janadhvani

Kannada Online News Paper

ನಿಂತು ನೀರು ಕುಡಿದರೆ ಎದುರಾಗಲಿವೆ ಗಂಭೀರ ಆರೋಗ್ಯ ಸಮಸ್ಯೆ

ಮನುಷ್ಯ ಬದುಕಲು ಆಹಾರ ಎಷ್ಟು ಮುಖ್ಯವೋ, ನೀರನ್ನು ಕುಡಿಯುವುದೂ ಅಷ್ಟೇ ಮುಖ್ಯ. ಮಾನವನ ದೇಹದಲ್ಲಿ ಶೇ.75 ರಷ್ಟು ನೀರಿನಾಂಶವಿದೆ ಎಂದು ವೈದ್ಯಕೀಯ ಲೋಕ ಈಗಾಗಲೇ ದೃಢಪಡಿಸಿದೆ. ಒಬ್ಬ ವ್ಯಕ್ತಿಯು ಆರೋಗ್ಯ ಪೂರ್ಣವಾಗಿರಬೇಕಿದ್ದರೆ ದಿನಕ್ಕೆ ಕನಿಷ್ಟ ಅಂದರೂ 6 ಲೀಟರ್ ನೀಡರು ಕುಡಿಯಬೇಕು. ಕಡಿಮೆ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಕೂಡ ಬೀರುತ್ತದೆ. ಅದರಲ್ಲೂ ನಾವು ಹೇಗೆ ನೀರನ್ನು ಕುಡಿಯುತ್ತೇವೆ ಎಂಬುದರ ಮೇಲೆ ಆರೋಗ್ಯ ನಿರ್ಧರಿತವಾಗುತ್ತದೆ.
ಸಾಮಾನ್ಯವಾಗಿ ಹಿರಿಯರು ಕುಳಿತು ನೀರನ್ನು ಕುಡಿಯಿರಿ ಎಂದೇಳುವುದನ್ನು ಕೇಳಿರುತ್ತೀರಿ. ಅಥವಾ ಮನೆಗೆ ಬಂದವರಿಗೆ ಕುಳಿತ ಮೇಲೆ ನೀರು ಕೊಡುವ ಸಂಪ್ರದಾಯವನ್ನು ಎಲ್ಲರೂ ನೋಡುತ್ತೀರಿ. ಇದಕ್ಕೂ ಕೂಡ ಒಂದು ವೈದ್ಯಕೀಯ ಕಾರಣವಿದೆ.

ನಿಂತು ನೀರು ಕುಡಿಯುವುದರಿಂದ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು. ನಾವು ಮಾಡುವ ಇಂತಹ ಸಣ್ಣ ತಪ್ಪುಗಳಿಂದ ಅನೇಕ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಂತಹ ಪ್ರಮುಖ ತೊಂದರೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಅನ್ನನಾಳದ ಸಮಸ್ಯೆ:
ಸಮಾನ್ಯವಾಗಿ ನಿಂತ ಭಂಗಿಯಲ್ಲಿ ನೀರು ಕುಡಿಯುತ್ತೇವೆ. ಈ ವೇಳೆ ನೀರು ಅನ್ನನಾಳದ ಮೂಲಕ ವೇಗವಾಗಿ ಹರಿಯುತ್ತದೆ. ಇದರಿಂದ ಅನ್ನನಾಳದ ಸ್ಪಿಂಕ್ಟರ್ ಮೇಲೆ ನೇರ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ಕ್ಷಿಪ್ರ ಗತಿಯಲ್ಲಿ ನೀರು ದೇಹ ಸೇರುವುದರಿಂದ ನರ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಕುಳಿತುಕೊಂಡು ನೀರು ಕುಡಿಯುವುದು ಉತ್ತಮ.

ಕಿಡ್ನಿಗಳಿಗೆ ಹಾನಿ;
ನಿಂತು ನೀರು ಕುಡಿಯುವುದರಿಂದ ಕಿಡ್ನಿಯು ಕೆಲವು ಬಾರಿ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ನೀರು ಒಮ್ಮೆಲೆ ದೇಹ ಸೇರುವುದರಿಂದ ಕಿಡ್ನಿಯು ನೀರನ್ನು ಸರಿಯಾಗಿ ಸೋಸುವುದಿಲ್ಲ. ಇದರಿಂದ ಮೂತ್ರನಾಳಗಳಿಗೆ ಕಲ್ಮಷ ಪ್ರವೇಶಿಸಿ ರಕ್ತದೊಂದಿಗೆ ಮಿಶ್ರಣವಾಗಬಹುದು. ಇದರಿಂದ ಕಿಡ್ನಿಗೆ ಹಾನಿಯುಂಟಾಗಿ, ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು.

