ಲೋಕಸಭಾ ಚುನಾವಣೆ: ಬಿರುಸಿನ ಮತಯಾಚನೆ

ಬೆಂಗಳೂರು‌:- ರಾಜ್ಯದಲ್ಲಿ 2 ಹಂತಗಳಲ್ಲಿ ನಡೆಯಲಿರುವ 28 ಲೋಕಸಭಾ ಕ್ಷೇತ್ರಗಳ ಚುನಾವಣೆಯನ್ನು ಪ್ರತಿಷ್ಠೆ ಪ್ರಶ್ನೆಯಾಗಿ ಪರಿಗಣಿಸಿರುವ ಜೆಡಿಎಸ್-ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ನಾಳೆಯಿಂದಲೇ ಬಿರು ಬಿಸಿಲನ್ನೂ ಲೆಕ್ಕಿಸದೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯವನ್ನು ಸುತ್ತುವ ಕಾರ್ಯಕ್ಕೆ ಮುಂದಾಗಲಿದ್ದು, ಮತದಾರರ ಮನೆಗಳಿಗೆ ಎಡತಾಕಿ ಮತಯಾಚನೆಯಲ್ಲಿ ತೊಡಗಲಿದ್ದಾರೆ.

ಏ. 18 ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಹೆಚ್ಚು ಕಡಿಮೆ 2 ವಾರಗಳಷ್ಟೇ ಪ್ರಚಾರಕ್ಕೆ ಸಮಯಾವಕಾಶ ದೊರೆಯಲಿದ್ದು, ಈ ಸಂದರ್ಭದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಸರ್ವ ರೀತಿಯ ಪ್ರಯತ್ನಗಳನ್ನು ಮಾಡಲಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳ ಆಯ್ಕೆ ವಿಚಾರ ಇತ್ಯರ್ಥಗೊಂಡಿದ್ದು, ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ರಾಜ್ಯಮಟ್ಟದಲ್ಲಿ ನಾಯಕರ ನಡುವೆ ಒಮ್ಮತ ಏರ್ಪಟ್ಟಿದ್ದರೂ ಕೆಲವು ಕ್ಷೇತ್ರಗಳಲ್ಲಿ ತಳಮಟ್ಟದ ಕಾರ್ಯಕರ್ತರಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹೊಂದಾಣಿಕೆ ಸಾಧ್ಯವಾಗಿಲ್ಲ. ಆದರೂ ಸಣ್ಣ-ಪುಟ್ಟ ವಿಚಾರಗಳನ್ನು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಉಭಯ ಪಕ್ಷಗಳ ನಾಯಕರು ಫರ್ಮಾನು ಹೊರಡಿಸಿದ್ದಾರೆ. ಇದು ಎಷ್ಟರಮಟ್ಟಿಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈ ನಡುವೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಇಂದು ರಾಜ್ಯಕ್ಕೆ ಭೇಟಿ ನೀಡಿ ಬೆಂಗಳೂರಿನಲ್ಲಿ ಸಂಜೆ ನಡೆದ ಬೃಹತ್ ಪರಿವರ್ತನಾ ಱ್ಯಾಲಿಯಲ್ಲಿ ಭಾಗಿಯಾಗಿದ್ದು, ಇದೇ ಱ್ಯಾಲಿಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮುಖಂಡರಾದ ಸಿದ್ದರಾಮಯ್ಯ ಮುಂತಾದ ನಾಯಕರು ಭಾಗವಹಿಸಿ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಜಂಟಿ ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರಮೋದಿ ರಾಜ್ಯಕ್ಕೆ 7 ರಂದು ಭೇಟಿ ನೀಡಲಿದ್ದು, ಮೈಸೂರು ಮತ್ತು ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಮುಖಂಡರಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್ ಮತ್ತಿತರ ನಾಯಕರು ಈಗಾಗಲೇ ರಾಜ್ಯಮಟ್ಟದಲ್ಲಿ ಪ್ರಚಾರವನ್ನು ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!