janadhvani

Kannada Online News Paper

ಅಮೇಥಿ ಜೊತೆಗೆ ವಯನಾಡ್‌ನಿಂದಲೂ ರಾಹುಲ್ ಕಣಕ್ಕೆ

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿಯ ಜೊತೆಗೆ ಕೇರಳದ ವಯನಾಡ್‌ನಿಂದಲೂ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್ ನಾಯಕ ಎ.ಕೆ.ಆಂಟನಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ಪ್ರಕಟಿಸಿದರು. ರಾಹುಲ್‌ ಗಾಂಧಿ ಎರಡನೇ ಕ್ಷೇತ್ರವಾಗಿ ಯಾವುದನ್ನು ಆರಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಕೆಲ ದಿನಗಳಿಂದ ಚಾಲ್ತಿಯಲ್ಲಿತ್ತು. ವಯನಾಡ್‌ ಕ್ಷೇತ್ರ ಅಂತಿಮವಾಗುವುದರೊಂದಿಗೆ ಈ ಚರ್ಚೆಗೆ ತೆರೆ ಬಿದ್ದಿದೆ.

2009ರಲ್ಲಿ ಕೇರಳದಲ್ಲಿ ವಯನಾಡ್ ಲೋಕಸಭಾ ಕ್ಷೇತ್ರ ರಚನೆಯಾಗಿತ್ತು. ಕಾಂಗ್ರೆಸ್‌ನ ಭದ್ರಕೋಟೆ ಎನಿಸಿರುವ ವಯನಾಡ್‌ನಲ್ಲಿ 2009 ಮತ್ತು 2014ರಲ್ಲಿ ಕಾಂಗ್ರೆಸ್ ನಾಯಕ ಎಂ.ಐ.ಶಹನವಾಜ್ ಜಯಗಳಿಸಿದ್ದರು.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ವಯನಾಡ್ ಕ್ಷೇತ್ರದಲ್ಲಿ ಹಳ್ಳಿಗಳ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ಇಲ್ಲಿಂದ ಸ್ಪರ್ಧಿಸಿದರೆ ನೆರೆಯ ರಾಜ್ಯಗಳ ಮೇಲೆಯೂ ಪ್ರಭಾವ ಬೀರಬಹುದು ಎನ್ನುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ.

‘ರಾಹುಲ್ ಗಾಂಧಿ ವಯನಾಡ್‌ನಿಂದ ಸ್ಪರ್ಧಿಸಬಹುದು’ ಎಂದು ಕಳೆದವಾರವಷ್ಟೇ ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಹೇಳಿಕೆ ನೀಡಿದ್ದರು. ‘ನಾವು ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೆವು. ಕಳೆದ ವಾರ ಕೇರಳಕ್ಕೆ ಭೇಟಿ ನೀಡಿದ್ದಾಗಲೂ ಮತ್ತೊಮ್ಮೆ ನೆನಪಿಸಿದ್ದೆವು’ ಎಂದು ಕೇರಳ ಘಟಕದ ಅಧ್ಯಕ್ಷರು ಈಚೆಗೆ ಹೇಳಿದ್ದರು.

error: Content is protected !! Not allowed copy content from janadhvani.com