ಹೊಟ್ಟೆಯ ನೋವು:
ನಿಂತ ಭಂಗಿಯಲ್ಲಿ ನೀರು ಕುಡಿದರೆ ರಭಸವಾಗಿ ಅನ್ನನಾಳ ಹಾಗೂ ಹೊಟ್ಟೆ ಕೂಡುವ ಸ್ಥಳದಲ್ಲಿ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದು ಹೊಟ್ಟೆಯಲ್ಲಿರುವ ಆಮ್ಲೀಯ ಜಠರ ರಸವನ್ನು ಮಿಶ್ರಣಗೊಳಿಸಬಹುದು. ಇದರಿಂದ ಸ್ನಾಯುಗಳ ಮೇಲೆ ಒತ್ತಡ ಉಂಟಾಗಿ ಹೊಟ್ಟೆ ನೋವಿಗೂ ಕಾರಣವಾಗಬಹುದು.

ಬಾಯಾರಿಕೆ ತಣಿಯುವುದಿಲ್ಲ:
ನಿಂತು ನೀರು ಕುಡಿಯುವುದಕ್ಕಿಂತಲೂ ಕೂತು ನೀರು ಕುಡಿದರೆ ಬೇಗ ಬಾಯಾರಿಕೆ ತಣಿಯುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಹೀಗಾಗಿ ಕುಳಿತು ನೀರು ಕುಡಿದರೆ ದಣಿವು ಕೂಡ ಶೀಘ್ರ ನಿವಾರಣೆಯಾಗುತ್ತದೆ.

ಸಂಧಿವಾತ ಸಮಸ್ಯೆ:
ನಿಂತುಕೊಂಡು ನೀರು ಕುಡಿದಾಗ ದೇಹದಲ್ಲಿನ ದ್ರವಗಳಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದರಿಂದ ಸಂಧಿವಾತದ ಸಮಸ್ಯೆ ನಿಮ್ಮಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಸ್ನಾನಕ್ಕೂ ಮುನ್ನ ನೀರು ಕುಡಿಯುವುದು ಉತ್ತಮ:
ಸ್ನಾನ ಮಾಡುವುದಕ್ಕಿಂತ ಮುಂಚೆ ನೀರು ಕುಡಿಯುವುದು ಉತ್ತಮ. ಇದರಿಂದ ನರಗಳು ಸಡಿಲಗೊಂಡು ರಕ್ತದೊತ್ತಡ ಕಡಿಮೆಯಾಗುತ್ತದೆ. ಆದರೆ ಬಿಸಿ ನೀರಿನಲ್ಲಿ ಸ್ನಾನ ಮಾಡುವ ಮೊದಲು ತಣ್ಣೀರನ್ನು ಕುಡಿಯಬಾರದು

ಊಟಕ್ಕೂ ಮುಂಚೆ ನೀರು ಕುಡಿಯಿರಿ:
ತಜ್ಞರ ಪ್ರಕಾರ ಊಟದ ಸಮಯದಲ್ಲಿ ನೀರು ಕುಡಿಯುವುದು ಒಳ್ಳೆಯದಲ್ಲ. ಆಹಾರ ಸೇವಿಸುವುದಕ್ಕಿಂತಲೂ ಮುನ್ನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಊಟ ಮಾಡುವ 20-30 ನಿಮಿಷ ಮೊದಲು ನೀರು ಕುಡಿಯುವುದು ತುಂಬಾ ಒಳ್ಳೆಯದು. ಇದರ ಹೊರತಾಗಿ ಊಟ ಆದ ಮೇಲೆ ನೀರು ಕುಡಿಯಬಾರದು. ಬದಲಾಗಿ ಅರ್ಧ ಗಂಟೆ ಬಳಿಕ ನೀರು ಕುಡಿದರೆ ಜೀರ್ಣಗೊಂಡ ಆಹಾರಗಳನ್ನು ಕರುಳುಗಳು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಹಾಗೆಯೇ ಒಂದೇ ಗುಟುಕಿನಲ್ಲಿ ನೀರು ಕುಡಿಯುವ ಪ್ರಯತ್ನ ಮಾಡಬೇಡಿ. ಸಣ್ಣ ಲೋಟದಲ್ಲಿನ ನೀರನ್ನು ಕನಿಷ್ಠ ಮೂರು ಗುಟುಕಾಗಿ ಕುಡಿಯುವುದು ಆರೋಗ್ಯದ ದೃಷ್ಟಿಯಲ್ಲಿ ಉತ್ತಮ.

error: Content is protected !! Not allowed copy content from janadhvani.com