಿಗಣಿಸಲ್ಪಡುತ್ತದೆ. ಕಾನೂನು ಪ್ರಕಾರ ಅದು ಭಾರೀ ಶಿಕ್ಷೆ ಲಭಿಸುವ ಅಪರಾಧವಾಗಿದ್ದು, ಆರು ತಿಂಗಳು ಜೈಲು ಸಹಿತ ಐದು ಲಕ್ಷ ದಿರ್ಹಂ (ಒಂದು ಕೋಟಿಯಷ್ಟು ರೂ.) ದಂಡ ಪಾವತಿಸಬೇಕಾಗುತ್ತದೆ. ಗರಿಷ್ಟ 10 ಲಕ್ಷ ದಿರ್ಹಂ ವರೆಗೂ ದಂಡದ ಮೊತ್ತ ಹೆಚ್ಚಾಗಲೂ ಬಹುದು.

ಕಳೆದ ಮೂರು ವರ್ಷಗಳಲ್ಲಿ ಇಂತಹ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವುದಾಗಿ ಯುಎಇ ಯ ವಕೀಲರು ಸ್ಪಷ್ಟಪಡಿಸುತ್ತಾರೆ. ಪಾರ್ಟಿ ಮತ್ತಿತರ ಖಾಸಗಿ ಸಮಾರಂಭಗಳಲ್ಲಿ ಕ್ಲಿಕ್ಕಿಸಲಾಗುವ ಸೆಲ್ಫಿಗಳು ಇಂತಹ ಪ್ರಕರಣಗಳಲ್ಲಿ ಅಪಾಯ ತಂದೊಡ್ಡುತ್ತಿದೆ. ಅಚಾನಕ್ಕಾಗಿ ತೆಗೆಯುವುದಾದರೂ ಕಾನೂನಿನ ಪ್ರಕಾರ ಅದು ಅಪರಾಧವಾಗಿದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಯಾವುದೇ ವಿನಾಯಿತಿ ನಿರೀಕ್ಷಿಸುವಂತಿಲ್ಲ ಎಂದು ಕಾನೂನು ಪರಿಣಿತರು ಹೆಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!